ಟೆಂಪೊ ಕಳವು ಆರೋಪಿಯ ಬಂಧನ

ಬುಧವಾರ, ಏಪ್ರಿಲ್ 24, 2019
27 °C

ಟೆಂಪೊ ಕಳವು ಆರೋಪಿಯ ಬಂಧನ

Published:
Updated:

ಮಂಗಳೂರು: ನಗರದ ಬಂದರು ಪ್ರದೇಶದ ದಕ್ಕೆಯಲ್ಲಿ ನಿಲ್ಲಿದ್ದ ಮೀನು ಸಾಗಣೆಯ 407 ಟೆಂಪೊವನ್ನು ಕಳವು ಮಾಡಿದ್ದ ಆರೋಪದ ಮೇಲೆ ಒಬ್ಬನನ್ನು ಬಂಧಿಸಿರುವ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯ ಪೊಲೀಸರು, ₹ 6 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸುಳ್ಯ ತಾಲ್ಲೂಕಿನ ಗುತ್ತಿಗಾರು ಮುತ್ಲಾಜೆ ನಿವಾಸಿ ಕಿಶೋರ್‌ಕುಮಾರ್‌ (26) ಬಂಧಿತ ಆರೋಪಿ. ಈತನಿಂದ ಟೆಂಪೊ ಸೇರಿದಂತೆ ₹ 6 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಫೆಬ್ರುವರಿ 6ರಂದು ಸಂಜೆಯಿಂದ ಫೆ.7ರ ಬೆಳಿಗ್ಗೆಯ ನಡುವಿನಲ್ಲಿ ಟೆಂಪೊವನ್ನು ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘಕ್ಕೆ ಸೇರಿದ ಟೆಂಪೊವನ್ನು ಅದರ ಚಾಲಕ ಹಬೀಬ್‌ರವರು ಫೆ.6ರ ಸಂಜೆ ಮತ್ಸ್ಯಗಂಧಿ ಐಸ್‌ ಪ್ಲಾಂಟ್‌ ಮತ್ತು ಕೋಲ್ಡ್‌ ಸ್ಟೋರೇಜ್‌ ಎದುರು ನಿಲ್ಲಿಸಿ ಹೋಗಿದ್ದರು. ಫೆ.7ರ ಬೆಳಿಗ್ಗೆ ಬಂದು ನೋಡಿದಾಗ ವಾಹನ ಅಲ್ಲಿರಲಿಲ್ಲ. ಟೆಂಪೊ ಕಳವಾಗಿರುವ ಕುರಿತು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಸೋಮವಾರ ಮಧ್ಯಾಹ್ನ 2.45ರ ಸುಮಾರಿಗೆ ಅದೇ ಟೆಂಪೊದಲ್ಲಿ ಕಿಶೋರ್‌ಕುಮಾರ್‌ ಮೋರ್ಗನ್ಸ್‌ ಗೇಟ್‌ನಿಂದ ಮುಳಿಹಿತ್ಲು ಕಡೆಗೆ ಬರುತ್ತಿದ್ದ. ಈ ಕುರಿತು ದಕ್ಷಿಣ ಠಾಣೆ ಇನ್‌ಸ್ಪೆಕ್ಟರ್ ಎನ್.ಕುಮಾರ್‌ ಆರಾಧ್ಯ ಅವರಿಗೆ ಖಚಿತ ಮಾಹಿತಿ ದೊರಕಿತ್ತು. ಮಾರ್ಗ ಮಧ್ಯದಲ್ಲಿ ವಾಹನವನ್ನು ಅಡ್ಡಗಟ್ಟಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದರು. ಬಳಿಕ ಟೆಂಪೊವನ್ನು ವಶಪಡಿಸಿಕೊಳ್ಳಲಾಗಿದೆ. ಟೆಂಪೊ ಕಳವು ಪ್ರಕರಣದಲ್ಲಿ ಇನ್ನೂ ಇಬ್ಬರು ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ದಕ್ಷಿಣ ಠಾಣೆ ಇನ್‌ಸ್ಪೆಕ್ಟರ್‌ ಎನ್‌.ಕುಮಾರ್ ಆರಾಧ್ಯ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ರಾಜೇಂದ್ರ, ಮಂಜುಳಾ ಎಲ್‌ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !