ಪೊಲೀಸ್‌ ಬಲದಲ್ಲಿ ಕಾಮಗಾರಿಗೆ ಯತ್ನ

ಮಂಗಳವಾರ, ಏಪ್ರಿಲ್ 23, 2019
33 °C
ಎಂಆರ್‌ಪಿಎಲ್‌ ವಿರುದ್ಧ ಮುನೀರ್‌ ಕಾಟಿಪಳ್ಳ ಆರೋಪ

ಪೊಲೀಸ್‌ ಬಲದಲ್ಲಿ ಕಾಮಗಾರಿಗೆ ಯತ್ನ

Published:
Updated:
Prajavani

ಮಂಗಳೂರು: ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಪಾಲಿಸುವಲ್ಲಿ ವಿಫಲವಾಗಿರುವ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಈಗ ಚುನಾವಣೆಯ ಸಂದರ್ಭದಲ್ಲಿ ಪೊಲೀಸ್‌ ಬಲ ಪ್ರಯೋಗಿಸಿ ವಿಸ್ತರಣಾ ಕಾಮಗಾರಿ ಆರಂಭಿಸಲು ಪ್ರಯತ್ನಿಸುತ್ತಿದೆ ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಆರೋಪಿಸಿದ್ದಾರೆ.

‘ಎಂಆರ್‌ಪಿಎಲ್‌ ಕಾಮಗಾರಿಗೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಲಾಗಿದೆ. ಈ ಸಭೆಗೆ ನನ್ನನ್ನೂ ಕರೆದಿದ್ದರು. ಕಂಪೆನಿಯ ಅಧಿಕಾರಿಗಳೂ ಇದ್ದರು. ಕಾಮಗಾರಿಗೆ ಅಡ್ಡಿಪಡಿಸಬಾರದು ಎಂದು ಎಸಿಪಿ ಸೂಚಿಸಿದರು. ಇದು ಬಲಪ್ರಯೋಗದ ಮೂಲಕ ಕಾಮಗಾರಿ ನಡೆಸಲು ಎಂಆರ್‌ಪಿಎಲ್‌ ನಡೆಸುತ್ತಿರುವ ಪ್ರಯತ್ನದ ಭಾಗ’ ಎಂದು ತಿಳಿಸಿದ್ದಾರೆ.

‘ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಜಾರಿಯಾಗದೆ ಕಾಮಗಾರಿ ನಡೆಯಲು ಅವಕಾಶ ನೀಡುವುದಿಲ್ಲ. ಬಲ ಪ್ರಯೋಗ ಮಾಡಿದರೆ ಸಹಿಸುವುದಿಲ್ಲ. ಈ ಹಿಂದೆ ಎರಡು ಬಾರಿ ಬಂಧಿಸಲಾಗಿತ್ತು. ಬಳಿಕ ಜಾಮೀನು ಪಡೆದಿದ್ದೆ. ಆದರೆ ಈ ಬಾರಿ ಬಂಧಿಸಿದರೆ ಯಾವುದೇ ಕಾರಣಕ್ಕೂ ಜಾಮೀನು ಪಡೆಯುವುದಿಲ್ಲ. ಸಮಸ್ಯೆ ಇತ್ಯರ್ಥವಾಗುವವರೆಗೂ ಜೈಲಿನಲ್ಲಿರುವುದಾಗಿ ಉತ್ತರಿಸಿದೆ. ಇನ್ನು ಯಾವುದೇ ಕ್ಷಣ ಏನಾದರೂ ನಡೆಯಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಈ ವಾರದಲ್ಲೇ ಮೂರು ಬಾರಿ ಕಾಮಗಾರಿ ಆರಂಭಿಸಲು ಎಂಆರ್‌ಪಿಎಲ್‌ ಯತ್ನಿಸಿದೆ. ಜೋಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ನಿರಂತರವಾಗಿ ಮಾಲಿನ್ಯ ಹೆಚ್ಚುತ್ತಿದೆ. ಸೋಮವಾರ ಸಭೆಯಲ್ಲಿ ನಡೆದ ಬೆಳವಣಿಗೆ ಕುರಿತು ಸ್ಥಳೀಯರಿಗೆ ತಿಳಿಸಲಾಗಿದೆ. ಬಂಧಿಸಿದರೆ ಜೈಲಿಗೆ ಬರಲು ತಾವೂ ಸಿದ್ಧ ಎಂಬುದಾಗಿ ತಿಳಿಸಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !