ವಿಜಯ ಬ್ಯಾಂಕ್‌ ಎದುರು ಕರಾಳ ದಿನಾಚರಣೆ

ಶುಕ್ರವಾರ, ಏಪ್ರಿಲ್ 26, 2019
35 °C

ವಿಜಯ ಬ್ಯಾಂಕ್‌ ಎದುರು ಕರಾಳ ದಿನಾಚರಣೆ

Published:
Updated:
Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ್ಮತಳೆದ ವಿಜಯ ಬ್ಯಾಂಕ್‌ ಅನ್ನು ಬರೋಡಾ ಬ್ಯಾಂಕ್‌ ಜೊತೆ ವಿಲೀನಗೊಳಿಸಿರುವುದನ್ನು ವಿರೋಧಿಸಿ ಡಿವೈಎಫ್‌ಐ ಕಾರ್ಯಕರ್ತರು ಮತ್ತು ವಿಜಯ ಬ್ಯಾಂಕ್‌ ಉಳಿಸಿ ಹೋರಾಟ ಸಮಿತಿ ಸದಸ್ಯರು, ವಿಜಯ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಲೈಟ್‌ಹೌಸ್‌ ಹಿಲ್‌ ರಸ್ತೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಸಮೀಪದಲ್ಲಿರುವ ವಿಜಯ ಬ್ಯಾಂಕ್‌ ಪ್ರಾದೇಶಿಕ ಕಚೇರಿ ಎದುರು ತಲೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಭಿತ್ತಿಪತ್ರಗಳನ್ನು ಹಿಡಿದು ನಿಂತ ಪ್ರತಿಭಟನಾಕಾರರು, ಕರಾಳ ದಿನ ಆಚರಿಸಿದರು. ಬ್ಯಾಂಕ್‌ ವಿಲೀನ ವಿರೋಧಿಸಿ ಘೋಷಣೆಗಳನ್ನು ಕೂಗಿದರು.

‘ವಿಜಯ ಬ್ಯಾಂಕ್‌ ಗುಜರಾತಿಗಳ ಪಾಲಾಯ್ತು, ತುಳುನಾಡಿನ ಹೆಮ್ಮೆ ಇಲ್ಲದಾಯ್ತು’, ‘ಎ.ಬಿ.ಶೆಟ್ಟಿ, ಸುಂದರರಾಮ ಶೆಟ್ಟಿ ಶ್ರಮದ ಕೂಸು ವಿಜಯ ಬ್ಯಾಂಕ್‌ ನಾಶ ಮಾಡಿದ ಮೋದಿ ಸರ್ಕಾರಕ್ಕೆ ಧಿಕ್ಕಾರ’, ‘ವಿಜಯ ಬ್ಯಾಂಕ್ ಮುಚ್ಚಿಸುವಾಗ ಮೌನ ಸಮ್ಮತಿ ನೀಡಿದ ಸಂಸದ ನಳಿನ್‌ ಜನತೆಯ ಪ್ರಶ್ನೆಗೆ ಉತ್ತರಿಸಿ’ ಎಂಬ ಪ್ಲೆಕಾರ್ಡ್‌ಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಮಾತನಾಡಿ, ‘ದಕ್ಷಿಣ ಕನ್ನಡದ ನೆಲದಲ್ಲಿ ಹುಟ್ಟಿ, ರಾಷ್ಟ್ರವ್ಯಾಪಿ ವಿಸ್ತರಿಸಿಕೊಂಡಿರುವ ವಿಜಯ ಬ್ಯಾಂಕ್‌ ಅನ್ನು ಬರೋಡಾ ಬ್ಯಾಂಕ್‌ ಮತ್ತು ದೇನಾ ಬ್ಯಾಂಕ್‌ ಜೊತೆ ವಿಲೀನ ಮಾಡಿರುವುದು ಸರಿಯಲ್ಲ. ಇದನ್ನು ವಿರೋಧಿಸಿ ಕರಾಳ ದಿನ ಆಚರಣೆಗೆ ಕರೆನೀಡಿದ್ದೇವೆ’ ಎಂದರು.

ವಿಜಯ ಬ್ಯಾಂಕ್‌ ಜೊತೆ ನಿಕಟವಾದ ಸಂಬಂಧ ಇರಿಸಿಕೊಂಡಿರುವ ಕರಾವಳಿಯ ಜನರ ಭಾವನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಗೌರವಿಸಿಲ್ಲ. ಅತ್ತಾವರದ ಎ.ಬಿ.ಶೆಟ್ಟಿ ಮತ್ತು ಮೂಲ್ಕಿಯ ಸುಂದರರಾಮ ಶೆಟ್ಟಿಯವರು ಶ್ರಮವಹಿಸಿ ವಿಜಯ ಬ್ಯಾಂಕ್‌ ಕಟ್ಟಿದ್ದರು. ಜನರ ಭಾವನೆಗಳನ್ನು ಗೌರವಿಸದೇ ಬ್ಯಾಂಕ್‌ ವಿಲೀನ ಮಾಡಲಾಗಿದೆ. ಸೋಮವಾರದಿಂದ ವಿಜಯ ಬ್ಯಾಂಕ್‌ ಹೆಸರು ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ ಎಂದು ಹೇಳಿದರು.

ವಿಜಯ ಬ್ಯಾಂಕ್‌ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಹೆಗ್ಡೆ ಉಳೇಪಾಡಿ ಮಾತನಾಡಿ, ‘ಈ ಹಿಂದೆ ಕಾಂಗ್ರೆಸ್‌ ಪಕ್ಷ ರಾಜಕೀಯ ಲಾಭಕ್ಕಾಗಿ ವಿಜಯ ಬ್ಯಾಂಕ್‌ ವಿಲೀನದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಬಿಜೆಪಿಯ ಚುನಾಯಿತ ಪ್ರತಿನಿಧಿಗಳಾಗಲೀ ಅಥವಾ ಕಾಂಗ್ರೆಸ್‌ನ ಚುನಾಯಿತ ಪ್ರತಿನಿಧಿಗಳಾಗಲೀ ವಿಜಯ ವಿಜಯ ಬ್ಯಾಂಕ್‌ ಉಳಿಸಲು ಬಲವಾದ ಪ್ರಯತ್ನವನ್ನೇ ಮಾಡಿಲ್ಲ’ ಎಂದು ದೂರಿದರು.

ವಿಜಯ ಬ್ಯಾಂಕ್‌ ವಿಲೀನದ ಕುರಿತು ರಾಜಕೀಯ ಪಕ್ಷಗಳ ನಿಲುವು ತಿಳಿಯಲು ಸಮಿತಿ ಸಭೆಯೊಂದನ್ನು ಆಯೋಜಿಸಿತ್ತು. ಆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ವಿಜಯ ಬ್ಯಾಂಕ್‌ ವಿಲೀನದ ವಿರುದ್ಧ ದೆಹಲಿಗೆ ನಿಯೋಗ ಕರೆದೊಯ್ದು ಹಣಕಾಸು ಸಚಿವರ ಮೇಲೆ ಒತ್ತಡ ಹೇರುವ ಭರವಸೆ ನೀಡಿದ್ದರು. ಆದರೆ, ಎಲ್ಲ ಪಕ್ಷಗಳ ಮುಖಂಡರೂ ಭರವಸೆಯನ್ನು ಮರೆತರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗ ಕಾನೂನು ಹೋರಾಟದ ಮೂಲಕ ವಿಜಯ ಬ್ಯಾಂಕ್‌ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಲೋಕಸಭಾ ಚುನಾವಣೆ ಮುಗಿದು ಹೊಸ ಸರ್ಕಾರದ ಅಸ್ತಿತ್ವಕ್ಕೆ ಬಂದ ಬಳಿಕ ಸರ್ಕಾರವೇ ಸಂಸತ್ತಿನ ಮುಂದೆ ಪ್ರಸ್ತಾವ ಮಂಡಿಸಿ ವಿಲೀನ ಪ್ರಕ್ರಿಯೆಯನ್ನು ಹಿಂತೆಗೆದುಕೊಂಡರೆ ಮಾತ್ರ ವಿಜಯ ಬ್ಯಾಂಕ್‌ ಉಳಿಯುತ್ತದೆ. ವಿಜಯ ಬ್ಯಾಂಕ್‌ ಉಳಿಸಲು ಹೋರಾಟ ನಡೆಸುವುದಾಗಿ ಯಾವ ರಾಜಕೀಯ ಪಕ್ಷವೂ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !