ಶನಿವಾರ, ಡಿಸೆಂಬರ್ 7, 2019
18 °C
₹ 3.96 ಲಕ್ಷ ನಗದು ವಶಪಡಿಸಿಕೊಂಡ ಪೊಲೀಸರು

ಐಪಿಎಲ್‌ ಕ್ರಿಕೆಟ್‌: ಆನ್‌ಲೈನ್‌ನಲ್ಲಿ ಬೆಟ್ಟಿಂಗ್‌, ಇಬ್ಬರ ಬಂಧನ

Published:
Updated:

ಮಂಗಳೂರು: ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ವೇಳೆ ಆನ್‌ಲೈನ್‌ ಮೂಲಕ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ನಗರ ಅಪರಾಧ ಘಟಕದ (ಸಿಸಿಬಿ) ಪೊಲೀಸರು, ₹ 3.96 ಲಕ್ಷ ನಗದು, ಕಾರು ಮತ್ತು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

‘ಜೆಪ್ಪಿನಮೊಗರು ನಿವಾಸಿ ಲಕ್ಷಿತ್‌ ಅಲಿಯಾಸ್‌ ಮನೀಶ್‌ (20) ಮತ್ತು ಬಿಜೈ ನಿವಾಸಿ ನಿತಿನ್‌ (26) ಬಂಧಿತರು. ಕದ್ರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆನ್‌ಲೈನ್‌ ಮೂಲಕ ಈ ಇಬ್ಬರೂ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದರು. ಆರೋಪಿಗಳಿಂದ ಮೂರು ಮೊಬೈಲ್‌ ಫೋನ್‌ ಹಾಗೂ ಹುಂಡೈ ಐ20 ಕಾರನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ತೊಕ್ಕೊಟ್ಟು ನಿವಾಸಿಗಳಾದ ಮೆಲ್ವಿನ್‌ ವಿಶ್ವಾಸ್‌ ಮತ್ತು ಡೆಂಝಿಲ್‌ ಎಂಬುವವರು ಈ ಬೆಟ್ಟಿಂಗ್‌ ಜಾಲದ ಪ್ರಮುಖ ಬುಕ್ಕಿಗಳು. ಇವರಿಬ್ಬರೂ ಪ್ರತಿ ವರ್ಷವೂ ಐಪಿಎಲ್‌ ಪಂದ್ಯಾವಳಿ ನಡೆಯುವಾಗ ಗೋವಾಕ್ಕೆ ತೆರಳುತ್ತಾರೆ. ಅಲ್ಲಿ ಕುಳಿತುಕೊಂಡು ಆನ್‌ಲೈನ್‌ ಮೂಲಕ ಬೆಟ್ಟಿಂಗ್‌ ದಂಧೆ ನಡೆಸುತ್ತಾರೆ. ಈ ಬಾರಿ ಕೂಡ ಇಬ್ಬರೂ ಗೋವಾದಲ್ಲಿದ್ದಾರೆ. ಬಂಧಿತರು ಅವರ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಮೆಲ್ವಿನ್‌ ವಿಶ್ವಾಸ್‌ ಮತ್ತು ಡೆಂಝಿಲ್‌ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳ ನಡುವೆ ಗುರುವಾರ ನಡೆದ ಪಂದ್ಯಾವಳಿಯಲ್ಲೂ ತಂಡ ಬೆಟ್ಟಿಂಗ್‌ ನಡೆಸಿತ್ತು. ನಗರದ ರಾಜೇಶ್‌ ಎಂಬಾತ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದ. ಮೆಲ್ವಿನ್‌ ವಿಶ್ವಾಸ್‌ ಆ ಹಣವನ್ನು ಪಡೆಯುವ ಜವಾಬ್ದಾರಿಯನ್ನು ಲಕ್ಷಿತ್‌ ಮತ್ತು ನಿತಿನ್‌ಗೆ ವಹಿಸಿದ್ದ. ರಾಜೇಶ್‌ ಇವರಿಬ್ಬರಿಗೆ ಹಣ ತಲುಪಿಸಿದ್ದ. ಈ ಕುರಿತು ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಪೊಲೀಸ್‌ ಕಮಿಷನರ್‌ ಸಂದೀಪ್ ಪಾಟೀಲ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್‍ಸ್ಪೆಕ್ಟರ್ ಶಿವಪ್ರಕಾಶ್ ನಾಯಕ್, ಸಬ್‌ ಇನ್‌ಸ್ಪೆಕ್ಟರ್‌ ಕಬ್ಬಳ್‍ರಾಜ್, ಕಾನ್‌ಸ್ಟೆಬಲ್‌ಗಳಾದ ಮಣಿ, ಯೋಗೀಶ್, ರಾಮಣ್ಣ, ರಾಜಾ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು