ಬೆಳಗಿದ ಹಾರ್ದಿಕ್‌; ಮುಂಬೈ ‘ಶತಕ’

ಗುರುವಾರ , ಏಪ್ರಿಲ್ 25, 2019
22 °C
ಕೊನೆಯ ಎರಡು ಓವರ್‌ಗಳಲ್ಲಿ ಹರಿದು ಬಂದ 45 ರನ್‌ಗಳು; ಸೂಪರ್‌ ಕಿಂಗ್ಸ್‌ನ ಡ್ವೇನ್‌ ಬ್ರಾವೊಗೆ 100 ವಿಕೆಟ್

ಬೆಳಗಿದ ಹಾರ್ದಿಕ್‌; ಮುಂಬೈ ‘ಶತಕ’

Published:
Updated:

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ‘ಮಿನಿ ಹೆಲಿಕಾಫ್ಟರ್‌ ಶಾಟ್‌’ಗಳ ಮೂಲಕ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ ನಂತರ ಚುರುಕಿನ ಬೌಲಿಂಗ್ ಮಾಡಿ ಎದುರಾಳಿಗಳನ್ನು ಕಂಗೆಡಿಸಿದರು ಅವರ ಆಲ್‌ರೌಂಡ್ ಆಟ ಮತ್ತು ಸೂರ್ಯಕುಮಾರ್ ಯಾದವ್ (59; 43 ಎಸೆತ, 1 ಸಿಕ್ಸರ್‌, 8 ಬೌಂಡರಿ) ಅವರ ಅಮೋಘ ಆಟದ ಬಲದಿಂದ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಜಯ ಗಳಿಸಿತು.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 37 ರನ್‌ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ 100ನೇ ಜಯ ಸಾಧಿಸಿತು. ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿತು.

ಸೂರ್ಯಕುಮಾರ್ ಯಾದವ್‌, ಕೃಣಾಲ್ ಪಾಂಡ್ಯ (42; 32 ಎ, 1 ಸಿ, 5 ಬೌಂ) ಮತ್ತು ಹಾರ್ದಿಕ್ ಪಾಂಡ್ಯ (25; 8 ಎ, 3 ಸಿ, 1 ಬೌಂ) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್‌ 170 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಮಹೇಂದ್ರ ಸಿಂಗ್ ಧೋನಿ ಬಳಗ ಒಂದು ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಅಂಬಟಿ ರಾಯುಡು ಅವರ ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ ಆರು ರನ್‌ ಆಗುವಷ್ಟರಲ್ಲಿ ಶೇನ್ ವ್ಯಾಟ್ಸನ್ ಕೂಡ ವಾಪಸಾದರು. ಕೇದಾರ್ ಜಾಧವ್ ಅವರನ್ನು ಬಿಟ್ಟರೆ ಬೇರೆ ಯಾರಿಗೂ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಮಾಡಲು ಆಗಲಿಲ್ಲ. ನಾಲ್ಕು ಮಂದಿ ಮಾತ್ರ ಎರಡಂಕಿ ಮೊತ್ತ ದಾಟಿದರು. ಧೋನಿ 21 ಎಸೆತಗಳಲ್ಲಿ 12 ರನ್‌ ಗಳಿಸಿದರು.

ಎರಡು ಓವರ್‌ಗಳಲ್ಲಿ 45 ರನ್‌: ಮುಂಬೈ ಇಂಡಿಯನ್ಸ್‌ ಇನಿಂಗ್ಸ್‌ನ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಅವರ ಛಲದಿಂದಾಗಿ ಅಂತಿಮ ಎರಡು ಓವರ್‌ಗಳಲ್ಲಿ 45 ರನ್‌ಗಳು ಹರಿದು ಬಂದವು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ತಂಡದ ಬೌಲರ್‌ಗಳು ಕಟ್ಟುನಿಟ್ಟಾದ ದಾಳಿ ನಡೆಸಿ ದರು. ಇದರಿಂದಾಗಿ ಮುಂಬೈ ತಂಡಕ್ಕೆ ಹೆಚ್ಚು ರನ್‌ ಗಳಿಸಲು ಸಾಧ್ಯವಾಗಲಿಲ್ಲ. ಮಧ್ಯಮವೇಗಿ  ದೀಪಕ್ ಚಾಹರ್ ಮೂರನೇ ಓವರ್‌ನಲ್ಲಿ ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಕಬಳಿಸಿದರು. ನಾಯಕ ರೋಹಿತ್ ಶರ್ಮಾ ಎಂಟನೇ ಓವರ್‌ನಲ್ಲಿ ಔಟಾದರು. ಯುವರಾಜ್ ಸಿಂಗ್ ಕೂಡ ಮಿಂಚಲಿಲ್ಲ.

ಸೂರ್ಯಕುಮಾರ್ ಯಾದವ್ ಅವರ ಜೊತೆಗೂಡಿದ ಕೃಣಾಲ್ ಪಾಂಡ್ಯ  ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ  62 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು ನೂರರ ಗಡಿ ದಾಟಲು ಸಾಧ್ಯವಾಯಿತು. ಆದರೆ ರನ್‌ ಗಳಿಕೆಯ ವೇಗ ಕಡಿಮೆಯಿತ್ತು. ಡ್ವೇನ್‌ ಬ್ರಾವೊಗೆ ಸೂರ್ಯಕುಮಾರ್ ವಿಕೆಟ್‌ ಒಪ್ಪಿಸಿದಾಗ ತಂಡವು 18 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 125 ರನ್‌ ಗಳಿಸಿತ್ತು. ಆಗ ಜೊತೆಗೂಡಿದ ಹಾರ್ದಿಕ್ ಮತ್ತು ಪೊಲಾರ್ಡ್‌ ಆರ್ಭಟಿಸಿದರು.

ಅದರಲ್ಲೂ ಹಾರ್ದಿಕ್ ಅವರ ಅಬ್ಬರ ಜೋರಾಗಿತ್ತು. ಎರಡು ಬಾರಿ ಅವರು ಹೆಲಿಕಾಪ್ಟರ್‌ ಶಾಟ್‌ಗಳಲ್ಲಿ ಸಿಕ್ಸರ್‌ ಎತ್ತಿದರು. ಡ್ವೇನ್ ಬ್ರಾವೊ ಐಪಿಎಲ್‌ನಲ್ಲಿ 100 ವಿಕೆಟ್‌ ಗಳಿಸಿದ ಸಾಧನೆ ಮಾಡಿದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !