ಜನವಿರೋಧಿ ನೀತಿಯಿಂದ ಜನಸಾಮಾನ್ಯರಿಗೆ ಸಂಕಷ್ಟ: ಶಾಂತವೀರ ನಾಯ್ಕ ಆರೋಪ

ಬುಧವಾರ, ಏಪ್ರಿಲ್ 24, 2019
31 °C

ಜನವಿರೋಧಿ ನೀತಿಯಿಂದ ಜನಸಾಮಾನ್ಯರಿಗೆ ಸಂಕಷ್ಟ: ಶಾಂತವೀರ ನಾಯ್ಕ ಆರೋಪ

Published:
Updated:

ಚಿಕ್ಕಬಳ್ಳಾಪುರ: ‘ಕಳೆದ 5 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಜಾರಿಗೆ ತಂದ ಜನ, ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳಿಂದ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ ಬೆಂಬಲಿಸಬೇಕು’ ಎಂದು ಕಾಂಗ್ರೆಸ್‌ ಅಸಂಘಟಿತ ಕಾರ್ಮಿಕರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಶಾಂತವೀರ ನಾಯ್ಕ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಅವರು ಹಲವಾರು ಸುಳ್ಳು ಆಶ್ವಾಸನೆಗಳು ನೀಡಿ ಸಾಮಾನ್ಯ ಜನರಿಗೆ ಮೋಸ ಮಾಡಿದ್ದಾರೆ. ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸುವುದಾಗಿ ಹೇಳಿ ಸುಳ್ಳಿನಿಂದ ಆಡಳಿತ ನಡೆಸಿದ್ದಾರೆ. ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಬಡವರು, ಮಧ್ಯಮ ವರ್ಗದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಸಂಘಟಿತ ಕಾರ್ಮಿಕರು ತೊಂದರೆಗೆ ಈಡಾಗಿದ್ದಾರೆ’ ಎಂದು ಆರೋಪಿಸಿದರು.

‘ಕೇಂದ್ರದ ಆರ್ಥಿಕ ನೀತಿಗಳಿಂದಾಗಿ ದೇಶದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಬಂದ್‌ ಆಗಿವೆ. ಅಸಂಘಟಿತ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ನಾಲ್ಕೂವರೆ ವರ್ಷ ಏನೂ ಮಾಡದ ಮೋದಿಯವರು ಚುನಾವಣೆ ಸಂದರ್ಭದಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡುತ್ತಿದ್ದಾರೆ. ಅಸಂಘಟಿತ ಕಾರ್ಮಿಕರ ಉದ್ಧಾರದ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬಡವರಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಯಿತು. ಆದರೆ ಬಿಜೆಪಿಯವರು ಸುಳ್ಳು ಪ್ರಚಾರದಿಂದ ಕಾಂಗ್ರೆಸ್‌ಗೆ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆಯಾಯಿತು. ಬಿಜೆಪಿಯವರು ಒಂದು ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಎಂದು ಜನರಿಗೆ ನಂಬಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರು ಮರುಳಾಗಬಾರದು. ಈ ಕ್ಷೇತ್ರದಲ್ಲಿ ಕಾರ್ಮಿಕರು ಕಾಂಗ್ರೆಸ್–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಂ.ವೀರಪ್ಪ ಮೊಯಿಲಿ ಅವರಿಗೆ ಬೆಂಬಲಿಸಬೇಕು’ ಎಂದು ಹೇಳಿದರು.

‘ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಕಾಂಗ್ರೆಸ್‌ ದೇಶದ ಬಡವರಿಗೆ ಪ್ರತಿ ತಿಂಗಳಿಗೆ 6 ಸಾವಿರದಂತೆ ಕನಿಷ್ಠ ಆದಾಯ ಒದಗಿಸುವ ‘ನ್ಯಾಯ್’ ಯೋಜನೆ ಜಾರಿಗೆ ತರುವ ಭರವಸೆ ನೀಡಿದೆ. ಈ ಬಗ್ಗೆ ಮತದಾರರಿಗೆ ತಿಳುವಳಿಕೆ ಮೂಡಿಸಬೇಕು’ ಎಂದರು.

ಸಮಿತಿ ರಾಜ್ಯ ಘಟಕದ ಉಪಾಧ್ಯಕ್ಷ ಸಂದೀಪ್ ಚಕ್ರವರ್ತಿ, ಕಾರ್ಯದರ್ಶಿಗಳಾದ ಮಂಜುಳಾ, ರಜಾಕ್, ಮುಖಂಡರಾದ ಸುಮಿತ್ರಾ, ವೆಂಕಟರವಣ, ಪ್ರಕಾಶ್, ಅಬ್ದುಲ್ ಹಮೀದ್ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !