ಉತ್ಸಾಹದ ನಡುವೆ ವೀರಪ್ಪ ಮೊಯಿಲಿ, ಬಚ್ಚೇಗೌಡ ಸೇರಿದಂತೆ ಪ್ರಮುಖರ ನಾಮಪತ್ರ ಸಲ್ಲಿಕೆ

ಮಂಗಳವಾರ, ಏಪ್ರಿಲ್ 23, 2019
31 °C
ನಗರದಲ್ಲಿ ಶಕ್ತಿ ಪ್ರದರ್ಶನ ಮಾಡಿದ ವಿವಿಧ ಪಕ್ಷಗಳ ಕಾರ್ಯಕರ್ತರು, ಒಂದೇ ದಿನ 9 ಉಮೇದುವಾರರಿಂದ ನಾಮಪತ್ರ ಸಲ್ಲಿಕೆ

ಉತ್ಸಾಹದ ನಡುವೆ ವೀರಪ್ಪ ಮೊಯಿಲಿ, ಬಚ್ಚೇಗೌಡ ಸೇರಿದಂತೆ ಪ್ರಮುಖರ ನಾಮಪತ್ರ ಸಲ್ಲಿಕೆ

Published:
Updated:
Prajavani

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಳನೇ ದಿನವಾದ ಸೋಮವಾರ ನಗರದಲ್ಲಿ ವಿವಿಧ ಪಕ್ಷಗಳ ಪ್ರಮುಖ ಅಭ್ಯರ್ಥಿಗಳು ತಮ್ಮ ಸಾವಿರಾರು ಕಾರ್ಯಕರ್ತರೊಂದಿಗೆ ಶಕ್ತಿಪ್ರದರ್ಶನ ಮಾಡುವ ಜತೆಗೆ ನಾಮಪತ್ರ ಸಲ್ಲಿಸಿದರು.

ಸೋಮವಾರ ಒಂದೇ ದಿನ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಪೈಕಿ ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಂ.ವೀರಪ್ಪ ಮೊಯಿಲಿ, ಬಿಜೆಪಿ ಅಭ್ಯರ್ಥಿಯಾಗಿ ಬಿ.ಎನ್.ಬಚ್ಚೇಗೌಡ, ಬಿಎಸ್‌ಪಿ ಅಭ್ಯರ್ಥಿಯಾಗಿ ಸಿ.ಎಸ್.ದ್ವಾರಕನಾಥ್‌ ಮತ್ತು ಸಿಪಿಐಎಂ ಅಭ್ಯರ್ಥಿಯಾಗಿ ಎಸ್.ವರಲಕ್ಷ್ಮಿ ಅವರು ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರಾಗಿದ್ದಾರೆ.

ಪ್ರಮುಖ ಅಭ್ಯರ್ಥಿಗಳ ಪೈಕಿ ವೀರಪ್ಪ ಮೊಯಿಲಿ ಅವರು ಬೆಳಿಗ್ಗೆ ತಾಲ್ಲೂಕಿನ ನಂದಿ ಗ್ರಾಮದಲ್ಲಿರುವ ಭೋಗನಂದೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಮುಖಂಡರ ಜತೆ ಜಿಲ್ಲಾಡಳಿತ ಭವನಕ್ಕೆ ಬಂದು ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್ ಶ್ರವಣ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಂತರ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದರು.

ಇನ್ನುಳಿದಂತೆ ಬಚ್ಚೇಗೌಡ, ದ್ವಾರಕನಾಥ್‌ ಮತ್ತು ವರಲಕ್ಷ್ಮಿ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಬೃಹತ್‌ ಮೆರವಣಿಗೆ ನಡೆಸಿ, ಬಳಿಕ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ವೀರಪ್ಪ ಮೊಯಿಲಿ ಅವರಿಗೆ ಸಚಿವರಾದ ಎಂಟಿಬಿ ನಾಗರಾಜ್‌, ಎನ್.ಎಚ್.ಶಿವಶಂಕರರೆಡ್ಡಿ, ಶಾಸಕರಾದ ಡಾ.ಕೆ.ಸುಧಾಕರ್‌, ನಿಸರ್ಗ ನಾರಾಯಣಸ್ವಾಮಿ, ಎಸ್‌.ಎನ್.ಸುಬ್ಬಾರೆಡ್ಡಿ, ವೆಂಕಟರಮಣಯ್ಯ, ವಿಧಾನ ಪರಿಷತ್ ಸದಸ್ಯ ರವಿ, ಮಾಜಿ ಶಾಸಕರಾದ ಆಂಜನಮೂರ್ತಿ, ಎನ್‌.ಸಂಪಂಗಿ, ವಿಧಾನಪರಿಷತ್‌ ಮಾಜಿ ಸದಸ್ಯ ಇ.ಕೃಷ್ಣಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಸಾಥ್ ನೀಡಿದರು.

ಬಿ.ಎಚ್‌.ಬಚ್ಚೇಗೌಡ ಅವರು ನಾಮಪತ್ರ ಸಲ್ಲಿಸಲು ಬಂದಾಗ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಶಾಸಕ ಎಸ್‌.ಆರ್‌.ವಿಶ್ವನಾಥ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್‌, ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ, ಮುಖಂಡರಾದ ಜ್ಯೋತಿ ರೆಡ್ಡಿ, ಪುತ್ರ, ಯುವ ಮುಖಂಡ ಶರತ್‌ ಬಚ್ಚೇಗೌಡ ಅವರು ಜತೆಗಿದ್ದರು.

ದ್ವಾರಕನಾಥ್ ಅವರಿಗೆ ಬಿಎಸ್ಪಿ ರಾಜ್ಯ ಉಸ್ತುವಾರಿಗಳಾದ ಎಂ.ಎಲ್.ತೋಮರ್‌, ಎನ್.ಮಹೇಶ್‌, ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಹರಿರಾಮ್‌, ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಸಾಥ್ ನೀಡಿದರು.

ವರಲಕ್ಷ್ಮಿ ಅವರೊಂದಿಗೆ ಸಿಪಿಐಎಂ ಪಾಲಿಟ್‌ ಬ್ಯೂರೊ ಸದಸ್ಯ ಎಂ.ಎ.ಬೇಬಿ, ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಬಸವರಾಜ, ಹಿರಿಯ ಮುಖಂಡರಾದ ಜಿ.ವಿ.ಶ್ರೀರಾಮರೆಡ್ಡಿ, ಮೀನಾಕ್ಷಿ ಸುಂದರಂ, ಜಿಲ್ಲಾ ಸಮಿತಿ ಕಾರ್ಯದರ್ಶಿ ಜಯರಾಮರೆಡ್ಡಿ ಅವರು ವರಲಕ್ಷ್ಮೀ ಅವರು ನಾಮಪತ್ರ ಸಲ್ಲಿಸಲು ಬಂದಿದ್ದರು.

ಪ್ರಮುಖ ಅಭ್ಯರ್ಥಿಗಳನ್ನು ಹೊರತುಪಡಿಸಿದಂತೆ, ಸೋಮವಾರ ಪಕ್ಷೇತರ ಅಭ್ಯರ್ಥಿಗಳಾಗಿ ಬೆಂಗಳೂರಿನ ಉತ್ತರ ತಾಲ್ಲೂಕಿನ ಸೋಲದೇವನಹಳ್ಳಿಯ ನಳಿನಿ, ಗೌರಿಬಿನದನೂರಿನ ಜಿ.ಎನ್.ರವಿ, ಯಲಹಂಕದ ಬಿ.ಎಂ. ನಾರಾಯಣಸ್ವಾಮಿ, ಯಲಹಂಕ ಅಟ್ಟೂರಿನ ರಮೇಶ್ ಹಾಗೂ ಯಲಹಂಕದ ಫಣಿರಾಜು ಅವರು ನಾಮಪತ್ರ ಸಲ್ಲಿಸಿದರು.

ಮಾ.19 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ನಾಲ್ಕು ದಿನಗಳಲ್ಲಿ ಒಟ್ಟು ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಸೋಮವಾರ ನಾಮಪತ್ರ ಸಲ್ಲಿಸಿದವರ ಪೈಕಿ ವೀರಪ್ಪ ಮೊಯಿಲಿ ಅವರು ಮೂರು ಸೆಟ್‌ ಮತ್ತು ಬಿ.ಎನ್.ಬಚ್ಚೇಗೌಡ ಅವರು ನಾಲ್ಕು ಸೆಟ್‌ ನಾಮಪತ್ರ ಸಲ್ಲಿಸಿದರು. ಹೀಗಾಗಿ ಈವರೆಗೆ 13 ಅಭ್ಯರ್ಥಿಗಳು ಒಟ್ಟು 18 ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !