ಸೋಮವಾರ, ಡಿಸೆಂಬರ್ 9, 2019
17 °C
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ–ಮುಂಬೈ ಇಂಡಿಯನ್ಸ್‌ ಅಭ್ಯಾಸ

ವಿರಾಟ್–ಬೂಮ್ರಾ ಕುಶಲೋಪರಿ!

Published:
Updated:
Prajavani

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ವಿರಾಟ್ ಕೊಹ್ಲಿ ಮುಂದೆ ‘ಡೆತ್ ಓವರ್’ ಪರಿಣತ ವೇಗಿ ಜಸ್‌ಪ್ರೀತ್ ಬೂಮ್ರಾ ಕೈಕಟ್ಟಿ ನಿಂತಿದ್ದರು.

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಮುಖದಲ್ಲಿ ಕಾಳಜಿಯ ಭಾವ ಇತ್ತು. ತಮ್ಮ ತಂಡದ ‘ಟ್ರಂಪ್‌ ಕಾರ್ಡ್’ಬೌಲರ್  ಬೂಮ್ರಾ ಅವರಿಗೆ ಬುದ್ಧಿಮಾತುಗಳನ್ನು ಹೇಳುತ್ತಿರುವಂತಿತ್ತು.

ಹೌದು: ಬೆನ್ನುನೋವಿನಿಂದ ಬಳಲುತ್ತಿರುವ ಬೂಮ್ರಾ ಮೇ ತಿಂಗಳಾಂತ್ಯದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಫಿಟ್ ಆಗುವುದು ಅನುಮಾನವೆಂಬ ಸುದ್ದಿಗಳು ಹರಿದಾಡಿದ್ದವು. ಇದರಿಂದಾಗಿ ಕೊಹ್ಲಿ ತುಸು ಒತ್ತಡಕ್ಕೊಳಗಾದ ಮಾತುಗಳೂ ಕೇಳಿಬಂದಿದ್ದವು.

ಗುರುವಾರ ಇಲ್ಲಿ ಆರ್‌ಸಿಬಿ ವಿರುದ್ಧ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡಲು ಬೂಮ್ರಾ ಬಂದಿದ್ದಾರೆ. ಮಂಗಳವಾರವಷ್ಟೇ ಅವರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಮುಂಬೈ ತಂಡವು ಸೋಮವಾರ ಬಂದಿತ್ತು.

ಸಂಜೆ ಉಭಯ ತಂಡಗಳ ಆಟಗಾರರು ಅಭ್ಯಾಸಕ್ಕೆ ಆಗಮಿಸಿದಾಗ ಬೂಮ್ರಾ ಮತ್ತು ವಿರಾಟ್ ಮಾತುಕತೆಗಳು ಗಮನ ಸೆಳೆದವು. ಇಬ್ಬರೂ ಸುಮಾರು 15 ನಿಮಿಷಗಳವರೆಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಬೂಮ್ರಾ ಒಂದಿಷ್ಟು ವ್ಯಾಯಾಮಗಳನ್ನು ಮಾಡಿದರು.  ತಮ್ಮ ತಂಡದ ಆಟಗಾರರೊಂದಿಗೆ ಸುಮಾರು ಇಪ್ಪತ್ತು ನಿಮಿಷ ಓಡಿದರು. ಕ್ಯಾಚಿಂಗ್ ಅಭ್ಯಾಸದಲ್ಲಿಯೂ ಚುರುಕಾಗಿ ಪಾಲ್ಗೊಂಡರು. ಥ್ರೋ ಅಭ್ಯಾಸವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು. ಆದರೆ, ನೆಟ್ಸ್‌ನಲ್ಲಿ ಅವರು ಬೌಲಿಂಗ್ ಮಾಡಲಿಲ್ಲ. ತಮ್ಮ ತಂಡದ ನಿರ್ದೇಶಕ ಮತ್ತು ಹಿರಿಯ ಕ್ರಿಕೆಟಿಗ ಜಹೀರ್ ಖಾನ್ ಅವರೊಂದಿಗೆ ಮಾತುಕತೆಯಲ್ಲಿ ಹೆಚ್ಚು ಸಮಯ ಕಳೆದರು.

ಆಭ್ಯಾಸದ ಅಂತ್ಯದಲ್ಲಿ ಬೂಮ್ರಾ ಅವರು ಸ್ಟ್ರೆಂಥ್ ಅ್ಯಂಡ್ ಕಂಡಿಷನಿಂಗ್ ಕೋಚ್ ಪಾಲ್ ಚಾಪಮನ್ ಅವರೊಂದಿಗೆ ಚರ್ಚೆ ನಡೆಸಿದರು.

ಆರ್‌ಸಿಬಿ ತಂಡವು ಮಾರ್ಚ್‌ 23ರಂದು ಚೆನ್ನೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಸೋತಿತ್ತು. ಇಂಡಿಯನ್ಸ್‌ ತಂಡವು ಡೆಲ್ಲಿ ಎದುರು ಸೋತಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು