ಪ್ರಶ್ನೆ ಎತ್ತುವುದೇ ಉತ್ಸವಗಳ ಗುರಿ: ನಿರ್ದೇಶಕ ಪಿ.ಶೇಷಾದ್ರಿ

ಮಂಗಳವಾರ, ಏಪ್ರಿಲ್ 23, 2019
31 °C
ನಿಟ್ಟೆ ಚಲನಚಿತ್ರೋತ್ಸವ ಉದ್ಘಾಟನೆ

ಪ್ರಶ್ನೆ ಎತ್ತುವುದೇ ಉತ್ಸವಗಳ ಗುರಿ: ನಿರ್ದೇಶಕ ಪಿ.ಶೇಷಾದ್ರಿ

Published:
Updated:
Prajavani

ಮಂಗಳೂರು: ಸಾಹಿತ್ಯ, ಸಂಗೀತ ಮತ್ತು ಕಲೆಗೆ ಸಂಬಂಧಿಸಿದ ಉತ್ಸವಗಳು ನಡೆಯುವುದೇ ಪ್ರಶ್ನೆಗಳನ್ನು ಎತ್ತುವುದಕ್ಕಾಗಿ. ಇಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಆಯಾ ಕ್ಷೇತ್ರದೊಳಗೇ ಉತ್ತರವನ್ನೂ ಪಡೆಯಬೇಕಾಗುತ್ತದೆ ಎಂದು ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಹೇಳಿದರು.

ನಿಟ್ಟೆ ಡೀಮ್ಡ್‌ ವಿಶ್ವವಿದ್ಯಾಲಯ ಮತ್ತು ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್‌ ಕಮ್ಯುನಿಕೇಷನ್‌ ವತಿಯಿಂದ ನಗರದ ಭಾರತ್‌ ಮಾಲ್‌ನ ಬಿಗ್‌ ಸಿನಿಮಾಸ್‌ನಲ್ಲಿ ಸೋಮವಾರ ಆರಂಭವಾದ ‘ನಿಟ್ಟೆ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟ್‌’ ಉದ್ಘಾಟಿಸಿ ಅವರು ಮಾತನಾಡಿದರು.

ಒಂದೊಂದು ಭಾಷೆಯಲ್ಲಿ ಪ್ರತಿವರ್ಷ ನೂರಾರು ಸಿನಿಮಾಗಳನ್ನು ನಿರ್ಮಿಸಲಾಗುತ್ತಿದೆ. ಅವುಗಳಲ್ಲಿ ಬೆರಳೆಣಿಕೆಯ ಚಿತ್ರಗಳು ಪ್ರೇಕ್ಷಕರ ಮನ ಗೆಲ್ಲುತ್ತವೆ. ಒಳ್ಳೆಯ ಚಿತ್ರಗಳನ್ನು ನೀಡಿದಾಗ ಪ್ರೇಕ್ಷಕರು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ ಎಂದರು.

‘ನಿಟ್ಟೆ ಶಿಕ್ಷಣ ಸಂಸ್ಥೆಯು ಪ್ರತಿ ವರ್ಷ ಚಲನಚಿತ್ರೋತ್ಸವ ನಡೆಸುವ ಮೂಲಕ ಒಳ್ಳೆಯ ಸಿನಿಮಾಗಳನ್ನು ವೀಕ್ಷಿಸಲು ಜನರಿಗೆ ಅವಕಾಶ ಕಲ್ಪಿಸುತ್ತಿರುವುದು ಸಂತೋಷದ ವಿಚಾರ. ನನ್ನ ಮೊದಲ ಸಿನಿಮಾ ‘ಮುನ್ನುಡಿ’ಯ ಚಿತ್ರೀಕರಣ ಮಂಗಳೂರಿನಲ್ಲೇ ನಡೆದಿತ್ತು. ಇಲ್ಲಿನ ಚಿತ್ರಮಂದಿರಗಳಲ್ಲಿ ಐದು ವಾರಗಳಿಗೂ ಹೆಚ್ಚು ಕಾಲ ಅದು ಪ್ರದರ್ಶನಗೊಂಡಿತ್ತು’ ಎಂದು ಸ್ಮರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಡೀಮ್ಡ್‌ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ, ‘ಸಿನಿಮಾ ಕ್ಷೇತ್ರಕ್ಕೆ ಮಂಗಳೂರು ಹಲವು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ. ಇಲ್ಲಿನ ಹಲವು ಕಲಾವಿದರು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ’ ಎಂದರು.

ನಿಟ್ಟೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಚಾಲಕ ಪ್ರೊ.ರವಿರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರ ವಿಮರ್ಶಕ ಮನು ಚಕ್ರವರ್ತಿ ಅವರು ‘ಶಿವರಾಮ ಕಾರಂತರ ಬರಹಗಳನ್ನು ಸಿನಿಮಾ ಮೂಲಕ ಅರ್ಥ ಮಾಡಿಕೊಳ್ಳುವುದು’ ವಿಷಯ ಕುರಿತು ಪಿ.ಶೇಷಾದ್ರಿ ಅವರೊಂದಿಗೆ ಸಂವಾದ ನಡೆಸಿಕೊಟ್ಟರು.

70 ಚಿತ್ರಗಳ ಪ್ರದರ್ಶನ: ಸೋಮವಾರ ಆರಂಭವಾಗಿರುವ ಚಿತ್ರೋತ್ಸವ ಗುರುವಾರದವರೆಗೆ ನಡೆಯಲಿದೆ. ಹಿಂದಿ, ತುಳು, ಕನ್ನಡ, ಮಲಯಾಳ, ಉರ್ದು, ಬೆಂಗಾಲಿ, ಮರಾಠಿ, ತೆಲುಗು, ತಮಿಳು, ಪೋರ್ಚುಗೀಸ್‌ ಮತ್ತು ಫ್ರೆಂಚ್‌ ಭಾಷೆಯ 70 ಚಿತ್ರಗಳ ಪ್ರದರ್ಶನ ನಡೆಯಲಿದೆ. ಪ್ರತಿದಿನ ಮೂರು ಪರದೆಗಳಲ್ಲಿ ಚಿತ್ರ ಪ್ರದರ್ಶಿಸಲಾಗುತ್ತಿದ್ದು, 40 ಮಂದಿ ಚಿತ್ರ ನಿರ್ಮಾ‍ಪಕರು, ನಿರ್ದೇಶಕರು ಅತಿಥಿಗಳಾಗಿ ಭಾಗವಹಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !