ಸುನಿಲ್ ಚೆಟ್ರಿ ಬ್ಯಾಟಿಂಗ್; ಕೊಹ್ಲಿ ಕೋಚಿಂಗ್!

ಶುಕ್ರವಾರ, ಏಪ್ರಿಲ್ 26, 2019
32 °C
ಐಪಿಎಲ್: ಚಿನ್ನಸ್ವಾಮಿಯಲ್ಲಿ ಐಎಸ್‌ಎಲ್‌ ಚಾಂಪಿಯನ್ ಕ್ಯಾಪ್ಟನ್‌ ಬ್ಯಾಟಿಂಗ್

ಸುನಿಲ್ ಚೆಟ್ರಿ ಬ್ಯಾಟಿಂಗ್; ಕೊಹ್ಲಿ ಕೋಚಿಂಗ್!

Published:
Updated:
Prajavani

ಬೆಂಗಳೂರು: ಕಾರ್ಪೊರೆಟ್ ಲೀಗ್‌ ಟೂರ್ನಿಗಳಲ್ಲಿ ಈಗ ಬೆಂಗಳೂರಿನ ತಂಡಗಳದ್ದೇ ಪಾರುಪತ್ಯ. ಕಬಡ್ಡಿ, ಬ್ಯಾಡ್ಮಿಂಟನ್ ಮತ್ತು ಮೂರು ದಿನಗಳ ಹಿಂದಷ್ಟೇ ಫುಟ್‌ಬಾಲ್‌ನಲ್ಲಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದು ಇಲ್ಲಿಯ ತಂಡಗಳು. ಅದರಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ನಲ್ಲಿಯೂ ಈ ಸಲ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಗೆಲ್ಲುವ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ.

ಅದಕ್ಕಾಗಿ ತಂಡದ ಆಟಗಾರರನ್ನು ಹುರಿದುಂಬಿಸಲು ಮಂಗಳವಾರ ಮಧ್ಯಾಹ್ನ ಚಿನ್ನಸ್ವಾಮಿ ಅಂಗಳದಲ್ಲಿ ಬೆಂಗಳೂರು ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಬಂದಿದ್ದರು. ಹೋದ ಭಾನುವಾರ ರಾತ್ರಿ ಮುಂಬೈನಲ್ಲಿ ನಡೆದಿದ್ದ ಇಂಡಿಯನ್ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿಯ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಸಹಮಾಲೀಕರಾಗಿರುವ ಎಫ್‌ಸಿ ಗೋವಾ ತಂಡವನ್ನು ಚೆಟ್ರಿ ಬಳಗವು ಮಣಿಸಿ ಟ್ರೋಫಿ ಗೆದ್ದಿತ್ತು. ಆದರೆ, ಚಿನ್ನಸ್ವಾಮಿ ಅಂಗಳದಲ್ಲಿ ಅವರ ಸ್ನೇಹ, ಸಲುಗೆ ನೋಡುಗರ ಕಂಗಳಿಗೆ  ಹೋಳಿಹಬ್ಬದ ರಂಗು ತುಂಬಿದ್ದು ಸುಳ್ಳಲ್ಲ.

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ  ನೀಡಿದ ಬ್ಯಾಟ್, ಕೈಗವಸುಗಳನ್ನು ಪಡೆದ ಚೆಟ್ರಿ ಬ್ಯಾಟಿಂಗ್ ಮಾಡಿದರು. ಅವರಿಗೆ ವಿರಾಟ್ ಮಾರ್ಗದರ್ಶನ ಮಾಡಿದ್ದು ವಿಶೇಷವಾಗಿತ್ತು. ಹೆಲ್ಮೆಟ್‌, ಪ್ಯಾಡ್, ಕೈಗವಸುಗಳನ್ನು ಧರಿಸಿ ಬ್ಯಾಟ್ ಹಿಡಿದ ಅವರ ಮುಖದಲ್ಲಿ ತುಸು ಆತಂಕದ ಛಾಯೆ ಇತ್ತು. ಆರ್‌ಸಿಬಿಯ ಬೌಲರ್‌ಗಳು ನಿಧಾನವಾಗಿ ಚೆಂಡನ್ನು ಅವರತ್ತ ಎಸೆದಾಗ ಬ್ಯಾಟ್‌ನಿಂದ ಹೊಡೆಯುವ ಪ್ರಯತ್ನ ಮಾಡಿದರು. ಯಶಸ್ವಿಯೂ ಆದರು. ನಂತರ ಹೆಲ್ಮೆಟ್‌ ತೆಗೆದಿಟ್ಟು ಕೆಲ ಹೊತ್ತು ಬ್ಯಾಟಿಂಗ್ ಮಾಡಿ ಪ್ಯಾಡ್‌ ಬಿಚ್ಚಿಟ್ಟರು.

ತಮ್ಮ ಕಾಲ್ಚಳಕ ಮತ್ತು  ಶಾಂತಚಿತ್ತದ ನಾಯಕತ್ವದ ಮೂಲಕ ಭಾರತ ತಂಡ ಮತ್ತು ಬಿಎಫ್‌ಸಿಗೆ ಹಲವು ಮಹತ್ವದ ಗೆಲುವುಗಳನ್ನು ತಂದುಕೊಟ್ಟ ಹೆಗ್ಗಳಿಕೆ ಚೆಟ್ರಿಯದ್ದು.  ಆರ್‌ಸಿಬಿ ತಂಡದ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್, ಯಜುವೇಂದ್ರ ಚಾಹಲ್, ಉಮೇಶ್ ಯಾದವ್ ಮತ್ತಿತರ ಆಟಗಾರರೊಂದಿಗೆ ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ಅಭ್ಯಾಸದಲ್ಲಿಯೂ ಚೆಟ್ಟಿ ಪಾಲ್ಗೊಂಡರು. ಹೋದ ವರ್ಷ ಏಷ್ಯಾ ಕಪ್ ಫುಟ್‌ಬಾಲ್ ಪಂದ್ಯವನ್ನು ಬೆಂಬಲಿಸಿ ಎಂದು ಚೆಟ್ರಿಯವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾಗ ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದರು. ಆಗಿನಿಂದಲೂ ಕೊಹ್ಲಿ ಮತ್ತು ಚೆಟ್ರಿ ಅವರ ಸ್ನೇಹ ಗಾಢವಾಗಿದೆ.

ಐಪಿಎಲ್ ಪಂದ್ಯಗಳಲ್ಲಿ ಶ್ವಾನಗಳಿಗೆ ‘ಡಾಗ್‌ಔಟ್’

ತನ್ನ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕ ಬೆಸೆಯುವ ಉದ್ದೇಶದಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಈ ಬಾರಿ ವಿನೂತನ ಯೋಜನೆಯೊಂದನ್ನು ಮಾಡಿದೆ. ಇದು ಶ್ವಾನಪೋಷಕರಿಗೆ ಸಂತಸದ ವಿಷಯವಾಗಿದೆ.

ಹೌದು: ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಐಪಿಎಲ್ ಪಂದ್ಯಗಳಲ್ಲಿ ‘ಡಾಗ್‌ಔಟ್’ ನಿರ್ಮಿಸಲಾಗುತ್ತಿದೆ. ಪಂದ್ಯ ವೀಕ್ಷಿಸಲು ಬರುವವವರು ತಮ್ಮ ಸಾಕುನಾಯಿಗಳನ್ನೂ ಕರೆತರಬಹುದಾಗಿದೆ. ಅದಕ್ಕಾಗಿ ವಿಶೇಷ ವ್ಯವಸ್ಥೆ ಇರುವ ಗ್ಯಾಲರಿಯನ್ನು ಇಲ್ಲಿ ನಿರ್ಮಿಸಲಾಗುತ್ತಿದೆ.

‘ಪೆಟ್ ಕೇರ್ ಪರಿಣತರಾದ ಅಶಿತಾ ಮ್ಯಾಥ್ಯೂ, ರಾಶಿ ನಾರಂಗ್ ಮತ್ತು ರಿಧಿಮಾ ಕೋಯೆಲೊ  ಅವರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಸಾಕುಪ್ರಾಣಿಗಳ ಆಹಾರ, ಆರೈಕೆ ಮತ್ತು ನಿಗಾ ವ್ಯವಸ್ಥೆಯನ್ನು ಅವರು ನೋಡಿಕೊಳ್ಳುವರು. ವಿಶೇಷ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ’ ಎಂದು ತಂಡದ ಮೂಲಗಳು ತಿಳಿಸಿವೆ.

‌ಯೋಧರ ಕುಟುಂಬಕ್ಕೆ ಕಿಂಗ್ಸ್‌ ನೆರವು

ಚಂಡೀಗಡ: ಕಾಶ್ಮೀರದ ಪುಲ್ವಾಮಾದಲ್ಲಿ ಈಚೆಗೆ ನಡೆದಿದ್ದ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳ ಕಲ್ಯಾಣ ನಿಧಿಗೆ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ₹ 25 ಲಕ್ಷ ನೀಡಿದೆ.

ತಂಡದ ನಾಯಕ ಆರ್. ಅಶ್ವಿನ್ ಅವರು ಸಿಆರ್‌ಪಿಎಫ್ ನ ಡಿಐಜಿ ವಿ.ಕೆ. ಕೌಂದಾಲ್ ಅವರಿಗೆ ಚೆಕ್ ನೀಡಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !