ಗದ್ದಿಗೌಡರ ಗೆಲುವು ಸೂರ್ಯ, ಚಂದ್ರರಷ್ಟೇ ಸತ್ಯ: ಯಡಿಯೂರಪ್ಪ ಭವಿಷ್ಯ

ಶುಕ್ರವಾರ, ಏಪ್ರಿಲ್ 19, 2019
22 °C
ಬಿಜೆಪಿ ರೋಡ್‌ ಶೋ

ಗದ್ದಿಗೌಡರ ಗೆಲುವು ಸೂರ್ಯ, ಚಂದ್ರರಷ್ಟೇ ಸತ್ಯ: ಯಡಿಯೂರಪ್ಪ ಭವಿಷ್ಯ

Published:
Updated:
Prajavani

ಬಾಗಲಕೋಟೆ: ‘ಸೂರ್ಯ–ಚಂದ್ರರು ಇರುವುದು ಎಷ್ಟು ಸತ್ಯವೋ, ಪಿ.ಸಿ.ಗದ್ದಿಗೌಡರ ನಾಲ್ಕನೇ ಬಾರಿಗೆ ಸಂಸದರಾಗುವುದು ಹಾಗೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಅಷ್ಟೇ ಸತ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ‍ಪಿ.ಸಿ.ಗದ್ದಿಗೌಡರ ಪರ ರೋಡ್‌ ಶೋನಲ್ಲಿ ಪಾಲ್ಗೊಂಡು ನಂತರ ನೆರೆದಿದ್ದ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಾಮಾಣಿಕ ಸಂಸದರು ಹೇಗಿರಬೇಕು ಎಂಬುದಕ್ಕೆ ಗದ್ದಿಗೌಡರು ನಿದರ್ಶನ. ಅವರ ಬಳಿ ದುಡ್ಡಿಲ್ಲ. ಆದರೆ ಪ್ರಾಮಾಣಿಕತೆ ಇದೆ. ಹಾಗಾಗಿ ನಿಶ್ಚಿತವಾಗಿ ಗದ್ದಿಗೌಡರ ಗೆಲುವು ಸಾಧಿಸುತ್ತಾರೆ’ ಎಂದು ಭವಿಷ್ಯ ನುಡಿದರು.

‘ಗದ್ದಿಗೌಡರ ಈ ಬಾರಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಆದರೂ ಕಾರ್ಯಕರ್ತರು ಮೈ ಮರೆಯದೇ ಮುಂದಿನ ಬಾರಿ ಗದ್ದಿಗೌಡರಿಗೆ ಪ್ರತಿಸ್ಪರ್ಧಿಯೇ ಇರಬಾರದು. ಅಷ್ಟೊಂದು ಅಂತರದಿಂದ ಗೆಲುವು ತಂದುಕೊಡಿ’ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದಿಂದ ವಿಶ್ವಾಸದ್ರೋಹ: ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೇವಲ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ವಿಶ್ವಾಸದ್ರೋಹ ಮಾಡಿದ್ದಾರೆ. ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದರು.

ನರೇಂದ್ರ ಮೋದಿ ಬಡ ರೈತರಿಗೆ ವಾರ್ಷಿಕ $ 6 ಸಾವಿರ ನೆರವು ಕೊಡುವ ಮೂಲಕ ಅವರ ಬೆಂಬಲಕ್ಕೆ ನಿಂತಿದ್ದಾರೆ. ರಾಹುಲ್‌ಗಾಂಧಿ ಪ್ರಣಾಳಿಕೆಯಲ್ಲಿ ಸುಳ್ಳು ಆಶ್ವಾಸನೆ ಕೊಟ್ಟಿದ್ದಾರೆ. ಅವರ ಪ್ರಣಾಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷದವರೇ ಅವರನ್ನು ನಂಬದ ಸ್ಥಿತಿ ಉಂಟಾಗಿದೆ. ಇಡೀ ದೇಶದಲ್ಲಿ ಈಗ ಬಿಜೆಪಿ ಗಾಳಿ ಬೀಸುತ್ತಿದೆ. ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲು ನೀವೆಲ್ಲಾ ಕೈ ಜೋಡಿಸಿ ಎಂದರು.

ಬಿಜೆಪಿ ಕೇಂದ್ರದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ವಿರೋಧಿಗಳು ಒಂದಾಗಿ ಮಹಾಘಟಬಂಧನ್ ಎಂದು ಹೆಸರಿಟ್ಟುಕೊಂಡಿದ್ದಾರೆ. ಆದರೆ ಒಬ್ಬರ ಮುಖ ಮತ್ತೊಬ್ಬರು ನೋಡುವುದಿಲ್ಲ. ಪಶ್ಚಿಮ ಬಂಗಾಳದಲ್ಲೂ ಬಿಜೆಪಿ 25ರಿಂದ 26 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು.

‘ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಆದರೆ. ಆ ಕಾಂಗ್ರೆಸ್ ಇಂದು ರಾಷ್ಟ್ರ ವಿರೋಧಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಚುನಾವಣಾ ಪ್ರಣಾಳಿಕೆ ರೂಪಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

‘ರಾಷ್ಟ್ರಭಕ್ತಿಯ ನಿಟ್ಟಿನಲ್ಲಿ ಯಾವ ಪಕ್ಷ ಹೋಗುತ್ತಿದೆ ಎಂಬುದನ್ನು ದೇಶದ ಜನ ನೋಡಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಲಿದೆ’ ಎಂದರು.

‘ಹಿಂದುಳಿದ ವರ್ಗದವರಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಆಯಾ ಜಿಲ್ಲಾ ಸಮಿತಿ ಯಾರಿಗೆ ಕೊಡಬೇಕು ಎಂದು ಶಿಫಾರಸು ಮಾಡಿದೆಯೋ ಪಕ್ಷ ಅವರಿಗೆ ಕೊಟ್ಟಿದೆ. ಹಾಗಿದ್ದರೆ ಕಾಂಗ್ರೆಸ್ ಕ್ರೈಸ್ತರಿಗೆ ಟಿಕೆಟ್ ಕೊಟ್ಟಿಲ್ಲವೇಕೆ’ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !