ಮತದಾನ ಬಹಿಷ್ಕರಿಸಲು ಅಂಗವಿಕಲರ ನಿರ್ಧಾರ

ಬುಧವಾರ, ಏಪ್ರಿಲ್ 24, 2019
22 °C
ಅಂಗವೈಕಲ್ಯ ಉಳ್ಳವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಕಡೆಗಣನೆ ಆರೋಪ

ಮತದಾನ ಬಹಿಷ್ಕರಿಸಲು ಅಂಗವಿಕಲರ ನಿರ್ಧಾರ

Published:
Updated:
Prajavani

ಚಿಕ್ಕಬಳ್ಳಾಪುರ: ‘ಚುನಾವಣೆ ಸಂದರ್ಭದಲ್ಲಿ ಮಾತ್ರ ಮತಕ್ಕಾಗಿ ಅಂಗವಿಕಲರನ್ನು ಓಲೈಸಿ ಬಳಿಕ ನಿರ್ಲಕ್ಷಿಸುವ ಪ್ರವೃತ್ತಿ ಕೊನೆಗೊಳ್ಳುತ್ತಿಲ್ಲ. ಹೀಗಾಗಿ ಈ ಬಾರಿ ಜಿಲ್ಲೆಯಲ್ಲಿ ಅಂಗವಿಕಲರು ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ’ ಎಂದು ಕರ್ನಾಟಕ ಅಂಗವಿಕಲರ ಸಂಘಟನೆ (ಕೆವಿಎಸ್) ಜಿಲ್ಲಾ ಘಟಕದ ಗೌರವಾಧ್ಯಕ್ಷ ಕುಶಕುಮಾರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಸಂಭವಿಸುತ್ತಿದ್ದಂತೆ ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ರ್‌್ಯಾಂಪ್‌, ನೀರಿನ ವ್ಯವಸ್ಥೆ, ಅಂಗವಿಕಲ ಸ್ನೇಹಿ ಶೌಚಾಲಯ, ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗುತ್ತದೆ. ಚುನಾವಣೆ ಕಳೆಯುತ್ತಿದ್ದಂತೆ ಸರ್ಕಾರಿ ಅಧಿಕಾರಿಗಳಾಗಲಿ, ನಮ್ಮ ಮತ ಪಡೆದ ಜನಪ್ರತಿನಿಧಿಗಳಾಗಲಿ ನಮ್ಮತ್ತ ದೃಷ್ಟಿ ಕೂಡ ಹರಿಸದೆ ಕಡೆಗಣಿಸುತ್ತಾರೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಸುಮಾರು 42 ಲಕ್ಷಕ್ಕೂ ಹೆಚ್ಚು ಅಂಗವಿಕಲರಿದ್ದಾರೆ. ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಬಜೆಟ್‌ಗಳಲ್ಲಿ ಅನ್ಯಾಯ ಮಾಡುತ್ತಲೇ ಬಂದಿವೆ. ಸಂಸದರು, ಶಾಸಕರ ಅನುದಾನದಲ್ಲಿ ಶೇ 10 ರಷ್ಟನ್ನು ಅಂಗವಿಕಲರ ಕಲ್ಯಾಣಕ್ಕೆ ಬಳಸಬೇಕು. ಪಂಚಾಯಿತಿಗಳಲ್ಲಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ 5ರಷ್ಟು ಅನುದಾನ ಬಳಕೆಯಾಗಬೇಕು ಎಂದು ಸುತ್ತೋಲೆ ಇದ್ದರೂ ಬಳಕೆಯಾಗುತ್ತಿಲ್ಲ. ಇವತ್ತು ರಾಜಕೀಯ ಕ್ಷೇತ್ರದಲ್ಲಿ ಕೂಡ ಅಂಗವಿಕಲರಿಗೆ ಮೀಸಲಾತಿ ಅವಶ್ಯಕತೆ ಇದೆ’ ಎಂದರು.

‘ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಸಂಪರ್ಕ ರಸ್ತೆ ಹದಗೆಟ್ಟು ಸುಮಾರು ಎರಡು ವರ್ಷಗಳು ಕಳೆದಿವೆ. ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ನಡೆದಿದ್ದು, ಹಾಳಾದ ರಸ್ತೆಯಿಂದ ಸವಾರರು, ನಾಗರಿಕರು, ವಿಶೇಷವಾಗಿ ಅಂಗವಿಕಲರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೂ ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸದಿರುವುದು ನೋವು ಉಂಟು ಮಾಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆವಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ ಸುಬ್ರಮಣಿ, ಉಪಾಧ್ಯಕ್ಷ ಜಿ.ವಿ.ವೆಂಕಟಶಿವಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಉಷಾಕಿರಣ್, ಖಜಾಂಚಿ ಸೌಭಾಗ್ಯ, ಸಂಚಾಲಕರಾದ ಕೆ.ಬಿ.ಸುಶೀಲಮ್ಮ, ಕೆ.ಸಿ ಮಮತಾ, ಎಚ್.ಎಸ್.ಕೃಷ್ಣಪ್ಪ, ನರಸಿಂಹ ಮೂರ್ತಿ, ಚಂದ್ರಶೇಖರ್, ಮಂಜುನಾಥ್, ಬಾಬಾಜಾನ್, ಸುಬಾನ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !