ಕಾಲು ಜಾರಿ ಬಾವಿಗೆ ಬಿದ್ದು ಬಾಲಕರಿಬ್ಬರ ಸಾವು

ಬುಧವಾರ, ಏಪ್ರಿಲ್ 24, 2019
29 °C

ಕಾಲು ಜಾರಿ ಬಾವಿಗೆ ಬಿದ್ದು ಬಾಲಕರಿಬ್ಬರ ಸಾವು

Published:
Updated:
Prajavani

ಜಮಖಂಡಿ: ಇಲ್ಲಿನ ಪಿ.ಬಿ ಹೈಸ್ಕೂಲ್ ಬಳಿಯ ತಾಲ್ಲೂಕು ಗ್ರಂಥಾಲಯ ಕಟ್ಟಡದ ಹಿಂದಿನ ಬಾವಿಯೊಳಗೆ ಬಿದ್ದು ಇಬ್ಬರು ಬಾಲಕರು ಸಾವಿಗೀಡಾದ ದಾರುಣ ಘಟನೆ ಮಂಗಳವಾರ ಸಂಜೆ ನಡೆದಿದೆ.

ಬಾವಿಯ ಸಮೀಪದ ನಿವಾಸಿಗಳಾದ ನವನಾಥ ಹಾಗೂ ಗಜಾನನ ಪಾಟೀಲ ಸಹೋದರರ ಮಕ್ಕಳಾದ ವೆಂಕಟೇಶ (8) ಹಾಗೂ ಹರೀಶ (7) ಮೃತಪಟ್ಟವರು. ಮಕ್ಕಳಿಬ್ಬರೂ ಗಿರೀಶ ನಗರದ ಶಾಲೆಯಲ್ಲಿ 2 ನೇ ತರಗತಿ ಓದುತ್ತಿದ್ದರು.

ಸಂಜೆ ಅಜ್ಜಿಯೊಂದಿಗೆ ಇಬ್ಬರೂ ಬಾವಿ ಪಕ್ಕದಲ್ಲಿ ಆಟವಾಡುತ್ತಿದ್ದರು. ಕಾರ್ಯನಿಮಿತ್ತ ಅಜ್ಜಿ ಮನೆಯೊಳಗೆ ಹೋಗಿದ್ದರು. ಆಗ ಕಾಲು ಜಾರಿ ಬಾವಿಗೆ ಬಿದ್ದ ಒಬ್ಬನನ್ನು ಮತ್ತೊಬ್ಬ ಬಾಲಕ ಕೈ ಹಿಡಿದು ಎಳೆಯಲು ಹೋಗಿ ತಾನೂ ಬಿದ್ದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ದಿಢೀರನೆ ಕಾಣೆಯಾಗಿದ್ದರಿಂದ ಆತಂಕಗೊಂಡು ಪೋಷಕರು ಹುಡುಕಾಟ ನಡೆಸಿದಾಗ ಒಂದು ಮಗುವಿನ ಶವ  ಬಾವಿಯಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಕೂಡಲೇ ಪೋಲಿಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರ ನೆರವಿನಿಂದ ಕಾರ್ಯಾಚರಣೆ ನಡೆಸಿ ಎರಡೂ ಶವಗಳನ್ನು ಹೊರಗೆ ತೆಗೆದರು.

‘ಮನೆ ಬೆಳಗಬೇಕಿದ್ದ ಕಂದಮ್ಮಗಳು ನಮ್ಮ ಕಣ್ಣ ಮುಂದೆ ಸಾಯುವಂತಾಯಿತ್ತಲ್ಲ,  ನಮ್ಮ ತ್ರಾಸ್ ಯಾರಿಗೆ ಹೇಳಲಿ, ಇಬ್ಬರು ಮಕ್ಕಳು ಬಾಳ ಚುರುಕಿದ್ರು, ಒಂದನ್ನೊಂದು ಬಿಟ್ಟು ಇರ್ತಿದ್ದಿಲ್ಲ, ಮಕ್ಕಳಿಲ್ಲದ ಮನ್ಯಾಗ ಹೆಂಗ ಇರೋಣ’ ಎಂದು ಮೃತ ಬಾಲಕರ ಕುಟುಂಬದವರ ಆಕ್ರಂದನ ನೆರೆದವರಲ್ಲಿ ಕಣ್ಣೀರು ತರಿಸಿತು.

ಸ್ಥಳಕ್ಕೆ ಶಾಸಕ ಆನಂದ ನ್ಯಾಮಗೌಡ ಭೇಟಿ ನೀಡಿ ಮಕ್ಕಳ ಪೋಷಕರಿಗೆ ಸಾಂತ್ವನ ಹೇಳಿದರು.

 
 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !