ಸಾವಿನ ರಾಜಕಾರಣ ಖಂಡಿಸುವೆ: ಸುಮಲತಾ

ಶುಕ್ರವಾರ, ಏಪ್ರಿಲ್ 19, 2019
29 °C
ಸಿ.ಎಂ, ಡಿ.ಕೆ.ಶಿವಕುಮಾರ್‌, ಮುನಿರತ್ನಾ ಹೇಳಿಕೆಗಳಿಗೆ ತಿರುಗೇಟು

ಸಾವಿನ ರಾಜಕಾರಣ ಖಂಡಿಸುವೆ: ಸುಮಲತಾ

Published:
Updated:

ಮಂಡ್ಯ: ‘ಹಣ, ಸ್ವಾರ್ಥ, ಸುಳ್ಳಿನ ರಾಜಕಾರಣ ಕಂಡಿದ್ದೆ. ಆದರೆ ಈಗ ಸಾವಿನ ರಾಜಕಾರಣ ಮಾಡುತ್ತಿರುವುದನ್ನು ಖಂಡಿಸುತ್ತೇನೆ. ಹೋದಲ್ಲೆಲ್ಲಾ ಅಂಬರೀಷ್‌ ಸಾವಿನ ವಿಚಾರ ತೆಗೆದು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

‘ಅಂಬರೀಷ್‌ ಮೃತಪಟ್ಟಾಗ ನಮಗೆ ನೆರವಾದ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳಿಗೆ ಬಹಿರಂಗವಾಗಿ ಕೃತಜ್ಞತೆ ಸಲ್ಲಿಸಿದ್ದೇನೆ. ರಾಜಕೀಯ ಲಾಭ ಪಡೆಯಲು ಸಹಾಯ ಮಾಡಿದರೇ ಎಂಬುದನ್ನು ಅವರೇ ಉತ್ತರಿಸಬೇಕು. ಅಂಬರೀಷ್‌ ಬದುಕಿದ್ದಾಗ ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಲಿ, ಅದನ್ನು ಬಿಟ್ಟು ಸಾವಿನ ವಿಚಾರ ತೆಗೆದು ರಾಜಕೀಯ ಮಾಡುತ್ತಿದ್ದಾರೆ. ಅಂಬರೀಷ್‌ ಬಿಟ್ಟು ಬೇರೆ ಮಾತನಾಡಲು ಜೆಡಿಎಸ್‌ನವರಿಗೆ ವಿಷಯವೇ ಇಲ್ಲವೇ’ ಎಂದು ಪ್ರಶ್ನಿಸಿದರು.

ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ತಿರುಗೇಟು ನೀಡಿದ ಅವರು ‘ಬೆಂಗಳೂರಿನಿಂದ ನಿಖಿಲ್‌ ಅವರೇ ಸ್ಪರ್ಧೆ ಮಾಡಬಹುದಾಗಿತ್ತು. ಅಗತ್ಯವಿದ್ದರೆ ತಮ್ಮ ಸಹೋದರನ ಕ್ಷೇತ್ರವನ್ನೇ ಬಿಟ್ಟುಕೊಡಬಹುದಾಗಿತ್ತು’ ಎಂದರು.

* ಇದನ್ನೂ ಓದಿ: ಮಂಡ್ಯ ಲೋಕಸಭಾ ಕ್ಷೇತ್ರದ ಕಣದಲ್ಲಿ ಸಿನಿಮೀಯ ಬೆಳವಣಿಗೆ: ಮೂವರು ‘ಸುಮಲತಾ’ ನಾಮಪತ್ರ

‘ದರ್ಶನ್‌, ಯಶ್‌ ಅವರು ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ. ಅವರು ಯಾವ ತಪ್ಪು ಮಾಡಿದ್ದಾರೆ? ಕಳೆದ ವಿಧಾನಸಭಾ ಚುನಾವಣೆ ವೇಳೆ ಯಶ್‌, ಜೆಡಿಎಸ್‌ ಪರ ಪ್ರಚಾರ ಮಾಡಿದ್ದಾರೆ. ಆಗ ಏಕೆ ಆರೋಪ ಮಾಡಲಿಲ್ಲ? ಗೌರವ, ಮರ್ಯಾದೆಯಿಂದ ಚುನಾವಣೆ ನಡೆಸಲಿ. ನನ್ನ ಸ್ಪರ್ಧೆಯಿಂದ ಅವರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಜೋಡೆತ್ತು ಹೇಳಿಕೆಯನ್ನು ಏಕೆ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ದರ್ಶನ್‌ ಮಹಿಳೆಯರ ಬಗ್ಗೆ ಏನೋ ಮಾತನಾಡಿದ್ದಾರೆ ಎಂದು ಸಿ.ಎಂ ಹೇಳಿದ್ದಾರೆ. ಆದರೆ ಅವರ ಅಣ್ಣ ನನ್ನ ವಿರುದ್ಧ ಮಾತನಾಡಿದಾಗ ಎಲ್ಲಿ ಹೋಗಿತ್ತು ಈ ಅಭಿಮಾನ’ ಎಂದು ಪ್ರಶ್ನಿಸಿದರು.

ಅಂಬಿ ಅಂತ್ಯಕ್ರಿಯೆಗೆ ನಿಖಿಲ್‌ ಸ್ಥಳ ಗುರುತಿಸಿದರು ಎಂಬ ಮುನಿರತ್ನ ಹೇಳಿಕೆಗೆ ಪ್ರತಿಕ್ರಿಯಿಸಿ ‘ಮಂಡ್ಯಕ್ಕೆ ಬಂದು ಅಂಬರೀಷ್‌ ಬಗ್ಗೆ ಮಾತನಾಡುವ ನೈತಿಕತೆ ಮುನಿರತ್ನ ಅವರಿಗೆ ಇಲ್ಲ. ಅವರು ಅಂಬರೀಷ್‌ ಅವರಿಂದ ಯಾವ ರೀತಿ ಲಾಭ ಪಡೆದಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.

‘ಕ್ರಿಮಿನಲ್‌, ಟೆರರಿಸ್ಟ್‌ ಮಾದರಿಯಲ್ಲಿ ನನ್ನ ಮೇಲೆ ಕಣ್ಣಿಟ್ಟಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ನನ್ನ ಕಾರ್ಯಕ್ರಮದಲ್ಲಿ ಕರೆಂಟ್‌, ಕೇಬಲ್‌ ಕಟ್‌ ಮಾಡಿಸಿದರು. ಅವರ ಕಾರ್ಯಕ್ರಮಕ್ಕೆ ನಿರಂತರವಾಗಿ ವಿದ್ಯುತ್‌ ಪೂರೈಕೆ ಮಾಡುವಂತೆ ಅಧಿಕಾರಿಯಿಂದ ಪತ್ರ ಬರೆಸುತ್ತಾರೆ’ ಎಂದರು.

ರೈತಸಂಘ ಬೆಂಬಲ

‘ಮಂಡ್ಯದ ಸ್ವಾಭಿಮಾನ ಉಳಿಯಬೇಕು. ಹೊರಗಿನವರಿಗೆ ಅಧಿಕಾರ ಕೊಡಬಾರದು ಎಂಬ ಉದ್ದೇಶದಿಂದ ರೈತಸಂಘ ಸುಮಲತಾ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ’ ಎಂದು ಸುನೀತಾ ಪುಟ್ಟಣ್ಣಯ್ಯ ತಿಳಿಸಿದರು.

ಬರಹ ಇಷ್ಟವಾಯಿತೆ?

 • 24

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !