ಬಿ.ಎನ್.ಬಚ್ಚೇಗೌಡರಿಗೆ ಆರ್‌ಪಿಐ ಬೆಂಬಲ

ಶನಿವಾರ, ಏಪ್ರಿಲ್ 20, 2019
31 °C
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ರಿಪಬ್ಲಿಕನ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಘೋಷಣೆ

ಬಿ.ಎನ್.ಬಚ್ಚೇಗೌಡರಿಗೆ ಆರ್‌ಪಿಐ ಬೆಂಬಲ

Published:
Updated:

ಚಿಕ್ಕಬಳ್ಳಾಪುರ: ‘ಭವಿಷ್ಯದ ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ಭಾರತೀಯ ರಿಪಬ್ಲಿಕನ್‌ ಪಕ್ಷ (ಆರ್‌ಪಿಐ) ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತಿದ್ದು, ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರಿಗೆ ನಾವು ಬೇಷರತ್ ಬೆಂಬಲ ನೀಡುತ್ತಿದ್ದೇವೆ’ ಎಂದು ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ತಿಳಿಸಿದರು.

ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸಿಗೂ, ಇಂದು ರಾಜಕೀಯ ಅಧಿಕಾರಕ್ಕಾಗಿ ಹೋರಾಡುತ್ತಿರುವ ಕಾಂಗ್ರೆಸ್ ನಡುವೆ ಬಹಳ ವ್ಯತ್ಯಾಸವಿದೆ. ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನವರು ಅಭಿವೃದ್ಧಿಗಿಂತ ಲೂಟಿ ಹೊಡೆದದ್ದೇ ಹೆಚ್ಚು’ ಎಂದು ಆರೋಪಿಸಿದರು.

‘ಕಳೆದ 70 ವರ್ಷಗಳಿಂದ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಯಾವುದೇ ಕೊಡುಗೆ ನೀಡಿಲ್ಲ. ಆದ್ದರಿಂದ ಪ್ರಸ್ತುತ ಚುನಾವಣೆಯಲ್ಲಿ ನಾವು ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದೇವೆ. ಬಚ್ಚೇಗೌಡರ ಪರವಾಗಿ ಕ್ಷೇತ್ರದಲ್ಲಿ ಮತ ಯಾಚಿಸಲು ಆರ್‌ಪಿಐ ರಾಷ್ಟ್ರೀಯ ಅಧ್ಯಕ್ಷ ರಾಮದಾಸ್‌ ಅಠವಳೆ ಅವರು ಏಪ್ರಿಲ್ 15 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರ, ಹಗರಣಗಳು ಇಲ್ಲದೆ ಪಾರದರ್ಶಕ ಆಡಳಿತ ನೀಡಿದೆ. ಸಂವಿಧಾನವನ್ನು ಧರ್ಮಗ್ರಂಥ ಎಂದು ಘೋಷಣೆ ಮಾಡಿದೆ. ಆದ್ದರಿಂದ ಸಂವಿಧಾನ ರಕ್ಷಕರಾಗಿರುವ ಮೋದಿ ಅವರನ್ನು ಮತ್ತೊಮ್ಮೆ ದೇಶದಲ್ಲಿ ಅಧಿಕಾರಕ್ಕೆ ತರಬೇಕಿದೆ’ ಎಂದರು.

‘ಎರಡು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದ ವೀರಪ್ಪ ಮೊಯಿಲಿ ಅವರು ಕಾಲಮಿತಿ ಒಳಗೆ ನೀರಾವರಿ ಯೋಜನೆ ಜಾರಿಗೆ ತರದೆ ಸುಳ್ಳಿನ ಸರದಾರ ಎಂಬ ಬಿರುದು ಪಡೆದಿದ್ದಾರೆ. ಎತ್ತಿನಹೊಳೆ ಯೋಜನೆ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಅದರ ಅನುಷ್ಠಾನದ ವಿಚಾರದಲ್ಲಿ ಅವರಿಗೆ ಯಾವುದೇ ಬದ್ಧತೆ, ಪ್ರಾಮಾಣಿಕತೆ ಇಲ್ಲ. ಮೊಯಿಲಿ ಮತ್ತೊಮ್ಮೆ ಗೆದ್ದರೆ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತಗೊಳ್ಳಲಿದೆ’ ಎಂದು ಹೇಳಿದರು.

‘ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಅವರು ಸ್ಥಳೀಯ ನಾಯಕರಾಗಿದ್ದಾರೆ. ಪ್ರತಿ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಜೆಡಿಎಸ್‌ ವರಿಷ್ಠ ಎಚ್.ಡಿ ದೇವೇಗೌಡರು ಷಡ್ಯಂತ್ರ ರೂಪಿಸುತ್ತಿದ್ದಾರೆ. ಈ ಬಾರಿ ಕ್ಷೇತ್ರದ ಮತದಾರರು ಬಚ್ಚೇಗೌಡರನ್ನು ದೊಡ್ಡ ಅಂತರದಿಂದ ಗೆಲ್ಲಿಸಬೇಕು’ ಎಂದು ತಿಳಿಸಿದರು.

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‌ ಮಾತನಾಡಿ, ‘ಕ್ಷೇತ್ರ ವ್ಯಾಪ್ತಿಯ ಎಂಟೂ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ದುರಾಡಳಿತದಿಂದ ಬೇಸತ್ತಿರುವ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಬಿಜೆಪಿ ಬೆಂಬಲಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಾಣಲಿದೆ’ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಶರತ್ ಬಚ್ಚೇಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ಆರ್‌ಪಿಐ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ, ಕಾರ್ಯಾಧ್ಯಕ್ಷ ಪಿಳ್ಳಂಜನಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಅಶ್ವಥಪ್ಪ, ಮಹಿಳಾ ವಿಭಾಗದ ಜಿಲ್ಲಾ ಘಟಕದ ಕಾರ್ಯದರ್ಶಿ ಕಮಲಮ್ಮ, ಮುಖಂಡರಾದ ಜಿ.ಎಂ.ಮುನಿಶಾಮಯ್ಯ, ಸರಸ್ವತಮ್ಮ, ಹರಿಪ್ರಸಾದ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !