ಮಂಡ್ಯದಲ್ಲಿ ಮೈತ್ರಿ ಬೇಗುದಿ: ಸಿದ್ದರಾಮಯ್ಯ ಪ್ರಚಾರದತ್ತ ಚಿತ್ತ

ಶನಿವಾರ, ಏಪ್ರಿಲ್ 20, 2019
31 °C

ಮಂಡ್ಯದಲ್ಲಿ ಮೈತ್ರಿ ಬೇಗುದಿ: ಸಿದ್ದರಾಮಯ್ಯ ಪ್ರಚಾರದತ್ತ ಚಿತ್ತ

Published:
Updated:
Prajavani

ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಸ್ಥಳೀಯ ಕಾಂಗ್ರೆಸ್‌ ಮುಖಂಡರ ಮನವೊಲಿಸಲು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಣಕ್ಕಿಳಿದಿದ್ದು ಶೀಘ್ರ ನಗರಕ್ಕೆ ಭೇಟಿ ನೀಡುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ ಮುಖಂಡರ ಜೊತೆ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಈಗಾಗಲೇ ಮಾತನಾಡಿ ನಿಖಿಲ್‌ ಪರ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಹೈಕಮಾಂಡ್‌ ಕೂಡ ನಿಖಿಲ್‌ ಪರ ನಿಲ್ಲುವಂತೆ ಸೂಚಿಸಿದೆ. ಆದರೂ ಶೇ 80ಕ್ಕೂ ಹೆಚ್ಚು ಕಾರ್ಯಕರ್ತರು ಹೈಕಮಾಂಡ್‌ ಸೂಚನೆ ಮೀರಿ ಸುಮಲತಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಕೆಲವರನ್ನು ಉಚ್ಛಾಟನೆ ಮಾಡಿದ್ದರೂ ಅದಕ್ಕೆ ಸೊಪ್ಪು ಹಾಕದೆ ಪಕ್ಷೇತರ ಅಭ್ಯರ್ಥಿ ಪ್ರಚಾರದಲ್ಲಿ ಕಾಂಗ್ರೆಸ್‌ ಧ್ವಜ ಪ್ರದರ್ಶನ ಮಾಡುತ್ತಿದ್ದಾರೆ.

ನಿಖಿಲ್‌ ಪರ ಪ್ರಚಾರ ನಡೆಸಲು ಸಿದ್ದರಾಮಯ್ಯ ಅವರಿಗೆ ಏ.12ರಂದು ದಿನಾಂಕ ನಿಗದಿಯಾಗಿದೆ. ಆದರೆ ಅದಕ್ಕೂ ಮೊದಲೇ ಭೇಟಿ ನೀಡಿ ಕಾಂಗ್ರೆಸ್‌ ಮುಖಂಡರ ಸಭೆ ನಡೆಸಲಿದ್ದಾರೆ. ತೆರೆಮರೆಯಲ್ಲಿ ಸುಮಲತಾ ಪರ ನಿಂತಿರುವ ಕಾಂಗ್ರೆಸ್‌ ಮುಖಂಡರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡರ ಮನವೊಲಿಸಲಿದ್ದಾರೆ. ಬೆಂಬಲಿಗರಿಗೆ ಬುದ್ಧಿ ಹೇಳುವಂತೆ ಸೂಚನೆ ನೀಡಲಿದ್ದಾರೆ. ನಂತರ ಕ್ಷೇತ್ರದ ಚಿತ್ರಣ ಸಂಪೂರ್ಣವಾಗಿ ಬದಲಾಗಲಿದೆ. ಕಾಂಗ್ರೆಸ್‌ ಅಭ್ಯರ್ಥಿಗಳು ಕಣಕ್ಕಿಳಿದಿರುವ ಕಡೆ ಜೆಡಿಎಸ್‌ ಬೆಂಬಲ ಪಡೆಯಲು ಇದು ಅನಿವಾರ್ಯ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಕಾಂಗ್ರೆಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಕ್ಷೇತ್ರಗಳಲ್ಲಿ ಜೆಡಿಎಸ್‌ನಿಂದ ಯಾವುದೇ ಅಸಮಾಧಾನ ಇಲ್ಲ. ಆದರೆ ಮಂಡ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ನಡವಳಿಕೆಯ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಅವರು ಎಲ್ಲವನ್ನೂ ಸರಿ ಮಾಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳಿದರು.

‘ಎಲ್ಲವೂ ಕೈಮೀರಿ ಹೋಗಿದೆ, ಸಿದ್ದರಾಮಯ್ಯ ಬಂದರೂ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿಕೆ ನೀಡಿರುವುದು ಕೂತೂಹಲಕ್ಕೆ ಕಾರಣವಾಗಿದೆ. ಹೀಗಾಗಿ ಎಲ್ಲರ ಚಿತ್ತ ಸಿದ್ದರಾಮಯ್ಯ ಅವರತ್ತ ನೆಟ್ಟಿದೆ.

ಹಾರಾಡಿದ ಜೆಡಿಎಸ್‌ ಧ್ವಜ

ಸುಮಲತಾ ಪ್ರಚಾರದ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಧ್ವಜಗಳು ರಾರಾಜಿಸುವುದು ಸಾಮಾನ್ಯವಾಗಿದೆ. ಆದರೆ ಶುಕ್ರವಾರ ತಾಲ್ಲೂಕಿನ ಹನಿಯಂಬಾಡಿ ಗ್ರಾಮದಲ್ಲಿ ಸುಮಲತಾ ಪ್ರಚಾರ ಮಾಡುತ್ತಿದ್ದಾಗ ಜೆಡಿಎಸ್‌ ಧ್ವಜ ಕೆಲ ಹೊತ್ತು ಹಾರಾಡಿತು. ವ್ಯಕ್ತಿಯೊಬ್ಬ ಜೆಡಿಎಸ್‌ ಧ್ವಜ ಪ್ರದರ್ಶನ ಮಾಡಿದರು. ಆದರೆ ಆತನನ್ನು ಕಾಂಗ್ರೆಸ್‌ ಮುಖಂಡರು ತಡೆದರು.

ಜೋಡೆತ್ತಿಗೆ ವಿಶ್ರಾಂತಿ

ಕಳೆದ ನಾಲ್ಕು ದಿನಗಳಲ್ಲಿ ಕ್ಷೇತ್ರದ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಚಾರ ಮಾಡಿ ಪ್ರತ್ಯೇಕ ಪ್ರಚಾರ ನಡೆಸಿದ ನಟರಾದ ದರ್ಶನ್‌–ಯಶ್‌ ಮೂರು ದಿನಗಳ ಕಾಲ ವಿಶ್ರಾಂತಿಗೆ ತೆರಳಿದ್ದಾರೆ. ದರ್ಶನ್‌ ಅವರಿಗೆ ಪ್ರಚಾರದ ವೇಳೆ ಕೈ ನೋವಾಗಿದ್ದು ಚಿಕಿತ್ಸೆಗೆ ತೆರಳಿದ್ದಾರೆ. ಯುಗಾದಿ ಮುಗಿದ ನಂತರ ಏ.8ರಿಂದ ಮತ್ತೆ ಪ್ರಚಾರದಲ್ಲಿ ತೊಡಗಲಿದ್ದಾರೆ ಎಂದು ಸುಮಲತಾ ಬೆಂಬಲಿಗರು ತಿಳಿಸಿದರು.

ನಿಖಿಲ್‌ ಕುಮಾರಸ್ವಾಮಿ ಶುಕ್ರವಾರ ನಗರದ ಜಾಮಿಯಾ ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಮುಸ್ಲಿಂ ಬಡಾವಣೆಗಳಲ್ಲಿ ಉರ್ದು ಭಾಷೆಯಲ್ಲಿ ಮುದ್ರಿಸಿದ ಕರಪತ್ರ ಹಂಚಿ ಮತಯಾಚನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !