ಲೋಡ್‌ಗಟ್ಟಲೇ ಮಿನರ‌ಲ್ ವಾಟರ್ ಇಳಿಸಿದ್ದರು!

ಶನಿವಾರ, ಏಪ್ರಿಲ್ 20, 2019
29 °C
1991ರ ಲೋಕಸಭಾ ಚುನಾವಣೆ: ಜಿಲ್ಲೆಯ ಜನ ಮೊದಲ ಬಾರಿಗೆ ಬಾಟಲಿ ನೀರು ಕಂಡಿದ್ದರು

ಲೋಡ್‌ಗಟ್ಟಲೇ ಮಿನರ‌ಲ್ ವಾಟರ್ ಇಳಿಸಿದ್ದರು!

Published:
Updated:

ಬಾಗಲಕೋಟೆ: ಖನಿಜಯುಕ್ತ ಶುದ್ಧ ಕುಡಿಯುವ ನೀರನ್ನು (ಮಿನರಲ್ ವಾಟರ್) ಮೊದಲ ಬಾರಿಗೆ ಬಾಗಲಕೋಟೆ ಜಿಲ್ಲೆಯ ಜನತೆಗೆ ಪರಿಚಯಿಸಿದ ಶ್ರೇಯ 1991ರ ಲೋಕಸಭಾ ಚುನಾವಣೆಗೆ ಸಲ್ಲುತ್ತದೆ. 

ಅಲ್ಲಿಯವರೆಗೂ ಮಿನರಲ್ ವಾಟರ್ ಎಂಬುದೆಲ್ಲ ಜಿಲ್ಲೆಯ ಜನರಿಗೆ ಕನಸಿನ ಮಾತಾಗಿತ್ತು. ಸಿನಿಮಾದಲ್ಲಿ ಇಲ್ಲವೇ ವಿದೇಶಕ್ಕೆ ಹೋದಾಗ ನೋಡಿರುತ್ತಿದ್ದರು. ಬೆಂಗಳೂರಿನಲ್ಲಿ ಆಗರ್ಭ ಶ್ರೀಮಂತರ ಮನೆಗಳಲ್ಲಿ ಇಲ್ಲವೇ ತಾರಾ ದರ್ಜೆ ಹೋಟೆಲ್‌ಗಳಲ್ಲಿ ಉಳಿದಾಗ ಮಾತ್ರ ಆಗ ಬಾಟಲಿಯಲ್ಲಿ ನೀರು ಕಾಣಸಿಗುತ್ತಿತ್ತು. 

ಬರವೇ ಮೈವೆತ್ತಂತಿದ್ದ ಜಿಲ್ಲೆಯಲ್ಲಿ ಆಗ ಬೇಸಿಗೆಯಲ್ಲಿ ಕುಡಿಯಲು ಹನಿ ನೀರು ಸಿಗುವುದೇ ದುಸ್ತರವಿತ್ತು. ಅಂತಹ ಕಾಲದಲ್ಲಿ ಬಾಟಲಿಯಲ್ಲಿ ಸಂಸ್ಕರಿಸಿದ ಶುದ್ಧ ಕುಡಿಯುವ ನೀರು ತುಂಬಿಟ್ಟುಕೊಳ್ಳುವ ಕಲ್ಪನೆಯೇ ವಿಚಿತ್ರವೆನಿಸಿತ್ತು. ಆದರೆ 90ರ ದಶಕದ ಆರಂಭದ ಆ ಚುನಾವಣೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು.

ಬಾಗಲಕೋಟೆಯಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ರಾಮಕೃಷ್ಣ ಹೆಗಡೆ ಸ್ಪರ್ಧಿಸಿದ್ದರು. ಹಾಗಾಗಿ ಈ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು. ಸಿದ್ದು ನ್ಯಾಮಗೌಡ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರೂ ಅವರ ಬೆನ್ನಿಗೆ ಸ್ವತಃ ಅಂದಿನ ಮುಖ್ಯಮಂತ್ರಿ ಸಾರೇಕೊಪ್ಪದ ಬಂಗಾರಪ್ಪ ನಿಂತಿದ್ದರು. ಚುನಾವಣೆ ಪರೋಕ್ಷವಾಗಿ ಬಂಗಾರಪ್ಪ ಹಾಗೂ ಹೆಗಡೆ ನಡುವಿನ ಸಮರ ಎಂಬಂತೆ ಬಿಂಬಿತವಾಗಿತ್ತು. ಎರಡು ಮದಗಜಗಳ ನಡುವಿನ ಹೋರಾಟದ ಕಣವಾಗಿ ಬಾಗಲಕೋಟೆ ಪ್ರತಿಷ್ಠೆಯ ಕ್ಷೇತ್ರವಾಗಿ ಮಾರ್ಪಟಿತ್ತು. ಬಿಜೆಪಿಯಿಂದ ಪಿ.ಎಚ್.ಪೂಜಾರ ಸ್ಪರ್ಧಿಸಿದ್ದರು.

ಲೋಡ್‌ಗಟ್ಟಲೇ ಇಳಿಸಿದ್ದರು:

ರಾಮಕೃಷ್ಣ ಹೆಗಡೆ ಅವರ ಪರವಾಗಿ ಪ್ರಚಾರಕ್ಕೆಂದು ದೆಹಲಿ, ಮುಂಬೈ, ಬೆಂಗಳೂರು, ಮೈಸೂರು ಸೇರಿದಂತೆ ದೇಶದ ಎಲ್ಲೆಡೆಯಿಂದ ಜನತಾಪರಿವಾರದ ನಾಯಕರು ಹಾಗೂ ಅಭಿಮಾನಿಗಳು 20 ದಿನ ಮೊದಲೇ ಬಾಗಲಕೋಟೆಗೆ ಬಂದು ವಾಸ್ತವ್ಯ ಹೂಡಿದ್ದರು. ಮುಖ್ಯಮಂತ್ರಿ ಬಂಗಾರಪ್ಪ ಕೂಡ ವಾರಗಟ್ಟಲೇ ಇಲ್ಲಿ ಕ್ಯಾಂಪ್ ಮಾಡಿದ್ದರು.

ಮೊದಲೇ ಇಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದ ಕಾರಣ ಪ್ರಚಾರಕ್ಕೆ ಬಂದವರಿಗೆ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಎರಡೂ ಪಕ್ಷದವರು ಲೋಡ್‌ಗಟ್ಟಲೇ ಮಿನರಲ್ ವಾಟರ್ ಬಾಟಲಿಗಳನ್ನು ತಂದು ಇಲ್ಲಿನ ಹೌಸಿಂಗ್‌ ಕಾಲೊನಿಯ ಎರಡು ಮನೆಗಳಲ್ಲಿ ಇಳಿಸಿದ್ದರು. ಅದೇ ಆಗ ಜಿಲ್ಲೆಯಲ್ಲಿ ಚರ್ಚೆಯ ವಿಚಾರವಾಗಿತ್ತು ಎಂದು ಅಂದಿನ ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ ನೆನಪಿಸಿಕೊಳ್ಳುತ್ತಾರೆ.

‘ನಮ್ಮ ಜನ ಮಿನರಲ್ ವಾಟರ್ ಬಾಟಲಿ ನೋಡಿದ್ದು ಅದೇ ಮೊದಲು. ಅಲ್ಲಿ ಏನು ನೀರು ಕೊಡಾಕ್ತತ್ತಾರ್ರಿ ಎಂದು ಅದನ್ನೇ ಕೌತುಕವೆಂಬಂತೆ ಪರಸ್ಪರ ಮಾತಾಡಿಕೊಳ್ಳುತ್ತಿದ್ದರು. ಪ್ರಚಾರಕ್ಕೆ ಹೋದ ಮುಖಂಡರು ಕೈಚೀಲದಲ್ಲಿ ನೀರಿನ ಬಾಟಲಿ ಇಟ್ಟುಕೊಂಡು ಹೋಗುತ್ತಿದ್ದರು. ಮನೆಗೆ ಓಟು ಕೇಳಲು ಬಂದವರು, ಸಭೆ, ಸಮಾರಂಭಗಳಲ್ಲಿ ಪಾಲ್ಗೊಂಡು ದಣಿದವರು ಬಾಟಲಿ ಹೊರ ತೆಗೆದು ನೀರು ಕುಡಿಯಲು ಮುಂದಾದರೆ ಅಲ್ಲಿ ನೆರೆದವರು ಅದನ್ನೇ ಅಚ್ಚರಿಯಿಂದ ನೋಡುತ್ತಿದ್ದರು. ನೀರು ಖಾಲಿಯಾಗಿ ಬಾಟಲಿ ಎಸೆದರೆ ಅದನ್ನೇ ನಿಧಿ ಸಿಕ್ಕಂತೆ ಮನೆಗೊಯ್ದು ಕಾಪಿಟ್ಟುಕೊಳ್ಳುತ್ತಿದ್ದರು. ನೀರಿನ ಬಾಟಲಿ ಸಂಗ್ರಹಿಸಿ ಇಟ್ಟಿದ್ದ ಕೊಠಡಿಗಳನ್ನು ನೋಡಲು ಗುಂಪು ಗುಂ‍ಪಾಗಿ ಹೋಗುತ್ತಿದ್ದರು ’ ಎಂದು ಪೂಜಾರ ನಗೆ ಬೀರುತ್ತಾರೆ.

ಯಡಿಯೂರಪ್ಪ, ಅನಂತಕುಮಾರ ಒತ್ತಾಸೆ..

ತೀವ್ರ ಪೈಪೋಟಿಯಿಂದ ಕೂಡಿದ್ದ 1991ರ ಲೋಕಸಭಾ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡಗೆ 2.76,849 ಮತಗಳು ಬಿದ್ದರೆ, ರಾಮಕೃಷ್ಣ ಹೆಗಡೆಗೆ 2.55,645 ಮತಗಳು ಬಿದ್ದಿದ್ದವು. ಕೇವಲ 21,204 ಮತಗಳಿಂದ ಹೆಗಡೆ ಸೋತಿದ್ದರು. ವಿಶೇಷವೆಂದರೆ ಆಗ ಬಿಜೆಪಿಯ ಪಿ.ಎಚ್.ಪೂಜಾರ 33,681 ಮತ ಪಡೆದಿದ್ದರು.

‘ಸೋಲುವುದು ಖಚಿತವಿದ್ದರೂ ಸೈದ್ಧಾಂತಿಕ ಕಾರಣಕ್ಕೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದೆನು. ಆಗ ಯಡಿಯೂರಪ್ಪ ಹಾಗೂ ಅನಂತಕುಮಾರ ಒತ್ತಾಸೆಯಾಗಿ ನಿಂತಿದ್ದರು. ನಾಮಪತ್ರ ಸಲ್ಲಿಸುವಂತೆ ಸ್ವತಃ ಯಡಿಯೂರಪ್ಪ ಅವರೇ ಬಾಗಲಕೋಟೆಯ ಕರಣೆ ಸೈಕಲ್ ಮಾರ್ಟ್‌ಗೆ ಕರೆ ಮಾಡಿ ಸಂದೇಶ ಕಳುಹಿಸಿದ್ದರು’ ಎಂದು ಪೂಜಾರ ನೆನಪಿಸಿಕೊಳ್ಳುತ್ತಾರೆ.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !