‘ಮತ ಹಾಕಿ’ ಅಭಿಯಾನಕ್ಕೆ ತ್ರಿಡಿ ಪೇಂಟಿಂಗ್‌ ಮಹಿಮೆ

ಶುಕ್ರವಾರ, ಏಪ್ರಿಲ್ 26, 2019
35 °C

‘ಮತ ಹಾಕಿ’ ಅಭಿಯಾನಕ್ಕೆ ತ್ರಿಡಿ ಪೇಂಟಿಂಗ್‌ ಮಹಿಮೆ

Published:
Updated:

‘ಮತ ಹಾಕುವುದು ನಮ್ಮ ಕರ್ತವ್ಯ’ ಎಂದು ಮಾತಿನ ಮೂಲಕ ಹೇಳಿದರೆ, ಕೆಲವರು ಕೇಳಿದರೂ ಕೇಳದಂತೆ ಅಸಡ್ಡೆ ಮಾಡುತ್ತಾರೆ.   ಅದರಲ್ಲೂ ಯುವ ಪೀಳಿಗೆಯನ್ನು ಇದರೆಡೆಗೆ ಸೆಳೆಯಲು ಎಷ್ಟು ಕಸರತ್ತು ಮಾಡಿದರೂ ಕಡಿಮೆಯೇ..

ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂಗಳೇ ಈಗಿನ ಪ್ರಚಾರದ ಸರಕುಗಳಾಗಿವೆ. ಇಂತಹ ಸಂದರ್ಭದಲ್ಲಿ ‘ಮತ ಹಾಕಿ’ ಎಂದು ಹೇಳಲೂ ಇದೇ ದಾರಿ ಅನುಸರಿಸಬೇಕಾಗಿದೆ ಎನ್ನುವುದು ಸಂಘಟಕ ಗೌತಮ್‌ ಅವರ ಮಾತು. 

‘ಮೊದಲ ಬಾರಿಗೆ ಕಲಾಕೃತಿಗಳ ಪ್ರದರ್ಶನ ಮಾಡಲು ಯೋಚಿಸಿದಾಗ ನಮಗೂ ಇದೇ ಯೋಚನೆ ಬಂದಿತು. ತ್ರಿಡಿ ಕಲಾಕೃತಿಗಳನ್ನು ಪ್ರದರ್ಶಿಸಿದರೆ, ಅದನ್ನು ನೋಡಿ ಜನರು ಮೆಚ್ಚಿಕೊಳ್ಳುತ್ತಾರೆ. ಆ ನಂತರ ಅದನ್ನು ಮರೆತುಬಿಡುತ್ತಾರೆ. ಅವರು ಮರೆಯಲು ಸಾಧ್ಯವಾಗದೇ, ಬೇರೆಯವರೊಂದಿಗೂ ಹಂಚಿಕೊಳ್ಳುವಂತೆ ಮಾಡುವುದು ಹೇಗೆ? ಎಂಬ ಪ್ರಶ್ನೆ ಹುಟ್ಟಿತು. 

‘ಇದಕ್ಕಾಗಿ ಕಂಡುಕೊಂಡದ್ದು ಹೊಸ ಮಾದರಿ. ಅದೀಗ ಹೆಚ್ಚು ಜನರಿಂದ ಶೇರ್‌ ಮಾಡಲಾಗಿದೆ. ಇದಕ್ಕೆಲ್ಲಾ ಕಾರಣ ನಾವು ಮಾಡಿದ ಉಪಾಯ. ಸೆಲ್ಫಿ ಕ್ರೇಜ್‌ ಹೆಚ್ಚಿದ್ದ ಸಂದರ್ಭದಲ್ಲಿ ನಾವು ಕಲಾಕೃತಿಗಳನ್ನು ಮಾತ್ರ ಪ್ರದರ್ಶಿಸಿದರೆ ಸಾಲದು, ಅದನ್ನು ಸೆಲ್ಫಿ ಗ್ಯಾಲರಿಯಾಗಿ ಬದಲಾಯಿಸಿದೆವು. ಅಲ್ಲಿಂದ ಮುಂದಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ವರ್ಣಿಸಲು ಸಾಧ್ಯವಿಲ್ಲ’ ಎನ್ನುತ್ತಾರೆ ಅವರು. 

‘ಸಾಕಷ್ಟು ಜನರು ಬಂದರು, ತ್ರಿಡಿ ಕಲಾಕೃತಿಗಳ ಎದುರು ಸೆಲ್ಫಿ ತೆಗೆದುಕೊಂಡರು. ಫೇಸ್‌ಬುಕ್‌ ಸೇರಿದಂತೆ ಎಲ್ಲಾ ಜಾಲತಾಣಗಳಲ್ಲಿ ಹಾಕಿದರು. ಕಲಾಕೃತಿಗಳ ಎದುರು ‘ಚುನಾವಣೆಯಲ್ಲಿ ಮತ ಹಾಕಿ’ ಎಂಬ ಸಂದೇಶವನ್ನು ಭಿನ್ನವಾಗಿ ನೀಡಿದ್ದೆವು. ಇದಕ್ಕೂ ಕೂಡ ಸಾಕಷ್ಟು ಪ್ರಚಾರ ಸಿಕ್ಕಿತು’ ಎಂದರು.

ಗೋವಾದ ಕಾಲೇಜಿನಲ್ಲಿ ಓದುವ ಪೀಟರ್‌ ಹಾಗೂ ಶರವಣ್‌ ಈ ಕಲಾಕೃತಿಗಳನ್ನು ರಚಿಸಿದ್ದಾರೆ. ಆಯಿಲ್ ಪೇಂಟಿಂಗ್ ಕರಗತ ಮಾಡಿಕೊಂಡಿರುವ ಅವರು ತ್ರಿಡಿ ಕಲಾಕೃತಿಗಳನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟಿದ್ದಾರೆ. 

ಗೋಡೆ ಮೇಲೆ ಕಾಣಿಸುವ ಪ್ರತಿಯೊಂದು ಕಲಾಕೃತಿಗಳೂ ಹೊರಗೆ ಎದ್ದು ಬರುತ್ತಿವೆಯೇನೋ ಎಂಬಂತೆ ಭಾಸವಾಗುತ್ತವೆ. ತ್ರಿಡಿ ಪೇಂಟಿಂಗ್‌ಗಳ ಸಾಧ್ಯತೆಗಳೆಲ್ಲವನ್ನೂ ಬಳಸಿಕೊಂಡಿರುವುದು ಕಲಾವಿದನ ಕೈಚಳಕಕ್ಕೆ ಸಾಕ್ಷಿ ಪ್ರಜ್ಞೆಯಂತಿವೆ.

ಮಕ್ಕಳು, ಹಿರಿಯರು ಮನೆಮಂದಿಯೆಲ್ಲಾ ಕಲಾಕೃತಿಗಳನ್ನು ನೋಡಿ ಸಂಭ್ರಮಿಸಿದರು. ತ್ರಿಡಿ ಮಾದರಿಯಲ್ಲಿ ರಚಿಸಲಾದ ಗೊರಿಲ್ಲಾ, ಹೆಬ್ಬಾವು, ಡ್ರಾಗನ್‌ ಚಿತ್ರಗಳು ಹೆಚ್ಚು ಜನಾಕರ್ಷಣೆ ಪಡೆದವು. 

ನ್ಯಾಷನಲ್‌ ಕನ್ಸೂಮರ್ ಫೇರ್ ಆಯೋಜಿಸುವ ಮೇಳ ಈಗಾಗಲೇ ಆರಂಭವಾಗಿದೆ. ಭಿನ್ನಿ ಗ್ರೌಂಡ್ಸ್‌ನಲ್ಲಿ ಜೂನ್‌ 9ರವರೆಗೆ ಪ್ರದರ್ಶನ ನಡೆಯಲಿದೆ. ಈ ಮೇಳದಲ್ಲಿ ಟ್ವಿನ್‌ ಟವರ್‌, ಫುಡ್‌ ಕೋರ್ಟ್‌ ಸೇರಿದಂತೆ ಸಾಕಷ್ಟು ಆಕರ್ಷಣೆಗಳು ಇವೆ. ಪ್ರತಿದಿನ ಸಂಜೆ 4ರಿಂದ 9ರವರೆಗೆ ಪ್ರದರ್ಶನ ನಡೆಯಲಿದೆ. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !