ಬಿಜೆಪಿಯಿಂದ ಮಾತ್ರ ಭೋವಿಗಳ ಅಭಿವೃದ್ಧಿ

ಶನಿವಾರ, ಏಪ್ರಿಲ್ 20, 2019
31 °C
ಭಾರತೀಯ ಭೋವಿ ಜನಾಂಗ ಪರಿಷತ್ತು, ಭೋವಿ ಜನಾಂಗ ಸಂಘದ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪದಾಧಿಕಾರಿಗಳ ಸಮಾವೇಶ

ಬಿಜೆಪಿಯಿಂದ ಮಾತ್ರ ಭೋವಿಗಳ ಅಭಿವೃದ್ಧಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಇವತ್ತು ದೇಶದಲ್ಲಿ ಭೋವಿ ಜನಾಂಗದವರ ನೋವುಗಳಿಗೆ ಸ್ಪಂದಿಸುವ ಯಾವುದಾದರೂ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಆದ್ದರಿಂದ ಭೋವಿ ಸಮುದಾಯದವರೆಲ್ಲರೂ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರಿಗೆ ಮತ ನೀಡುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಕೈಜೋಡಿಸಬೇಕು’ ಎಂದು ಭಾರತೀಯ ಭೋವಿ ಜನಾಂಗ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.

ನಗರದಲ್ಲಿ ಬುಧವಾರ ಭಾರತೀಯ ಭೋವಿ ಜನಾಂಗ ಪರಿಷತ್ತು, ಭೋವಿ ಜನಾಂಗ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪದಾಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ನವರು ನಮ್ಮನ್ನು ಇಷ್ಟು ವರ್ಷಗಳ ಕಾಲ ಮತಬ್ಯಾಂಕ್‌ ಆಗಿ ಮಾತ್ರ ಬಳಸಿಕೊಂಡು ಬಂದಿದ್ದಾರೆ. ನಮ್ಮ ಯಾವುದೇ ಬೇಡಿಕೆ ಈಡೇರಿಸುವ ಕೆಲಸ ಮಾಡಿಲ್ಲ. ಮದ್ಯ ಕೊಟ್ಟರೆ ಸಾಕು ಭೋವಿ ಜನಾಂಗದವರು ಮತ ಹಾಕುತ್ತಾರೆ ಎಂಬ ಮನಸ್ಥಿತಿಯಿಂದ ಹೊರಬಂದಿಲ್ಲ. ಯಾವುದೇ ಸಮಾಜ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಬಲವಾದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ’ ಎಂದು ತಿಳಿಸಿದರು.

‘ಭೋವಿ ಜನಾಂಗವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಆದರೆ ಈ ಹಿಂದೆ ಎಲ್ಲರಿಗೂ ಭೋವಿ ಎಂದು ಜಾತಿ ಪ್ರಮಾಣ ಪತ್ರ ನೀಡುತ್ತಿರಲಿಲ್ಲ. ಇದರಿಂದ ಸಮಸ್ಯೆಯಾಗಿತ್ತು. ಯಾವುದೇ ಹೆಸರಿನಿಂದ ಕರೆದರೂ ಎಲ್ಲರಿಗೂ ಭೋವಿ ಎಂತಲೇ ಜಾತಿ ಪ್ರಮಾಣಪತ್ರ ನೀಡುವಂತೆ ಪರಿಗಣಿಸಬೇಕು ಎಂದು ನಾವು ಸುದೀರ್ಘ ಹೋರಾಡಿ ಮಾಡಿದೆವು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಲೋಕಸಭೆಯಲ್ಲಿ ಈ ಬಗ್ಗೆ ತಿದ್ದುಪಡಿ ತರಲಾಯಿತು’ ಎಂದರು.

‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಭೋವಿ ಜನಾಂಗದ ಶಾಸಕರನ್ನು ಸಚಿವರನ್ನಾಗಿ ಮಾಡುವ ಜತೆಗೆ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆಗೆ ತಂದರು. ನಮ್ಮ ಎರಡು ಪೀಠಗಳಿಗೆ ಅನುದಾನ ನೀಡಿದರು. ಭೋವಿ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದು ಬಿಜೆಪಿ ಸರ್ಕಾರ. ಭೋವಿ ಜನಾಂಗದವರು ದೇಶ ಮಾತ್ರವಲ್ಲದೆ ಪಾಕಿಸ್ತಾನದಲ್ಲೂ ಇದ್ದಾರೆ. ಅರಿಗೆ ತೊಂದರೆಯಾದರೆ ಅವರನ್ನು ನರೇಂದ್ರ ಮೋದಿ ಅವರಿಂದ ರಕ್ಷಿಸಲು ಮಾತ್ರ ಸಾಧ್ಯ’ ಎಂದು ಹೇಳಿದರು.

‘ನಮ್ಮ ಜನಾಂಗದ ಬಗ್ಗೆ ಕಾಳಜಿ ಹೊಂದಿರುವ ಬಿಜೆಪಿಯ ಅಭ್ಯರ್ಥಿ ಬಚ್ಚೇಗೌಡರು ಹಿರಿಯ ರಾಜಕಾರಣಿಯಾಗಿದ್ದಾರೆ. ಅವರನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿದರೆ ಈ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ದೊರೆಯುತ್ತದೆ. ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಹೀಗಾಗಿ ಕ್ಷೇತ್ರದಲ್ಲಿರುವ ಭೋವಿ ಸಮುದಾಯದ ಪ್ರತಿಯೊಬ್ಬರೂ ಬಿಜೆಪಿಗೆ ಮತ ಹಾಕಬೇಕು’ ಎಂದು ತಿಳಿಸಿದರು.

ಭಾರತೀಯ ಭೋವಿ ಜನಾಂಗ ಪರಿಷತ್ತಿನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಚ್‌.ರವಿ ಮಾಕಳಿ ಮಾತನಾಡಿ, ‘ಬಿಜೆಪಿ ಸರ್ಕಾರದಲ್ಲಿ ಭೋವಿ ಸಮುದಾಯದ 12 ಶಾಸಕರಿದ್ದರು. ಅರವಿಂದ ಲಿಂಬಾವಳಿ ಅವರು ಇವತ್ತು ನಮ್ಮ ಸಮಾಜದ ಸಮಸ್ಯೆ ಬಗೆಹರಿಸಲು ಕಂಕಣಬದ್ಧರಾಗಿದ್ದಾರೆ. ಹೀಗಾಗಿ, ಬಿಜೆಪಿ ಸರ್ಕಾರದ ಮುಖಂಡತ್ವದಲ್ಲಿ ನಾವು ನಡೆಯಬೇಕು ಎಂದು ಪರಿಷತ್ತು ತೀರ್ಮಾನ ತೆಗೆದುಕೊಂಡಿದೆ’ ಎಂದರು.

‘ನಮ್ಮ ಸಂಘಟನೆ ಇಡೀ ದೇಶದಾದ್ಯಂತ ಇದೆ. ಎಲ್ಲಿ ಏನೇ ಸಮಸ್ಯೆಗಳಿದ್ದರೂ ನಾವು ಸುಲಭವಾಗಿ ಬಗೆಹರಿಸಬಹುದಾಗಿದೆ. ಅದಕ್ಕಾಗಿ ನಾವು ಬಿಜೆಪಿ ಬೆಂಬಲಿಸಬೇಕು. ಈ ಕ್ಷೇತ್ರದಲ್ಲಿ ಭೋವಿ ಜನಾಂಗದ ಸುಮಾರು 2.50 ಲಕ್ಷ ಮತದಾರರು ಇದ್ದಾರೆ. ಅವರೆಲ್ಲರೂ ಈ ಬಾರಿ ಬಚ್ಚೇಗೌಡರಿಗೇ ಮತ ನೀಡಬೇಕು’ ಎಂದು ಹೇಳಿದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶರತ್ ಬಚ್ಚೇಗೌಡ ಮಾತನಾಡಿ, ‘ಈ ಹಿಂದೆ ಮೊಯಿಲಿ ಅವರನ್ನು ಎರಡು ಬಾರಿ ಆಯ್ಕೆ ಮಾಡಿದರೆ, ಹತ್ತು ವರ್ಷಗಳಲ್ಲಿ ಹತ್ತು ಸಾವಿರ ಸುಳ್ಳು ಹೇಳಿದ್ದೇ ಅವರ ಸಾಧನೆಯಾಗಿದೆ. ಕ್ಷೇತ್ರದಲ್ಲಿ ಎಲ್ಲೆಡೆ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಇದೆ. ಎತ್ತಿನಹೊಳೆ ನೀರು ತರುತ್ತೇವೆ ಎಂದು ಪದೇ ಪದೇ ಸುಳ್ಳು ಹೇಳಿದರು. ಹತ್ತು ವರ್ಷವಾದರೂ ಈ ಭಾಗದವರಿಗೆ ಒಂದು ತೊಟ್ಟು ನೀರು ಕೊಡಲಿಲ್ಲ’ ಎಂದು ಆರೋಪಿಸಿದರು.

ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಆನಂದಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚ್ಚಿದಾನಂದಮೂರ್ತಿ, ಭೋವಿ ಸಮುದಾಯದ ಮುಖಂಡರಾದ ಜರಪಿಲ್ಲಿ ಚಂದ್ರಕಲಾ, ಜಯಶಂಕರ್, ಪಿ.ಡಿ.ವೆಂಕಟರಮಣಪ್ಪ, ವೆಂಕಟಮುನಿಯಪ್ಪ, ಎಸ್‌.ಡಿ.ನಾರಾಯಣಸ್ವಾಮಿ, ಜಿ.ಎಚ್.ಮುನಿಯಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !