84,181 ಲೀ. ಮದ್ಯ ವಶ; ಅಬಕಾರಿ ಕಾಯ್ದೆಯಡಿ 461 ಪ್ರಕರಣ ದಾಖಲು

ಬುಧವಾರ, ಏಪ್ರಿಲ್ 24, 2019
33 °C

84,181 ಲೀ. ಮದ್ಯ ವಶ; ಅಬಕಾರಿ ಕಾಯ್ದೆಯಡಿ 461 ಪ್ರಕರಣ ದಾಖಲು

Published:
Updated:
Prajavani

ಮಂಗಳೂರು: ಲೋಕಸಭಾ ಚುನಾವಣಾ ನೀತಿಸಂಹಿತೆ ಜಾರಿಯಾದ ದಿನದಿಂದ ಈವರೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮತ್ತು ಸಂಗ್ರಹಿಸಿಟ್ಟಿದ್ದ 84,181.02 ಲೀಟರ್‌ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಈ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘₹ 93.92 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಮೂರು ದ್ವಿಚಕ್ರ ವಾಹನ, ಮೂರು ಲಾರಿ, ಮೂರು ಕಾರು, ಒಂದು ಟ್ರಕ್‌, ಒಂದು ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯ ಮತ್ತು ಈ ಎಲ್ಲ ವಾಹನಗಳ ಒಟ್ಟು ಮೌಲ್ಯ ₹ 1.07 ಕೋಟಿ’ ಎಂದರು.

ಚುನಾವಣಾ ವೆಚ್ಚದ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಚುನಾವಣಾ ತನಿಖಾ ಠಾಣೆಗಳಲ್ಲಿ ವಾಹನ ತಪಾಸಣೆ ವೇಳೆ ₹ 20.10 ಲಕ್ಷ ನಗದು ವಶಪಡಿಸಿಕೊಳ್ಳಲಾಗಿತ್ತು. ಸೂಕ್ತ ದಾಖಲಾತಿ ಹಾಜರುಪಡಿಸಿದ ಬಳಿಕ ಸಂಬಂಧಿಸಿದವರಿಗೆ ವಾಪಸು ನೀಡಲಾಗಿದೆ ಎಂದು ತಿಳಿಸಿದರು.

ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿಗೆ ಈವರೆಗೆ 10 ದೂರುಗಳು ಬಂದಿವೆ. ಚುನಾವಣಾ ಸಹಾಯವಾಣಿಗೆ ಈವರೆಗೆ 2,598 ಕರೆಗಳು ಬಂದಿವೆ. ಅವುಗಳಲ್ಲಿ 128 ದೂರುಗಳಿದ್ದವು. ಅವುಗಳನ್ನು ದಾಖಲಿಸಿಕೊಂಡು ಕ್ರಮ ಜರುಗಿಸಲಾಗಿದೆ. ಸಿ–ವಿಜಿಲ್‌ ಮೊಬೈಲ್‌ ಆ್ಯಪ್‌ ಮೂಲಕ 25 ದೂರುಗಳು ಬಂದಿವೆ ಎಂದರು.

ಇವಿಎಂ ಸಿದ್ಧ:

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಗಾಗಿ ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಪರಿಶೀಲಿಸಿ, ದಾಸ್ತಾನು ಮಾಡಲಾಗಿದೆ. 1,861 ಮತಗಟ್ಟೆಗಳಿದ್ದು, ತಲಾ 2,236 ಕಂಟ್ರೋಲ್‌ ಯೂನಿಟ್‌ ಮತ್ತು ಬ್ಯಾಲೆಟ್ ಯೂನಿಟ್‌ಗಳನ್ನು ಸಜ್ಜುಗೊಳಿಸಲಾಗಿದೆ. 2,495 ವಿವಿಪ್ಯಾಟ್‌ ಯಂತ್ರಗಳನ್ನೂ ಪರೀಕ್ಷಿಸಿ, ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ವಿವರ ನೀಡಿದರು.

ಭಾರತ್‌ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನ (ಬಿಇಎಲ್‌) ನುರಿತ ಎಂಜಿಯರ್‌ಗಳು ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಪರಿಶೀಲಿಸಿದ್ದಾರೆ. ಇವಿಎಂ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಬಗೆಯ ಅನುಮಾನಗಳಿಗೆ ಆಸ್ಪದವಿಲ್ಲ. ಮತದಾರರಲ್ಲಿ ಅನುಮಾನಗಳು ಉಳಿದುಕೊಂಡಿದ್ದರೆ ಅವರುಗಳನ್ನು ಪರಿಹರಿಸಲು ಜಾಗೃತಿ ಅಭಿಯಾನ, ಪ್ರದರ್ಶನ ಸಹಿತವಾಗಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಮತಗಟ್ಟೆಗಳನ್ನು ಸ್ಥಾಪಿಸುವ ಕಟ್ಟಡಗಳನ್ನು ತಪಾಸಣೆ ಮಾಡಿ, ಅಂತಿಮ ಹಂತದ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 20 ‘ಸಖಿ’ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಕೆಲವು ಕಡೆಗಳಲ್ಲಿ ಪಾರಂಪರಿಕ ಮತಗಟ್ಟೆಗಳನ್ನೂ ಸ್ಥಾಪಿಸಲಾಗುವುದು ಎಂದು ಹೇಳಿದರು.

ಮತಗಟ್ಟೆಗಳ ಸಿದ್ಧತೆ, ಇವಿಎಂ ಮತ್ತು ವಿವಿಪ್ಯಾಟ್‌ ಬಳಕೆ ಕುರಿತು ಚುನಾವಣಾ ಸಿಬ್ಬಂದಿಗೆ ಮಂಗಳವಾರ ಎರಡನೇ ಹಂತದ ತರಬೇತಿ ಆಯೋಜಿಸಲಾಗಿದೆ. ಮಂಗಳೂರಿನ ಮೂರು ಮತ್ತು ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಮೂಡುಬಿದಿರೆಯ ಒಂದೊಂದು ಕಡೆ ತರಬೇತಿ ಆಯೋಜಿಸಲಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಆರ್‌.ಸೆಲ್ವಮಣಿ, ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟಾಚಲಪತಿ ಮತ್ತು ಧಾರ್ಮಿ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಮೀಳಾ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !