ನೈತಿಕತೆಯಿಂದ ಮತದಾನದ ಪಾವಿತ್ರ್ಯತೆ ಕಾಪಾಡಿ

ಮಂಗಳವಾರ, ಏಪ್ರಿಲ್ 23, 2019
32 °C
ವಾರ್ತಾ ಇಲಾಖೆ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಗಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರದರ್ಶನ ಮಳಿಗೆ

ನೈತಿಕತೆಯಿಂದ ಮತದಾನದ ಪಾವಿತ್ರ್ಯತೆ ಕಾಪಾಡಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಮತದಾರರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಉತ್ತಮ ಆಡಳಿತಕ್ಕಾಗಿ ಚುನಾವಣೆಯಲ್ಲಿ ಪ್ರಾಮಾಣಿಕರನ್ನು ಆಯ್ಕೆ ಮಾಡಿ ಮತದಾನದ ಪಾವಿತ್ರ್ಯತೆ ಕಾಪಾಡಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ವಾರ್ತಾ ಇಲಾಖೆ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಗಾಗಿ ಆಯೋಜಿಸಿದ್ದ ಪ್ರದರ್ಶನ ಮಳಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮತದಾನ ಮಾಡುವುದು ಎಲ್ಲರ ಆದ್ಯ ಕರ್ತವ್ಯ. ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು. ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ ದೇಶದ ಅಭಿವೃದ್ಧಿಗೆ ಮುಂದಾಗಬೇಕು. ಚುನಾವಣೆ ಶಾಂತಿಯುತ ಹಾಗೂ ಸುಗಮವಾಗಿ ನಡೆಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಗುರುದತ್ ಹೆಗಡೆ ಮಾತನಾಡಿ, ‘ನೈತಿಕ ಮತದಾನದಿಂದ ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡುವುದು ಎಲ್ಲರ ಆದ್ಯ ಕರ್ತವ್ಯ. ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಎಲ್ಲಾ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ವಿದ್ಯುತ್ ಸಂಪರ್ಕ, ಅಂಗವಿಕಲರಿಗೆ ರ್‍ಯಾಂಪ್, ಶೌಚಾಲಯ, ಕುಡಿಯುವ ನೀರಿನಂತಹ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಸಾಮಾನ್ಯರಂತೆ ನಡೆದಾಡಲಾರದ ಸ್ಥಿತಿಯಲ್ಲಿರುವ ಅಂಗವಿಕಲ ಮತದಾರರಿಗೆ ಈ ಬಾರಿ ಅಡೆತಡೆ ರಹಿತವಾಗಿ ಮತಗಟ್ಟೆ ಹೋಗಿ ಸುಲಭವಾಗಿ ಮತ ಚಲಾಯಿಸಿ ಬರಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲ ಮತದಾರರು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.

‘ಮತದಾನ ಪ್ರಮಾಣ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕರಪತ್ರ, ಭಿತ್ತಿಪತ್ರ, ಬ್ಯಾನರ್‌, ಬೀದಿನಾಟಕ, ಪ್ರಚಾರ ವಾಹನ, ಪ್ರಾತ್ಯಕ್ಷಿಕೆ, ಜಾಹೀರಾತು, ಸ್ಟಿಕ್ಕರ್ ಬಳಕೆ ಮಾಡಲಾಗುತ್ತಿದೆ. ಸ್ವೀಪ್ ಸಮಿತಿಯಿಂದ ಜಿಲ್ಲೆಯಾದ್ಯಂತ ರಂಗೋಲಿ, ಚಿತ್ರಕಲೆ, ಕ್ರೀಡಾಕೂಟ, ಬೈಕ್‌ ರ್‍ಯಾಲಿ, ಸೈಕಲ್ ಜಾಥಾ, ಮೇಣದ ಬತ್ತಿ ಮೆರವಣಿಗೆ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಂಜೀವಪ್ಪ, ಸಹಾಯಕ ನಿರ್ದೇಶಕ ಮುನಿರಾಜು, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಾಧವರಾವ್, ಸ್ವೀಪ್ ಸಮಿತಿಯ ಸದಸ್ಯ ಸತೀಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !