ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಬಡವರಿಗೆ ಉದ್ಯೋಗ

ಸೋಮವಾರ, ಏಪ್ರಿಲ್ 22, 2019
31 °C
ಕಾಂಗ್ರೆಸ್‌, ಬಿಜೆಪಿ ವಿರುದ್ಧ ಬಿಎಸ್‌ಪಿ ನಾಯಕಿ ಮಾಯಾವತಿ ವಾಗ್ದಾಳಿ

ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಬಡವರಿಗೆ ಉದ್ಯೋಗ

Published:
Updated:
Prajavani

ಮೈಸೂರು: ‘ಬೆಹನ್‌ಜೀ ಮಾಯಾವತಿ ಭಾವಿ ಪ್ರಧಾನಿ’ ಎಂಬ ಘೋಷಣೆಗಳ ನಡುವೆಯೇ ಬುಧವಾರ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ ಅವರು ರಾಜ್ಯದಲ್ಲಿ ಪಕ್ಷದ ಪ್ರಚಾರ ಕಹಳೆ ಮೊಳಗಿಸಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ‘ಆನೆ ನಡಿಗೆ ಸಂಸತ್‌ ಕಡೆಗೆ’ ಎಂಬ ಹೆಸರಿನಲ್ಲಿ ಆಯೋಜಿಸಿದ್ದ ಬಿಎಸ್‌ಪಿ ಸಮಾವೇಶದಲ್ಲಿ ಅವರು ಪಕ್ಷದ ಕಾರ್ಯಕರ್ತರಿಗೆ ಹುರುಪು ತುಂಬಿದರು. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ‘ಅಧಿಕಾರದ ಚಾವಿ’ಯನ್ನು ಹಸ್ತಾಂತರಿಸುವಂತೆ ಮನವಿ ಮಾಡಿದರು.

ಭಾಷಣದ ಪೂರ್ಣಾವಧಿ ಸಮಯವನ್ನು ಕಾಂಗ್ರೆಸ್‌ ಹಾಗೂ ಬಿಜೆಪಿ ಟೀಕಿಸಲು ಮುಡಿಪಾಗಿಟ್ಟರು. ಈ ಪಕ್ಷಗಳ ಆಡಳಿತ ಸ್ವರೂಪದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಜರಿದರು. ಬಿಜೆಪಿಯ ‘ಚೌಕಿದಾರ್‌’ ಹಾಗೂ ಕಾಂಗ್ರೆಸ್‌ನ ‘ನ್ಯಾಯ್‌’– ಕನಿಷ್ಠ ಆದಾಯ ಯೋಜನೆ ಬಗ್ಗೆ ವ್ಯಂಗ್ಯವಾಡಿದರು.

‘ಕಾಂಗ್ರೆಸ್‌, ಬಿಜೆಪಿ ಹಲವಾರು ವರ್ಷ ದೇಶ ಆಳಿವೆ. ಆದರೆ, ಬಡತನ ನಿರ್ಮೂಲನೆ ಮಾಡಲು ಈ ಪಕ್ಷಗಳಿಂದ ಸಾಧ್ಯವಾಗಿಲ್ಲ. ಉದ್ಯೋಗದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯ. ಬಿಎಸ್‌ಪಿ ಅಧಿಕಾರಕ್ಕೆ ಬಂದರೆ ಪ್ರತಿ ಬಡ ಕುಟುಂಬದ ಒಬ್ಬರಿಗೆ ಸರ್ಕಾರಿ ಅಥವಾ ಅನುದಾನಿತ ಸಂಸ್ಥೆಗಳಲ್ಲಿ ಉದ್ಯೋಗ ನೀಡುತ್ತೇವೆ’ ಎಂದು ಭರವಸೆ ನೀಡಿದರು.

‘ನಾವು ಹೆಚ್ಚು ಮಾತನಾಡುವುದಿಲ್ಲ; ಬದಲಾಗಿ ಕೆಲಸ ಮಾಡಿ ತೋರಿಸುತ್ತೇವೆ’ ಎಂದು ಎದುರಾಳಿಗಳನ್ನು ಕಿಚಾಯಿಸಿದರು.

‘ಚುನಾವಣೆ ಸಮಯದಲ್ಲಿ ಚೌಕಿದಾರ್‌ ಎಂಬ ಘೋಷಣೆ ಮೊಳಗುತ್ತಿದೆ. ಐದು ವರ್ಷಗಳಲ್ಲಿ ಚೌಕಿದಾರ್‌ ಎಲ್ಲಿದ್ದರು. ಇಂಥ ನಾಟಕಗಳು ಪ್ರಧಾನಿ ಮೋದಿ ಅವರನ್ನು ಈ ಬಾರಿ ಸೋಲಿನಿಂದ ಬಚಾವ್‌ ಮಾಡುವುದಿಲ್ಲ. ಅವರು ಶ್ರೀಮಂತರ, ಉದ್ಯಮಿಗಳ ಚೌಕಿದಾರ್‌’ ಎಂದು ಟೀಕಾ ಪ್ರಹಾರ ನಡೆಸಿದರು.

‘ಬಿಜೆಪಿ ಸರ್ಕಾರವು ಹಿಂದಿನ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನೇ ಪೂರೈಸಿಲ್ಲ. ಜನರ ಖಾತೆಗೆ ₹ 15 ಲಕ್ಷ ವರ್ಗಾವಣೆ ಆಗಲಿಲ್ಲ. ದಲಿತರು, ಆದಿವಾಸಿಗಳು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರ ವಿಕಾಸಕ್ಕೆ ಮೋದಿ ಯಾವುದೇ ಯೋಜನೆ ರೂಪಿಸಲಿಲ್ಲ. ಈಗ ಹೊಸದಾಗಿ ಪೊಳ್ಳು ಭರವಸೆ ನೀಡಿದ್ದಾರೆ. ಹೊಸ ಯೋಜನೆ ಘೋಷಣೆ ಮಾಡುವ ನೈತಿಕ ಅಧಿಕಾರ ಅವರಿಗೆ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ನಂತೆ ಬಿಜೆಪಿ ಕೂಡ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ವಿಪಕ್ಷಗಳ ನಾಯಕರ ಮನೆಗಳ ಮೇಲೆ ದಾಳಿ ನಡೆಸುತ್ತಿದೆ’ ಎಂದು ಆರೋಪಿಸಿದರು.

ಭ್ರಷ್ಟಾಚಾರ ಪ್ರತಿ ಹಂತದಲ್ಲೂ ತಾಂಡವವಾಡುತ್ತಿದೆ. ಹಿಂದೆ ಕಾಂಗ್ರೆಸ್‌ ಸರ್ಕಾರ ಬೊಫೋರ್ಸ್‌ ಹಗರಣದಲ್ಲಿ, ಈಗ ಬಿಜೆಪಿ ಸರ್ಕಾರ ರಫೇಲ್‌ ಹಗರಣದಲ್ಲಿ ಮುಳುಗಿವೆ ಎಂದು ದೂರಿದರು.

‘ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿವೆ. ರಕ್ಷಣೆ ಇಲ್ಲದಂತಾಗಿದೆ. ದೇಶಭಕ್ತರೆಂದು ತೋರಿಸಿಕೊಳ್ಳಲು ಬಿಜೆಪಿ ಮುಖಂಡರು ಮತ್ತಷ್ಟು ಶ್ರಮಪಡುತ್ತಿದ್ದಾರೆ. ದೇಶದ ಭದ್ರತಾ ವಿಚಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕರ್ನಾಟಕದಲ್ಲಿ ಪಕ್ಷದ ಎನ್‌.ಮಹೇಶ್‌ ಅವರನ್ನು ಶಾಸಕರನ್ನಾಗಿ ಮಾಡಿದ್ದೀರಿ. ಸಚಿವರೂ ಆಗಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಮರ್ಥ್ಯವನ್ನು ಬಿಎಸ್‌ಪಿ ಹೊಂದಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಪದವಿಯನ್ನೂ ಅಲಂಕರಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !