ನಳಿನ್‌ಕುಮಾರ್‌ ಕಟೀಲ್‌ ವಿರುದ್ಧ ಕ್ರಮಕ್ಕೆ ಐವನ್‌ ಆಗ್ರಹ

ಗುರುವಾರ , ಮಾರ್ಚ್ 21, 2019
26 °C
ಟ್ವಿಟರ್‌ನಲ್ಲಿ ಮತ ಯಾಚನೆಗೆ ವಾಯುದಾಳಿ ವಿಷಯ ಬಳಕೆ

ನಳಿನ್‌ಕುಮಾರ್‌ ಕಟೀಲ್‌ ವಿರುದ್ಧ ಕ್ರಮಕ್ಕೆ ಐವನ್‌ ಆಗ್ರಹ

Published:
Updated:
Prajavani

ಮಂಗಳೂರು: ಭಯೋತ್ಪಾದಕರ ಮೇಲೆ ವಾಯುಪಡೆ ನಡೆಸಿದ ದಾಳಿಯ ವಿಚಾರವನ್ನು ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್‌ ಕಟೀಲ್‌ ಟ್ವಿಟ್ಟರ್‌ನಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದು, ಅವರ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್‌ ಡಿಸೋಜ ಆಗ್ರಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಳಿನ್‌ಕುಮಾರ್‌ ಅವರು ಮಾರ್ಚ್‌ 11ರ ರಾತ್ರಿ 10.16ಕ್ಕೆ ತಮ್ಮ ವೈಯಕ್ತಿಕ ಟ್ವಿಟರ್‌ ಖಾತೆಯ ಮೂಲಕ ‘ರಾತ್ರಿ 3 ಗಂಟೆಗೆ ಶತ್ರು ದೇಶಕ್ಕೆ ನುಗ್ಗಿ ಹೊಡೆಯುವಂತೆ ಆದೇಶ ನೀಡುವವರಿಗೆ ಮತ ಹಾಕಬೇಕೆ ಹೊರತು, ರಾತ್ರಿ 3 ಗಂಟೆಗೆ ಉಗ್ರರಿಗಾಗಿ ಸುಪ್ರೀಂ ಕೋರ್ಟ್‍ನ ಬಾಗಿಲು ತೆರೆಸುವವರಿಗಲ್ಲಾ... ಮೋದಿ -ಮತ್ತೊಮ್ಮೆ ’ ಎಂದು ಟ್ವೀಟ್‌ ಮಾಡಿದ್ದಾರೆ. ಇದು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆ ಮತ್ತು ಸೇನಾಪಡೆಗಳ ಸಾಧನೆಯನ್ನು ಮತಯಾಚನೆಗೆ ಬಳಸಿಕೊಂಡಿರುವ ಹೀನ ಕೃತ್ಯ’ ಎಂದು ದೂರಿದರು.

ದೇಶದ ಸೇನಾಪಡೆಗಳು ಮತ್ತು ಯೋಧರಿಗೆ ಬಿಜೆಪಿಗೆ ಮಾತ್ರ ಸೀಮಿತವಲ್ಲ. ದೇಶದ ರಕ್ಷಣೆಗಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿರುವ ಯೋಧರ ವಿಚಾರವನ್ನು ಮತ ಯಾಚನೆಗಾಗಿ ಬಿಜೆಪಿ ಬಳಸಿಕೊಳ್ಳುತ್ತಿರುವುದು ಖಂಡನೀಯ. ಸೇನೆಯ ವಿಚಾರವನ್ನು ನಳಿನ್‌ಕುಮಾರ್‌ ಅವರು ಚುನಾವಣೆಯಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ದೇಶದ ಸೈನಿಕರ ಕುಟುಂಬಗಳನ್ನು ಬೀದಿಗೆ ತಳ್ಳಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರಕ್ಕೆ ಸಲ್ಲಬೇಕು. ಈ ಬಾರಿ ಬಿಜೆಪಿಯನ್ನು ಕರ್ನಾಕಟದ ಕರಾವಳಿಯಿಂದ ಕಿತ್ತೊಗೆಯಲ್ಲಿ ಜನರು ಸಿದ್ಧರಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ– ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುವುದು ನಿಶ್ಚಿತ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಯಪ್ರಕಾಶ್ ರೈ, ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್, ಕೆಪಿಸಿಸಿ ಸದಸ್ಯೆ ಯಶೋದಾ, ಡಿಸಿಸಿ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !