ಐಐಎಸ್ಸಿ ಬಳಿ ಕರೆದು ₹ 13 ಲಕ್ಷ ದೋಚಿದರು!
ಬೆಂಗಳೂರು: ಪ್ರತಿಷ್ಠಿತ ಕಾಲೇಜಿನಲ್ಲಿ ಫಿಸಿಯೋಥೆರಪಿ ಕೋರ್ಸ್ಗೆ ಪ್ರವೇಶ ಕೊಡಿಸುವುದಾಗಿ ನಂಬಿಸಿ ಸಂತೋಷ್ ಹಾಗೂ ರೇವತಿ ಎಂಬುವರನ್ನು ಐಐಎಸ್ಸಿ ಬಳಿ ಕರೆಸಿಕೊಂಡ ಯುವಕರಿಬ್ಬರು, ಅವರಿಂದ ₹ 13 ಲಕ್ಷ ಹಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ಪಟ್ಟೇಗಾರಪಾಳ್ಯದ ರೇವತಿ ಸದಾಶಿವನಗರ ಠಾಣೆಗೆ ದೂರು ಕೊಟ್ಟಿದ್ದು, ರಾಕೇಶ್ ಅಲಿಯಾಸ್ ರಾಕಿ ಹಾಗೂ ವಿನೋದ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸರು ಕರೆ ವಿವರದ (ಸಿಡಿಆರ್) ಸುಳಿವು ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
‘ನಾನು ಹಾಗೂ ಸಂತೋಷ್, ತರಕಾರಿ ರಫ್ತು ವ್ಯವಹಾರ ಮಾಡುತ್ತೇವೆ. ಆತನ ತಂಗಿ ಫಿಸಿಯೋಥೆರಪಿ ಕೋರ್ಸ್ ಮಾಡುವ ಇಚ್ಛೆ ಹೊಂದಿದ್ದಳು. ಈ ವೇಳೆ ಪರಿಚಿತರೊಬ್ಬರ ಮೂಲಕ ಸಂಪರ್ಕಕ್ಕೆ ಬಂದ ವಿನೋದ್ ಎಂಬಾತ, ‘ನನಗೆ ಪ್ರತಿಷ್ಠಿತ ಕಾಲೇಜುಗಳ ಪ್ರಾಂಶುಪಾಲರ ಪರಿಚಯವಿದೆ. ನೀವು ₹ 13 ಲಕ್ಷ ಕೊಟ್ಟರೆ ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇನೆ’ ಎಂದಿದ್ದ. ಅದಕ್ಕೆ ಒಪ್ಪಿಕೊಂಡ ನಾವು, ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಹಣ ತೆಗೆದುಕೊಂಡು ಐಐಎಸ್ಸಿ ಬಳಿ ತೆರಳಿದ್ದೆವು’ ಎಂದು ರೇವತಿ ವಿವರಿಸಿದ್ದಾರೆ.
‘ಈ ವೇಳೆ ಸ್ನೇಹಿತನೊಂದಿಗೆ ಬೈಕ್ನಲ್ಲಿ ಅಲ್ಲಿಗೆ ಬಂದ ವಿನೋದ್, ಜತೆಗಿದ್ದವನನ್ನು ರಾಕೇಶ್ ಎಂದು ಪರಿಚಯ ಮಾಡಿಕೊಟ್ಟ. ನಂತರ ಕಾಲೇಜು ಪ್ರವೇಶದ ವಿಚಾರವಾಗಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದೆವು. ಈ ಹಂತದಲ್ಲಿ ಏಕಾಏಕಿ ನಮ್ಮ ಮೇಲೆರಗಿದ ಅವರು, ಹಣದ ಬ್ಯಾಗ್ ಕಿತ್ತುಕೊಂಡು ಬೈಕ್ನಲ್ಲಿ ಹೊರಟು ಹೋದರು’ ಎಂದು ದೂರಿದರು.