2004ರ ಚುನಾವಣಾ ಫಲಿತಾಂಶ ನೆನಪಿರಲಿ: ಶಾಸಕ ಎಸ್‌.ಸುರೇಶ್‌ಕುಮಾರ್‌ ಕಿವಿಮಾತು

ಶುಕ್ರವಾರ, ಏಪ್ರಿಲ್ 19, 2019
22 °C

2004ರ ಚುನಾವಣಾ ಫಲಿತಾಂಶ ನೆನಪಿರಲಿ: ಶಾಸಕ ಎಸ್‌.ಸುರೇಶ್‌ಕುಮಾರ್‌ ಕಿವಿಮಾತು

Published:
Updated:

ಮಂಗಳೂರು: ‘ಮೋದಿ ಮತ್ತೊಮ್ಮೆ’ ಎಂಬ ಭಾವನೆ ದೇಶದ ಜನರಲ್ಲಿದೆ. ಆದರೆ, ಎಲ್ಲರಿಗೂ 2004ರ ಚುನಾವಣೆಯ ಫಲಿತಾಂಶ ನೆನಪಿರಲಿ. ಅತಿಯಾದ ವಿಶ್ವಾಸದಲ್ಲಿ ಮೈಮರೆಯದಿರಿ ಎಂದು ಶಾಸಕ ಎಸ್‌.ಸುರೇಶ್‌ಕುಮಾರ್‌ ಬಿಜೆಪಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ನಗರದ ಓಷಿಯನ್‌ ಪರ್ಲ್‌ ಹೋಟೆಲ್‌ನಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಕೀಲರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ‘2004ರ ಲೋಕಸಭಾ ಚುನಾವಣೆ ಸಮಯದಲ್ಲಿ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವ ವಾತಾವರಣ ಇತ್ತು. ಆದರೆ, ಫಲಿತಾಂಶ ಬೇರೆಯೇ ಆಗಿತ್ತು. ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾದುದು ಮತ್ತು ಪಕ್ಷದ ಕಾರ್ಯಕರ್ತರ ಅತಿಯಾದ ವಿಶ್ವಾಸ ಸೋಲಿಗೆ ಕಾರಣವಾಗಿತ್ತು’ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇಡೀ ದೇಶವೇ ವಿಶ್ವಾಸ ಇರಿಸಿದೆ. ಗಟ್ಟಿಯಾದ ನಿರ್ಣಯ ಕೈಗೊಳ್ಳಬಲ್ಲ ಪ್ರಧಾನಿ ಇದ್ದಾರೆ ಎಂಬ ನಂಬಿಕೆ ಜನರಿಗೆ ಬಂದಿದೆ. ಕೆಲವರು ‘ಮೋದಿ ಹಟಾವೋ’ ಎನ್ನುತ್ತಿದ್ದಾರೆ. ಹೆಚ್ಚಿನವರು ‘ಮೋದಿ ಮತ್ತೊಮ್ಮೆ’ ಎನ್ನುತ್ತಿದ್ದಾರೆ. ಬಹುಜನರ ಘೋಷಣೆಯೇ ನಿಜವಾಗಬೇಕು. ದೇಶ ಈಗ ಸರಿಯಾದ ದಾರಿಯಲ್ಲಿದೆ. ಈ ಪಯಣ ಮುಂದುವರಿಯಲು ಅವಕಾಶ ನೀಡಬೇಕು ಎಂದು ಹೇಳಿದರು.

ದೇಶವೇ ಕುಟುಂಬ: ‘ಮೋದಿಗೆ ದೇಶವೇ ಕುಟುಂಬ. ಆದರೆ, ಕೆಲವರಿಗೆ ತಮ್ಮ ಕುಟುಂಬವೇ ದೇಶ ಎಂಬ ಭಾವನೆ ಇದೆ. ಇಂದಿರಾ ಗಾಂಧಿಯವರು 1971ರ ಚುನಾವಣೆಯಲ್ಲಿ ‘ಗರೀಬಿ ಹಟಾವೋ’ ಘೋಷಣೆ ಮಾಡಿದ್ದರು. ಅವರ ಮೊಮ್ಮಗ ರಾಹುಲ್‌ ಗಾಂಧಿ ಈಗಲೂ ಅದೇ ಘೋಷಣೆ ಹಿಡಿದು ಹೊರಟಿದ್ದಾರೆ. ಕಾಂಗ್ರೆಸ್‌ ಘೋಷಿಸಿರುವ ‘ನ್ಯಾಯ್‌’ ಯೋಜನೆ ಕಾರ್ಯಸಾಧುವಲ್ಲ. ಸುಳ್ಳು ಹೇಳುವುದನ್ನು ತಮ್ಮ ಜನ್ಮಸಿದ್ಧ ಹಕ್ಕು ಎಂದು ಕಾಂಗ್ರೆಸ್‌ ಪಕ್ಷದವರು ಭಾವಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಅಂಬಾನಿ, ಅದಾನಿಗೆ ಲಾಭವಾಯಿತೇ?:

ನರೇಂದ್ರ ಮೋದಿಯವರು ಅಂಬಾನಿ, ಅದಾನಿಯ ಕೆಲಸ ಮಾಡುತ್ತಾರೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತವೆ. 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, 7 ಕೋಟಿ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ, ಜನಧನ, ಮುದ್ರಾ ಯೋಜನೆಗಳ ಜಾರಿ, ಔಷಧಿಗಳ ದರ ಇಳಿಕೆ ಮಾಡಿದ್ದರಿಂದ ಅಂಬಾನಿ, ಅದಾನಿಗೆ ಲಾಭವಾಯಿತೇ ಎಂದು ಪ್ರಶ್ನಿಸಿದರು.

‘ಆದಾಯ ತೆರಿಗೆ ದಾಳಿ ನಡೆದರೆ ಅದನ್ನು ಮೋದಿಯೇ ಮಾಡಿಸಿದ್ದು ಎನ್ನುತ್ತಾರೆ ವಿರೋಧ ಪಕ್ಷದ ಮುಖಂಡರು. ಬಾಲಾಕೋಟ್‌ನಲ್ಲಿ ಉಗ್ರರ ನೆಲೆಗಳ ಮೇಲಿನ ದಾಳಿ, ಬಾಹ್ಯಾಕಾಶದಲ್ಲಿ ಕ್ಷಿಪಣಿ ಬಳಸಿ ಉಪಗ್ರಹ ಧ್ವಂಸ ಮಾಡಿದ ಪ್ರಕರಣಗಳಲ್ಲಿ ಯಶಸ್ಸು ಸೇನೆ, ವಿಜ್ಞಾನಿಗಳಿಗೆ ಸಲ್ಲಬೇಕು ಎನ್ನುತ್ತಾರೆ’ ಎಂದು ಟೀಕಿಸಿದರು.

ಸಂವಿಧಾನ ಬದಲಾವಣೆ ಇಲ್ಲ:

‘ಬಿಜೆಪಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಎಂಬ ಅಪಪ್ರಚಾರ ನಡೆಯುತ್ತಿದೆ. ನಮ್ಮ ಸಂವಿಧಾನ ಅತ್ಯಂತ ಬಲಿಷ್ಠವಾದ ಗ್ರಂಥ. ಅದನ್ನು ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಸಂವಿಧಾನಕ್ಕೆ ಅತಿಹೆಚ್ಚು ಬಾರಿ ತಿದ್ದುಪಡಿ ತಂದಿರವುದು ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ. ಈ ಕುರಿತು ಜನರಿಗೆ ಸರಿಯಾಗಿ ಮಾಹಿತಿ ತಲುಪಿಸಬೇಕು’ ಎಂದು ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದರು.

 ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ಶಾಸಕ ಎನ್‌.ಯೋಗೀಶ್‌ ಭಟ್‌, ವಕೀಲರಾದ ಎ.ಎಲ್‌.ಶೆಣೈ, ಒ.ಟಿ.ಭಟ್‌, ಶಂಭು ಶರ್ಮ, ಸಂತೋಷ್‌ ನಾಯಕ್‌, ದೇವಿಪ್ರಸಾದ್‌ ಸಾಮಾನಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !