ಆಸ್ಪತ್ರೆ ಮುಂದೆ ಶವ ಇಟ್ಟು ಧರಣಿ

ಭಾನುವಾರ, ಮಾರ್ಚ್ 24, 2019
32 °C
ವೈದ್ಯೆಯ ನಿರ್ಲಕ್ಷ್ಯದಿಂದ ಮಹಿಳೆಯ ಸಾವು– ಕುಟುಂಬಸ್ಥರ ಆರೋಪ, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಪ್ರತಿಭಟನಾಕಾರರ ಆಗ್ರಹ

ಆಸ್ಪತ್ರೆ ಮುಂದೆ ಶವ ಇಟ್ಟು ಧರಣಿ

Published:
Updated:
Prajavani

ಚಿಕ್ಕಬಳ್ಳಾಪುರ: ಹೊಟ್ಟೆ ನೋವಿನ ಚಿಕಿತ್ಸೆಗಾಗಿ ದಾಖಲಾದ ಮಹಿಳೆಗೆ ಸ್ತ್ರೀರೋಗ ತಜ್ಞೆ ಡಾ.ರೇಣುಕಾ ಅವರು ಅನಗತ್ಯವಾಗಿ ಶಸ್ತ್ರಚಿಕಿತ್ಸೆ ಮಾಡಿ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಬಿಸೇಗಾರಹಳ್ಳಿ ಗ್ರಾಮಸ್ಥರು ಮಂಗಳವಾರ ಮೃತ ಮುನಿರತ್ನಮ್ಮ (25) ಎಂಬುವರ ಶವವನ್ನು ಜಿಲ್ಲಾ ಆಸ್ಪತ್ರೆ ಮುಂದಿಟ್ಟು ಧರಣಿ ನಡೆಸಿದರು.

ಯಲಹಂಕದ ಆಸ್ಪತ್ರೆಯೊಂದರಲ್ಲಿ ಮಂಗಳವಾರ ಬೆಳಿಗ್ಗೆ ಮುನಿರತ್ನಮ್ಮ ಅವರು ಮೃತಪಟ್ಟಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಮುನಿರತ್ನಮ್ಮ ಅವರ ಶವವನ್ನು ನಗರಕ್ಕೆ ತೆಗೆದುಕೊಂಡು ಬಂದ ಅವರ ಸಂಬಂಧಿಕರು, ಜಿಲ್ಲಾ ಆಸ್ಪತ್ರೆ ಕಟ್ಟಡದ ಮುಖ್ಯ ಪ್ರವೇಶದ್ವಾರದ ಎದುರು ಇಟ್ಟು, ಈ ಅನಾಹುತಕ್ಕೆ ಡಾ.ರೇಣುಕಾ ಅವರೇ ನೇರ ಹೊಣೆ. ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿ ಧರಣಿ ಕುಳಿತರು. ಜಿಲ್ಲಾಧಿಕಾರಿ ಅವರ ಸ್ಥಳಕ್ಕೆ ಬರಬೇಕು ಮನವಿ ಆಲಿಸಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ಮುನಿರತ್ನಮ್ಮ ಅವರ ಸಹೋದರ ವೆಂಕಟೇಶ್‌, ‘ಮುನಿರತ್ನಮ್ಮನಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣಕ್ಕೆ ಮಾ.10 (ಭಾನುವಾರ) ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದಾಗ, ಪರಿಶೀಲನೆ ಮಾಡಿದ ಡಾ.ರೇಣುಕಾ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಕ್ಯಾನಿಂಗ್‌ ಮಾಡಿಸಲು ಸೂಚಿಸಿದ್ದರು. ಅದರ ವರದಿ ನೋಡಿ ಹೊಟ್ಟೆಯಲ್ಲಿ ಮಗು ಅಡ್ಡ ತಿರುಗಿ ಪಕ್ಕಕ್ಕೆ ಸರಿದಿದೆ. ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಬೇಕು ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯವಿದೆ ಎಂದು ತಿಳಿಸಿದರು’ ಎಂದು ಹೇಳಿದರು.

‘ರಕ್ತ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಭಾವ ನಾರಾಯಣಸ್ವಾಮಿ ಅವರನ್ನು ನಗರದ ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಿದ ಡಾ.ರೇಣುಕಾ ಅವರು, ರಕ್ತ ಪರೀಕ್ಷೆ ವರದಿ ತಂದು ತೋರಿಸುವ ಮುನ್ನವೇ ಯಾರ ಅನುಮತಿಯನ್ನೂ ಪಡೆದುಕೊಳ್ಳದೆ ಜಿಲ್ಲಾ ಆಸ್ಪತ್ರೆಯಲ್ಲಿ ತರಾತುರಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದರು. ಬಳಿಕ ಮುನಿರತ್ನಮ್ಮ ಸ್ಥಿತಿ ಗಂಭೀರವಾಗಿದೆ. ಕೂಡಲೇ ಬೆಂಗಳೂರಿನ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ದಾಖಲಿಸುವಂತೆ ಕಳುಹಿಸಿಕೊಟ್ಟರು’ ಎಂದು ಆರೋಪಿಸಿದರು.

‘ರಾಮಯ್ಯ ಆಸ್ಪತ್ರೆಯ ವೈದ್ಯರು ಮುನಿರತ್ನಮ್ಮ ಅವರ ಪರಿಸ್ಥಿತಿ ಅವಲೋಕಿಸಿ ದಾಖಲಿಸಿಕೊಳ್ಳಲು ನಿರಾಕರಿಸಿ, ಯಲಹಂಕದ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಆದರೆ ಅಲ್ಲಿನ ವೈದ್ಯರು ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಉಳಿಯುವ ಭರವಸೆ ಇಲ್ಲ ಎಂದು ಹೇಳಿದರು. ನಮ್ಮ ಮನವಿ ಮೆರೆಗೆ ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಿದರು. ಮಂಗಳವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಮುನಿರತ್ನಮ್ಮ ಮೃತಪಟ್ಟರು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಸಂತೋಷ್‌ ಬಾಬು ಅವರು ಆಸ್ಪತ್ರೆಗೆ ಭೇಟಿ ನೀಡಿ ಪ್ರತಿಭಟನಾಕಾರರ ಅಹವಾಲು ಆಲಿಸಿ, ಆಸ್ಪತ್ರೆಯ ಮುಖ್ಯಸ್ಥರಾದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್‌ ಅವರಿಂದ ಮಾಹಿತಿ ಪಡೆದರು.

ಬಳಿಕ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ‘ಘಟನೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ, ಮೃತರ ಕುಟುಂಬಕ್ಕೆ ಕಾನೂನು ರೀತಿ ಪರಿಹಾರ ಕೊಡಿಸುವ ಜತೆಗೆ ನನ್ನ ಒಂದು ದಿನದ ಸಂಬಳವನ್ನು ವೈಯಕ್ತಿಕ ಪರಿಹಾರವಾಗಿ ನೀಡುವೆ’ ಎಂದು ತಿಳಿಸಿದರು.

ಈ ವೇಳೆ ಗುರುದತ್ ಹೆಗಡೆ ಅವರು ಸಹ ಒಂದು ದಿನದ ಸಂಬಳ ನೀಡುವುದಾಗಿ ಹೇಳಿ, ಧರಣಿ ಕೈಬಿಡುವಂತೆ ಮನ ಒಲಿಸಿದರು. ಬಳಿಕ ರಾತ್ರಿ 7 ಗಂಟೆ ಸುಮಾರಿಗೆ ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಂ.ಮುನೇಗೌಡ, ಕೆ.ಸಿ.ರಾಜಾಕಾಂತ್‌, ಮುಖಂಡರಾದ ವೆಂಕಟರಮಣಪ್ಪ, ಜೀವಿಕಾ ರತ್ನಮ್ಮ, ಗೋಪಾಲ, ಮುನಿಕೃಷ್ಣ, ಮುನಿಹನುಮಪ್ಪ, ನಾರಾಯಣಸ್ವಾಮಿ, ಪಿಳ್ಳ ಆಂಜನಪ್ಪ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮೃತ ಮುನಿರತ್ನಮ್ಮ ಅವರ ಪತಿಯ ದೂರಿನ ಮೆರೆಗೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !