ನೀರಿನ ದರ ಕಡಿತಕ್ಕೆ ಎಫ್‌ಕೆಸಿಸಿಐ ಆಗ್ರಹ

ಶುಕ್ರವಾರ, ಏಪ್ರಿಲ್ 26, 2019
28 °C
ವಿಶೇಷ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ

ನೀರಿನ ದರ ಕಡಿತಕ್ಕೆ ಎಫ್‌ಕೆಸಿಸಿಐ ಆಗ್ರಹ

Published:
Updated:
Prajavani

ಮಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಬಳಸುವ ನೀರಿನ ದರ ಪರಿಷ್ಕರಿಸಿ 2018ರ ಮೇ 28ರಂದು ಜಲ ಸಂಪನ್ಮೂಲ ಇಲಾಖೆ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಆಗ್ರಹಿಸಿದೆ.

ಮಂಗಳೂರಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ (ಕೆಸಿಸಿಐ) ಶನಿವಾರ ನಡೆದ ಎಫ್‌ಕೆಸಿಸಿಐ ವಿಶೇಷ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೀರಿನ ದರ ಹೆಚ್ಚಳದ ಆದೇಶ ಕೈಬಿಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್‌ ಎಸ್‌.ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ನೈಸರ್ಗಿಕ ಜಲ ಮೂಲಗಳಾದ ನದಿ, ಹಳ್ಳ, ಕೊಳ್ಳಗಳಿಂದ ಕೈಗಾರಿಕಾ ಉದ್ದೇಶಕ್ಕೆ ಪಡೆಯುವ ಪ್ರತಿ ಹತ್ತು ಲಕ್ಷ ಕ್ಯೂಬಿಕ್‌ ಅಡಿ (ಎಂಸಿಎಫ್‌ಟಿ) ನೀರಿನ ದರ ₹ 1,800 ಇತ್ತು. ಅದನ್ನು ₹ 1.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಕಾಲುವೆ, ಕೆರೆ ಮತ್ತು ಜಲಾಶಯಗಳಿಂದ ಪಡೆಯುವ ಪ್ರತಿ ಎಂಸಿಎಫ್‌ಟಿ ನೀರಿನ ದರ ₹ 3,200 ಇತ್ತು. ಅದನ್ನು ₹ 3 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಕೈಗಾರಿಕೋದ್ಯಮಿಗಳಿಗೆ ಹೊರೆಯಾಗಿದ್ದು, ಸರ್ಕಾರ ತ್ವರಿತವಾಗಿ ನೀರಿನ ದರ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಸೆಸ್‌ ಇಳಿಕೆಗೆ ಒತ್ತಾಯ: ರಾಜ್ಯದಲ್ಲಿ 2004ರಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದ್ದಾಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿನ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಸೆಸ್‌ ದರವನ್ನು ಶೇಕಡ 1ರಿಂದ ಶೇ 1.5ಕ್ಕೆ ಹೆಚ್ಚಿಸಲಾಗಿತ್ತು. ಈಗಲೂ ಅದು ಮುಂದುವರಿದಿದೆ. ಇದರಿಂದ ರೈತರು ಮತ್ತು ಉದ್ಯಮಿಗಳಿಗೆ ಹೊರೆಯಾಗುತ್ತಿದೆ. ಸೆಸ್‌ ದರವನ್ನು ಮೊದಲಿನಂತೆ ಶೇ 1ಕ್ಕೆ ಮರುನಿಗದಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೈಗಾರಿಕಾ ನಿವೇಶನಗಳು ಮತ್ತು ಕಟ್ಟಡಗಳಿಗೆ ವಿಧಿಸುವ ಆಸ್ತಿ ತೆರಿಗೆಯ ಮೊತ್ತದಲ್ಲಿ ಏಕರೂಪತೆ ಇಲ್ಲ. ಕೆಲವು ಪಂಚಾಯಿತಿಗಳು ಮನಸೋಇಚ್ಛೆ ತೆರಿಗೆ ವಿಧಿಸುತ್ತಿವೆ. ಆದ್ದರಿಂದ ರಾಜ್ಯದಾದ್ಯಂತ ಏಕರೂಪ ತೆರಿಗೆ ನಿಗದಿ ಮಾಡುವಂತೆ ಆಗ್ರಹಿಸುವ ನಿರ್ಣಯವನ್ನೂ ಸಭೆಯಲ್ಲಿ ಒಕ್ಕೊರಲಿನಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !