ಸಾಮೂಹಿಕ ಸೀಮಂತ ಕಾರ್ಯಕ್ರಮ; ಸುರಕ್ಷಿತ ತಾಯ್ತನಕ್ಕೆ ಒತ್ತು ನೀಡಿ

ಗುರುವಾರ , ಏಪ್ರಿಲ್ 25, 2019
31 °C
ಸೂರ್ಯ ಸ್ಕ್ಯಾನಿಂಗ್‌ ಕೇಂದ್ರದ ವತಿಯಿಂದ ಕಾರ್ಯಕ್ರಮ

ಸಾಮೂಹಿಕ ಸೀಮಂತ ಕಾರ್ಯಕ್ರಮ; ಸುರಕ್ಷಿತ ತಾಯ್ತನಕ್ಕೆ ಒತ್ತು ನೀಡಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಗರ್ಭಧಾರಣೆ ಮಹಿಳೆಯ ಜೀವನದಲ್ಲಿ ಒಂದು ಮಹತ್ತರ ಘಟ್ಟ. ಆದ್ದರಿಂದ ಗರ್ಭಿಣಿಯರು ಸುರಕ್ಷಿತ ತಾಯ್ತನಕ್ಕೆ ಆದ್ಯತೆ ನೀಡಬೇಕು. ಸುರಕ್ಷಿತ ಹೆರಿಗೆಗಾಗಿ ನಿಯಮಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ವೈದ್ಯ ಡಾ.ಬಿ.ವಿ.ಮಂಜುನಾಥ್ ಹೇಳಿದರು.

ನಗರದಲ್ಲಿ ಭಾನುವಾರ ಸೂರ್ಯ ಸ್ಕ್ಯಾನಿಂಗ್‌ ಕೇಂದ್ರದ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಶುವನ್ನು ಒಂಭತ್ತು ತಿಂಗಳು ಗರ್ಭದಲ್ಲಿಟ್ಟುಕೊಂಡು ಪೋಷಿಸುವ ಮಹಿಳೆಯ ತ್ಯಾಗ, ಸಹನಶೀಲತೆ ಅಗಾಧವಾದದ್ದು. ತಾಯಿಯ ಸ್ಥಾನವನ್ನು ಯಾರು ಕೂಡ ತುಂಬಲು ಸಾಧ್ಯವಿಲ್ಲ. ಇವತ್ತು ಮಹಿಳೆಯರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕಿದೆ. ಮನೆಗೆಲಸ, ಕುಟುಂಬದ ನಿರ್ವಹಣೆ ಒತ್ತಡದ ನಡುವೆಯೂ ಆರೋಗ್ಯದತ್ತ ಗಮನ ಹರಿಸಬೇಕು’ ಎಂದು ತಿಳಿಸಿದರು.

ಸಂವಾದದಲ್ಲಿ ಮಾತನಾಡಿದ ಸ್ತ್ರೀರೋಗ ತಜ್ಞೆಯರು, ‘ಗರ್ಭಿಣಿಗೆ ನೀಡುವ ಆಹಾರವು ಭ್ರೂಣ ಬೆಳೆಯಲು, ತಾಯಿಯ ಸ್ವಾಸ್ಥ್ಯ ಕಾಪಾಡಲು ಮುಂದೆ ನಂತರದ ಹೆರಿಗೆ ನೋವನ್ನು ಸಹಿಸಲು ಮತ್ತು ಹಾಲೂಡಿಸುವಾಗ, ಅಗತ್ಯವಾದ ಶಕ್ತಿಯನ್ನು ನೀಡಲು ಬೇಕಾಗುತ್ತದೆ. ಭ್ರೂಣದ ಬೆಳವಣಿಗೆಗೆ ಪ್ರೊಟೀನ್‌ ಯುಕ್ತ ಆಹಾರ ಅತ್ಯಗತ್ಯ. ಗರ್ಭಿಣಿ ಮಹಿಳೆಯು ಹೆಚ್ಚಿನ ಪ್ರಮಾಣದ ಹಾಲು, ಮೊಟ್ಟೆ, ಮಾಂಸ. ಕೋಳಿ ಮಾಂಸಗಳನ್ನು ಸೇವಿಸಬೇಕು’ ಎಂದು ಹೇಳಿದರು.

‘ಸಸ್ಯಹಾರಿಯಾಗಿದ್ದರೆ ವಿವಿಧ ಬೇಳೆ ಕಾಳುಗಳು, ಒಣ ಹಣ್ಣುಗಳನ್ನು ತಿನ್ನಬೇಕು. ಭ್ರೂಣದಲ್ಲಿ ರಕ್ತ ರಚನೆಗೆ ಕಬ್ಬಿಣಾಂಶವು ಅತಿ ಅಗತ್ಯ. ಇದು ರಕ್ತ ಹೀನತೆಯನ್ನು ನಿವಾರಿಸುವುದು. ಗರ್ಭಿಣಿಯು ಸಕ್ಕರೆಯ ಬದಲಾಗಿ ಬೆಲ್ಲವನ್ನು ಬಳಸಬೇಕು. ಗರ್ಭಿಣಿ ಹೆಣ್ಣು ಮಕ್ಕಳಿಗೆ ರಾಗಿ ಮತ್ತು ಸಜ್ಜೆ ಉಪಯೋಗಿಸಬೇಕು. ಎಳ್ಳು ಮತ್ತು ಕಡು ಹಸಿರು ಬಣ್ಣದ ಸೊಪ್ಪು ತರಕಾರಿಗಳನ್ನು ಬಳಸಬೇಕು’ ಎಂದರು.

‘ಮಗುವಿನ ಹಲ್ಲು ಮತ್ತು ಮೂಳೆಗಳ ರಚನೆಗೆ ಕ್ಯಾಲ್ಶಿಯಂ ಅತ್ಯಗತ್ಯ. ಹಾಲು ಕ್ಯಾಲ್ಶಿಯಂನ ಅತಿಶ್ರೇಷ್ಠ ಆಗರ. ರಾಗಿ ಮತ್ತು ಸಜ್ಜೆಗಳಲ್ಲೂ ಕ್ಯಾಲ್ಶಿಯಂ ಇದೆ. ಗರ್ಭಿಣಿಯು ಚಿಕ್ಕ ಚಿಕ್ಕ ಒಣ ಮೀನುಗಳನ್ನು ತಿನ್ನುವುದನ್ನು ಪ್ರೋತ್ಸಾಹಿಸಬೇಕು. ಗರ್ಭಿಣಿಗೆ ವಿಟಮಿನ್‌ಗಳು ಅತಿ ಮುಖ್ಯ. ಅವಳು ಸಾಕಷ್ಟು ತರಕಾರಿಗಳನ್ನು ಸೇವಿಸಬೇಕು. ಮತ್ತು ನಿಂಬೆ ಜಾತಿಯ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು’ ಎಂದು ತಿಳಿಸಿದರು.

ಲೀಗಲ್ ಆಸ್ಪತ್ರೆಯ ಡಾ ಸೂರಿರಾಜು, ಸ್ತ್ರೀರೋಗ ತಜ್ಞರಾದ ಡಾ.ಪರಿಮಳ, ಡಾ ವಿಜಯಾ, ಡಾ.ಸಾವಿತ್ರಿ, ಪರಿಮಳ ಸಂಜೀವಿನಿ ಕ್ಲಿನಿಕ್‌ನ ಡಾ.ಸಿದ್ದರಾಜು, ಡಾ.ರವೀಂದ್ರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !