ಗೆದ್ದರೆ ನೀರು ತರುವುದು ಖಚಿತ: ಶರತ್ ಬಚ್ಚೇಗೌಡ

ಬುಧವಾರ, ಏಪ್ರಿಲ್ 24, 2019
31 °C
ನಗರದಲ್ಲಿ ಮನೆಮನೆ ಪ್ರಚಾರ ಕಾರ್ಯ

ಗೆದ್ದರೆ ನೀರು ತರುವುದು ಖಚಿತ: ಶರತ್ ಬಚ್ಚೇಗೌಡ

Published:
Updated:
Prajavani

ಚಿಕ್ಕಬಳ್ಳಾಪುರ: ‘ಬಯಲುಸೀಮೆ ನೀರಿನ ಸಮಸ್ಯೆ ಪರಿಹರಿಸದೆ ಹತ್ತು ವರ್ಷಗಳಿಂದ ಕಾಲಹರಣ ಮಾಡಿದ ಸಂಸದ ವೀರಪ್ಪ ಮೊಯಿಲಿ ಅವರ ವೈಫಲ್ಯಗಳನ್ನು ಜನರಿಗೆ ತಲುಪಿಸುತ್ತೇವೆ. ಒಂದೊಮ್ಮೆ ಬಿಜೆಪಿಗೆ ಅಧಿಕಾರ ಸಿಕ್ಕರೆ ಈ ಕ್ಷೇತ್ರಕ್ಕೆ ನೂರಕ್ಕೆ ನೂರು ನೀರು ತರುವ ಕೆಲಸ ಮಾಡುತ್ತೇವೆ. ಇದು ನಮ್ಮ ಆಶ್ವಾಸನೆ’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶರತ್ ಬಚ್ಚೇಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ವಾಪಸಂದ್ರದ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ಭಾಗದಲ್ಲಿ ಆಯ್ಕೆಯಾದವರಿಗೆ ಅಭಿವೃದ್ಧಿ ಮಾಡುವ ಛಲ ಇದ್ದರೆ ಇಷ್ಟೊತ್ತಿಗೆ ಜಿಲ್ಲೆಗೆ ನೀರು ತರಬಹುದಿತ್ತು. ಆದರೆ ಮೊಯಿಲಿ ಅವರು ಚುನಾವಣೆ ಗಿಮಿಕ್‌ಗಾಗಿ ಎತ್ತಿನಹೊಳೆ ಹೆಸರು ಹೇಳುತ್ತ ಬಂದಿದ್ದಾರೆ ವಿನಾ ನೀರು ತಂದಿಲ್ಲ. ಹೀಗಾಗಿ ಅವರು ಆ ವಿಚಾರ ಬಿಟ್ಟು ಬೇರೆ ಮಾತನಾಡಬೇಕು’ ಎಂದು ತಿಳಿಸಿದರು.

‘ಶಾಶ್ವತ ನೀರಾವರಿ ಎಂದರೆ ಬರೀ ಎತ್ತಿನಹೊಳೆ ಮಾತ್ರವಲ್ಲ. ಕೇಂದ್ರ ಜಲಸಂಪನ್ಮೂಲ ಸಚಿವ ನಿತೀನ್ ಗಡ್ಕರಿ ಅವರಿಗೆ ಗೋದಾವರಿ, ಕೃಷ್ಣಾ ನದಿ ಜೋಡಣೆಯಿಂದ ಈ ಭಾಗಕ್ಕೆ ನೀರು ತರುವ ಕನಸಿದೆ. ಜತೆಗೆ ಹೇಮಾವತಿ ನದಿಯಿಂದ ನೀರು ತರಬಹುದಿತ್ತು. ಆದರೆ, ರಾಜಕಾರಣಿಗಳಲ್ಲಿ ಇಚ್ಛಾಶಕ್ತಿ ಇಲ್ಲದ ಕಾರಣಕ್ಕೆ ಈವರೆಗೆ ನೀರು ತರುವ ಕೆಲಸವಾಗಿಲ್ಲ. ನಾವು ಅಧಿಕಾರಕ್ಕೆ ಬಂದರೆ ಖಂಡಿತ ನೀರು ತರುತ್ತೇವೆ’ ಎಂದು ಭರವಸೆ ನೀಡಿದರು.

‘ನೆರೆಯ ಆಂಧ್ರಪ್ರದೇಶದಲ್ಲಿ ಕೃಷ್ಣಾ ನದಿ ನೀರನ್ನು 500 ಕಿ.ಮೀ ದೂರದಿಂದ ಗಡಿಭಾಗಕ್ಕೆ ಹರಿಸಲಾಗಿದೆ. ಆದರೆ ನಮ್ಮಲ್ಲಿ 200 ಕಿ.ಮೀ ನೀರು ಈ ತರಲು ಆಗುವುದಿಲ್ಲವೆ? ಕಳೆದ ನಾಲ್ಕು ವರ್ಷಗಳಲ್ಲಿ ₨8,000ಕೋಟಿ ಬಳಸಿಕೊಂಡು 50 ಕಿ.ಮೀ ಕಾಂಕ್ರಿಟ್ ಹಾಕಿ ಅನುದಾನ ಹಾಳು ಮಾಡಿದ್ದಾರೆ. ಅದರ ಬದಲು ಕಾಲುವೆ ನಿರ್ಮಾಣ ಮಾಡಿದ್ದರೆ ಇಷ್ಟರೊಳಗೆ ನೀರು ತರಬಹುದಿತ್ತು’ ಎಂದು ಹೇಳಿದರು.

‘ಕ್ಷೇತ್ರದಾದ್ಯಂತ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದೇವೆ. ಬಹಿರಂಗ ಪ್ರಚಾರ ಒಂದು ವಾರ ಉಳಿದಿದೆ. ಹೀಗಾಗಿ ಇದೀಗ ಮನೆಮನೆ ಪ್ರಚಾರಕ್ಕೆ ತೆರಳುತ್ತಿದ್ದೇವೆ. ಪ್ರತಿಯೊಂದು ಹೊಬಳಿಯಲ್ಲಿ ನಮ್ಮ ಪ್ರಚಾರ ನಡೆದಿದೆ. ಈ ಬಾರಿ ನಡೆದಷ್ಟು ವ್ಯವಸ್ಥಿತ ಪ್ರಚಾರ ಈ ಹಿಂದೆ ಯಾವತ್ತು ನಡೆದಿಲ್ಲ. ಮೋದಿ ಅವರ ಪಾರದರ್ಶಕ, ಭ್ರಷ್ಟಾಚಾರ, ಕಳಂಕ ರಹಿತ ಆಡಳಿತ ಮತ್ತು ಬಚ್ಚೇಗೌಡರ ಸಾಧನೆಗಳನ್ನು ಮುಂದಿಟ್ಟು ಪ್ರಚಾರ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್‌, ಉಪಾಧ್ಯಕ್ಷ ಸುಬ್ಬರಾಜು, ಕಾರ್ಯದರ್ಶಿ ಕಲಾ ನಾಗರಾಜ್, ನಗರ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜೆರಾಕ್ಸ್‌ ಶ್ರೀನಿವಾಸ್‌, ಎಸ್‌ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ, ಯುವ ಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಿರಣ್, ಉಪಾಧ್ಯಕ್ಷ ಬಾಲು, ನಗರ ಯುವ ಮೋರ್ಚಾ ಘಟಕದ ಅಧ್ಯಕ್ಷ ಮಧುಚಂದ್ರ, ಜಿಲ್ಲಾ ವಕ್ತಾರ ಲಕ್ಷ್ಮಿಪತಿ, ಮುಖಂಡರಾದ ಬೈರೇಗೌಡ, ಪ್ರೇಮಲೀಲಾ ವೆಂಕಟೇಶ್‌, ವಿಜಯಾ, ಶಾಮಿಯಾನ ಮಂಜಣ್ಣ ಪ್ರಚಾರದಲ್ಲಿ ಶರತ್‌ ಅವರಿಗೆ ಸಾಥ್‌ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !