ಜೆಡಿಎಸ್‌ನವರಿಗೂ ಗೆಲ್ಲಿಸುವ ತವಕ ಇರಲಿ: ಶಾಸಕ ಡಾ.ಕೆ.ಸುಧಾಕರ್ ಸಲಹೆ

ಶನಿವಾರ, ಏಪ್ರಿಲ್ 20, 2019
27 °C
ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

ಜೆಡಿಎಸ್‌ನವರಿಗೂ ಗೆಲ್ಲಿಸುವ ತವಕ ಇರಲಿ: ಶಾಸಕ ಡಾ.ಕೆ.ಸುಧಾಕರ್ ಸಲಹೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರನ್ನು ಗೆಲ್ಲಿಸಬೇಕು ಎನ್ನುವ ತವಕ ಕಾಂಗ್ರೆಸ್‌ನವರಿಗಷ್ಟೇ ಅಲ್ಲದೆ ಮೈತ್ರಿ ಪಾಲುದಾರರಾದ ಜೆಡಿಎಸ್‌ನವರಿಗೂ ಇರಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಮಂಚನಬಲೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪಟ್ರೇನಹಳ್ಳಿ, ಅಜ್ಜವಾರ, ಹೊಸಹುಡ್ಯ, ಅಂಗರೇಖನಹಳ್ಳಿ, ದಿಬ್ಬೂರು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗುರುವಾರ ನಡೆದ ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಗಳಲ್ಲಿ ಅವರು ಮಾತನಾಡಿದರು.

‘ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕಮಾತ್ರ ಉದ್ದೇಶದಿಂದ ಕಾಂಗ್ರೆಸ್ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಿ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಸಮ್ಮಿಶ್ರ ಸರ್ಕಾರದ ಉಳಿವಿಗೆ ಈ ಚುನಾವಣೆಯ ಫಲಿತಾಂಶ ಬಹಳ ಮುಖ್ಯ. ಆದ್ದರಿಂದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಈಗಿನ ಸಮ್ಮಿಶ್ರ ಸರ್ಕಾರ ಜನಸಾಮಾನ್ಯರಿಗೆ ಮತ್ತು ರೈತರಿಗಾಗಿ ಜಾರಿ ಮಾಡಿರುವ ಜನಪರ ಯೋಜನೆಗಳು ನಮ್ಮ ಗೆಲುವಿಗೆ ಶಕ್ತಿ ಕೊಡಬೇಕು. ಹೀಗಾಗಿ ಯೋಜನೆಗಳ ಬಗ್ಗೆ ಎರಡು ಪಕ್ಷಗಳ ಕಾರ್ಯಕರ್ತರು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಒಟ್ಟಾಗಿ ಚುನಾವಣೆ ಎದುರಿಸುವ ಕೆಲಸ ಮಾಡಬೇಕು’ ಎಂದರು.

‘ಈ ದಿನ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರು ಒಕ್ಕಲಿಗರು ಅನ್ನೋ ಕಾರಣಕ್ಕೆ ಅವರನ್ನು ನೋಡಬೇಕೇ ಅಥವಾ ಮುಖ್ಯಮಂತ್ರಿ ಸ್ಥಾನದಲ್ಲಿರುವ ಕುಮಾರಸ್ವಾಮಿ ಅವರನ್ನು ನೋಡಬೇಕೇ ಎಂದು ಜನ ತೀರ್ಮಾನ ಮಾಡಬೇಕಾಗಿದೆ. ಒಕ್ಕಲಿಗ ಎಂದರೆ ಅದು ಜಾತಿಯಲ್ಲ. ಅದೊಂದು ಜೀವನ ಶೈಲಿ. ರಾಜ್ಯದಲ್ಲಿ ಅನೇಕ ಜನ ಒಕ್ಕಲಿಗರು ಮುಖ್ಯಮಂತ್ರಿಯಾಗಿದ್ದರು. ಆದರೂ ಚಿಕ್ಕಬಳ್ಳಾಪುರಕ್ಕೆ ನೀರು ತರಲು ವೀರಪ್ಪ ಮೊಯಿಲಿ ಅವರೇ ಬರಬೇಕಾಯಿತು’ ಎಂದು ಹೇಳಿದರು.

‘ಎತ್ತಿನಹೊಳೆ ಸಾವಿರಾರು ಕೋಟಿಯ ಯೋಜನೆ. ಅದು ಪೂರ್ಣವಾಗಿ ಅನುಷ್ಠಾನಗೊಳ್ಳಲು ಸ್ಪಲ್ಪ ತಡವಾಗಬಹುದು. ಆದ್ದರಿಂದ ಎಚ್.ಎನ್ ವ್ಯಾಲಿ ಮತ್ತು ಕೆ.ಸಿ ವ್ಯಾಲಿಯಿಂದ ನೀರು ತಂದು ಕೆರೆಗಳಿಗೆ ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಯೋಜನೆ ಕೈಗೆತ್ತಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ದೇಶದಲ್ಲಿ ಬಡತನ ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆಯಾಗಬೇಕು. ಹೆಚ್ಚಾರೆ ಅಂತಕಲಹ ಹೆಚ್ಚಾಗಿ ಘರ್ಷಣೆಗಳಾಗುತ್ತವೆ. ಆದ್ದರಿಂದ ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಕಾಂಗ್ರೆಸ್‌ ದೇಶದ ಬಡವರಿಗೆ ಪ್ರತಿ ತಿಂಗಳಿಗೆ ₨6 ಸಾವಿರದಂತೆ ಕನಿಷ್ಠ ಆದಾಯ ಒದಗಿಸುವ ‘ನ್ಯಾಯ್’ ಯೋಜನೆ ಜಾರಿಗೆ ತರುವ ಭರವಸೆ ನೀಡಿದೆ. ಈ ಬಗ್ಗೆ ಮತದಾರರಿಗೆ ತಿಳುವಳಿಕೆ ಮೂಡಿಸಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ ರಾಮಸ್ವಾಮಿ, ಕೋಚಿಮುಲ್ ನಿರ್ದೇಶಕ ಕೆ.ವಿ ನಾಗರಾಜ್, ಕೆಪಿಸಿಸಿ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಮುಖಂಡರಾದ ಯಲುವಳ್ಳಿ ಎನ್.ರಮೇಶ್, ಮೋಹನ್, ಕೃಷ್ಣಮೂರ್ತಿ, ಬನ್ನಿಕುಪ್ಪೆ ಸೀನಪ್ಪ, ಲಿಂಗಾರೆಡ್ಡಿ, ದಯಾನಂದ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !