ವಿದರ್ಭಕ್ಕೆ ಸೋಲು, ಕರ್ನಾಟಕ ತಂಡಕ್ಕೆ ಪ್ರಥಮ ಫೈನಲ್

ಶನಿವಾರ, ಮಾರ್ಚ್ 23, 2019
24 °C
ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್:

ವಿದರ್ಭಕ್ಕೆ ಸೋಲು, ಕರ್ನಾಟಕ ತಂಡಕ್ಕೆ ಪ್ರಥಮ ಫೈನಲ್

Published:
Updated:
Prajavani

ಇಂದೋರ್: ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡದ ಅಜೇಯ ಓಟಕ್ಕೆ ತಡೆಯೊಡ್ಡಲು ‘ರಣಜಿ ಚಾಂಪಿಯನ್’ ವಿದರ್ಭ ತಂಡಕ್ಕೂ ಸಾಧ್ಯವಾಗಲಿಲ್ಲ.

ಮಂಗಳವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್‌ನ ಕೊನೆಯ ಪಂದ್ಯದಲ್ಲಿ ವಿದರ್ಭ ಎದುರು ಆರು ವಿಕೆಟ್‌ಗಳಿಂದ ಗೆದ್ದ ಕರ್ನಾಟಕ ಫೈನಲ್‌ಗೆ ಲಗ್ಗೆ ಇಟ್ಟಿತು. ಕರ್ನಾಟಕ ತಂಡಕ್ಕೆ ಇದು ಚೊಚ್ಚಲ ಫೈನಲ್ ಪಂದ್ಯವಾಗಿದೆ. 

ಗುರುವಾರ ಇಲ್ಲಿಯ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹೋರಾಟದಲ್ಲಿ ಮನೀಷ್ ಬಳಗವು ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.

ಎಮೆರಾಲ್ಡ್‌ ಹೈಟ್ಸ್‌ ಇಂಟರ್‌ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಅಪೂರ್ವ್ ವಾಂಖೆಡೆ (56; 41ಎಸೆತ, 3ಬೌಂಡರಿ, 3ಸಿಕ್ಸರ್) ಮತ್ತು ಅಕ್ಷಯ್ ಕರ್ಣೇವರ್ (33;27ಎಸೆತ, 2ಬೌಂಡರಿ, 1ಸಿಕ್ಸರ್) ಅವರ ಆಟದ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 138 ರನ್‌ ಗಳಿಸಿತು.

ಕರ್ನಾಟಕ ತಂಡವು ರೋಹನ್ ಕದಂ (39; 37ಎ, 3ಬೌಂಡರಿ) ಮತ್ತು ಮನೀಷ್ ಪಾಂಡೆ (ಔಟಾಗದೆ 49; 35ಎಸೆತ, 3ಬೌಂಡರಿ, 2 ಸಿಕ್ಸರ್) ಅವರ ಮಿಂಚಿನ ಆಟದಿಂದ 19.2 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 140 ರನ್ ಗಳಿಸಿ ಗೆದ್ದಿತು.

ಇನಿಂಗ್ಸ್ ಆರಂಭಿಸಿದ ಉಮೇಶ್: ವಿದರ್ಭ ತಂಡವು ಅಥರ್ವ ತಾಯ್ಡೆ ಜೊತೆಗೆ ಮಧ್ಯಮವೇಗಿ ಉಮೇಶ್ ಯಾದವ್  ಅವರನ್ನು  ಆರಂಭಿಕ  ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಸಿ ಅಚ್ಚರಿ ಮೂಡಿಸಿತು. ಆದರೆ, ಉಮೇಶ್ ಮೊದಲ ಓವರ್‌ನಲ್ಲಿಯೇ ವಿನಯ ಕುಮಾರ್‌ ಬೌಲಿಂಗ್‌ನಲ್ಲಿ ಔಟಾದರು.

ನಂತರ ಬಂದವರೂ ಹೆಚ್ಚು ಹೊತ್ತು ಆಡಲಿಲ್ಲ. ಇದರಿಂದಾಗಿ ತಂಡವು 46 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದು ಕೊಂಡಿತ್ತು. ಆದರೆ, ಅಪೂರ್ವ್ ಮತ್ತು ಕರ್ಣೇವರ್ ಆರನೇ ವಿಕೆಟ್‌ಗೆ 66 ರನ್‌ ಗಳಿಸಿದರು. ಇದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು.

ಕರ್ನಾಟಕ ತಂಡವು ಆರಂಭ ದಲ್ಲಿ ಬಿ.ಆರ್. ಶರತ್ ವಿಕೆಟ್ ಕಳೆದು ಕೊಂಡಿತು. ಇಡೀ ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಿರುವ ಬೆಳ ಗಾವಿಯ ರೋಹನ್ ಕದಂ ಈ ಪಂದ್ಯದಲ್ಲಿಯೂ ಚೆನ್ನಾಗಿ ಆಡಿದರು.  ಮಯಂಕ್ ಅಗರವಾಲ್ ಅಲ್ಪ ಕಾಣಿಕೆ ನೀಡಿದರು.  

ಹತ್ತನೇ ಓವರ್‌ನಲ್ಲಿ ರೋಹನ್ ಔಟಾದಾಗ ತಂಡವು ಮೂರು ವಿಕೆಟ್ ಕಳೆದುಕೊಂಡು  68 ರನ್ ಗಳಿಸಿತ್ತು.  ಇದರಿಂದಾಗಿ ಸ್ವಲ್ಪ ಆತಂಕ ಮೂಡಿತ್ತು.

ಕ್ರೀಸ್‌ನಲ್ಲಿದ್ದ ಕರುಣ್ ನಾಯರ್ (24 ರನ್) ಅವರೊಂದಿಗೆ ಜೊತೆಗೂಡಿದ ನಾಯಕ ಪಾಂಡೆ ಬೀಸಾಟ ಆರಂಭಿಸಿದರು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 35 ರನ್‌ ಸೇರಿಸಿದರು. ಮೊತ್ತವು ನೂರರ ಗಡಿ ದಾಟಿದ ಮೇಲೆ ಕರುಣ್ ಔಟಾದರು. ನಂತರ ಮನೀಷ್ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !