ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ: ನಿಖಿಲ್‌

ಭಾನುವಾರ, ಏಪ್ರಿಲ್ 21, 2019
32 °C

ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ: ನಿಖಿಲ್‌

Published:
Updated:

ಮಂಡ್ಯ: ‘ಲೋಕಸಭೆ ಚುನಾವಣೆ ಮುಗಿದ ನಂತರ ಎಲ್ಲಾ ಸ್ತ್ರೀಶಕ್ತಿ ಸಂಘ, ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಿಸಲಾಗುವುದು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನನ್ನ ಜೊತೆ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ’ ಎಂದು ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಮಂಗಳವಾರ ಹೇಳಿದರು.

ಮಳವಳ್ಳಿ ತಾಲ್ಲೂಕು ದಡಮಹಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ಮಾತನಾಡಿ, ‘ಮಹಿಳಾ ಸಂಘಗಳ ಸಾಲ ಮನ್ನಾ ಜೊತೆಗೆ ಹೊಸದಾಗಿ ಬಡ್ಡಿ ರಹಿತ ಸಾಲ ವಿತರಣೆ ಮಾಡಲು ಚಿಂತಿಸಲಾಗುತ್ತಿದೆ’ ಎಂದರು.

‘ನೀರಾವರಿ ಯೋಜನೆ ಸೇರಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗಮನ ಹರಿಸಲಾಗುವುದು. ಚುನಾವಣೆ ಮುಗಿದ ತಕ್ಷಣ ಟೆಂಡರ್‌ ಕರೆಯಲಾಗುವುದು‘ ಎಂದು ಹೇಳಿದರು.

ಸುಮಲತಾ ವಿರುದ್ಧ ಆಕ್ರೋಶ: ‘ಪಕ್ಷೇತರ ಅಭ್ಯರ್ಥಿ ಪದೇ ಪದೇ ನನ್ನನ್ನು, ಹಾಸನದವರು ಎಂದು ಟೀಕೆ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಮುಖಂಡರ ತೀರ್ಮಾನದಂತೆ ಸ್ಪರ್ಧೆ ಮಾಡಿದ್ದೇನೆ. ಅವರಿಗೆ ಸೋಲಿನ ಭಯ ಕಾಡುತ್ತಿರುವ ಕಾರಣ ಹಾಗೆ ಮಾತನಾಡುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿಯನ್ನು ಕೇಳಿ ಚುನಾವಣೆಗೆ ನಿಲ್ಲಬೇಕಿತ್ತಾ’ ಎಂದು ಸುಮಲತಾ ಹೆಸರು ಹೇಳದೆ ಪ್ರಶ್ನಿಸಿದರು.

‘ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಬಾರದಿದ್ದರೂ ಜನರು ನನ್ನ ಕೈ ಹಿಡಿಯುತ್ತಾರೆ. ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಮಂಡ್ಯಕ್ಕೆ ಏನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. 60 ವರ್ಷಗಳಿಂದ ರಾಜಕಾರಣದಲ್ಲಿರುವ ದೇವೇಗೌಡರು ಕಾವೇರಿ ನೀರಿಗಾಗಿ ಅಪಾರ ಹೋರಾಟ ನಡೆಸಿದ್ದಾರೆ’ ಎಂದರು.

ನಟ ಯಶ್‌ ವಿರುದ್ಧ ನೀಡಿದ್ದ ಹೇಳಿಕೆ ಸಮರ್ಥಿಸಿಕೊಂಡರು. ‘ಅವರು ನನ್ನ ಯೋಗ್ಯತೆಯ ಬಗ್ಗೆ ಪ್ರಶ್ನೆ ಮಾಡಿದ್ದರು. ಸಮಾಧಾನದಿಂದಲೇ ಉತ್ತರ ಕೊಟ್ಟಿದ್ದೇನೆ. ಕಾರ್ಯಕರ್ತರ ಒತ್ತಾಯದ ಮೇರೆಗೆ ಸ್ಪಷ್ಟನೆ ಕೊಟ್ಟಿದ್ದೇನೆ. ನಾನು ಯೋಗ್ಯನೋ, ಅಲ್ಲವೋ ಎಂಬ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 16

  Angry

Comments:

0 comments

Write the first review for this !