ಪ್ರತಾಪಸಿಂಹ, ಶ್ರೀನಿವಾಸಪ್ರಸಾದ್‌ ಪರ ಮತಯಾಚಿಸಲಿರುವ ಪ್ರಧಾನಿ ಮೋದಿ

ಶನಿವಾರ, ಏಪ್ರಿಲ್ 20, 2019
32 °C
ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧ

ಪ್ರತಾಪಸಿಂಹ, ಶ್ರೀನಿವಾಸಪ್ರಸಾದ್‌ ಪರ ಮತಯಾಚಿಸಲಿರುವ ಪ್ರಧಾನಿ ಮೋದಿ

Published:
Updated:
Prajavani

ಮೈಸೂರು: ಕಾಂಗ್ರೆಸ್‌–ಜೆಡಿಎಸ್‌ ಪ್ರಾಬಲ್ಯದ ಮೈಸೂರು ಭಾಗದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಾಂದಿ ಹಾಡಲಿದ್ದಾರೆ.

ಬಿಜೆಪಿ ಶಕ್ತಿ ಪ್ರದರ್ಶನಕ್ಕಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್‌ ಸಭಾಂಗಣ ಸಿದ್ಧಪಡಿಸಲಾಗಿದೆ. ಸಮಾವೇಶದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಅವರು ಮತಯಾಚಿಸಲಿದ್ದಾರೆ.

ಮತದಾನಕ್ಕೆ ಕೇವಲ 10 ದಿನಗಳು ಬಾಕಿಯಿದ್ದು, ಮೋದಿ ಅವರ ಭೇಟಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹುರುಪು ತುಂಬಲಿದೆ. ಜೊತೆಗೆ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರ ಕಣ ರಂಗೇರಲಿದೆ.

ಸಂಜೆ ನಾಲ್ಕು ಗಂಟೆಗೆ ಆರಂಭವಾಗಲಿರುವ ಬೃಹತ್‌ ಸಮಾವೇಶದಲ್ಲಿ ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲು ವ್ಯವಸ್ಥೆ ಮಾಡಲಾಗಿದೆ. ವೇದಿಕೆಯ ಮುಂಭಾಗದಲ್ಲಿ ನೆರಳಿಗಾಗಿ ಜರ್ಮನ್ ಟೆಂಟ್ ಮಾದರಿಯ ಸಭಾಂಗಣ ನಿರ್ಮಿಸಲಾಗಿದೆ. ಪ್ರತಿ ಪ್ರವೇಶದ್ವಾರಗಳಿಗೂ ಮೆಟಲ್ ಡೋರ್ ಡಿಟೆಕ್ಟರ್‌ ಅಳವಡಿಸಲಾಗಿದೆ. 12 ಅಡಿ ಎತ್ತರದ ಹಾಗೂ 30X50 ವಿಸ್ತೀರ್ಣದ ವೇದಿಕೆ ಸಿದ್ಧಪಡಿಸಲಾಗಿದೆ. 12 ಪ್ರವೇಶದ್ವಾರಗಳು ಇವೆ. ಬಿಸಿಲು ಹೆಚ್ಚಾಗಿರುವುದರಿಂದ ಸಭಾಂಗಣಕ್ಕೆ ಪೂರ್ಣವಾಗಿ ಶೀಟು ಹಾಕಲಾಗಿದೆ.

ಈ ಕಾರ್ಯಕ್ರಮ ಸುಮಾರು 1 ಗಂಟೆ ನಡೆಯಲಿದೆ. ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಜಿಲ್ಲೆಗಳಿಂದ ಜನರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಲಾಗಿದೆ.

ಚಿತ್ರದುರ್ಗದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಂಡು ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಬಳಿಕ ಕೊಯಮತ್ತೂರಿಗೆ ತೆರಳಲಿದ್ದಾರೆ.

‘ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಸಾಧನೆಗಳನ್ನು ಮೋದಿ ಅವರು ಜನರ ಮುಂದೆ ಇಡಲಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ‌ ಪಕ್ಷವು ಕೈಗೆತ್ತಿಕೊಳ್ಳಲಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಲಿದ್ದಾರೆ’ ಎಂದು ಸಂಸದ ಪ್ರತಾಪಸಿಂಹ ಮಾಹಿತಿ ನೀಡಿದರು.

ಮೋದಿ ಅವರ ಜತೆ ಸೆಲ್ಫಿ ತೆಗೆದುಕೊಳ್ಳ ಬಯಸುವವರಿಗಾಗಿ ಒಂದು ಬೂತ್‌ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮೈಸೂರು–ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ, ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಭಾಗವಹಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !