ಜೆಡಿಎಸ್‌ ಪಕ್ಷಕ್ಕೆ ಶಾಶ್ವತ ವೈರಿಗಳಿಲ್ಲ

ಶನಿವಾರ, ಏಪ್ರಿಲ್ 20, 2019
32 °C
ಅಗತ್ಯಬಿದ್ದರೆ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ವಿರುದ್ಧದ ಕೇಸ್‌ ವಾಪಸ್‌

ಜೆಡಿಎಸ್‌ ಪಕ್ಷಕ್ಕೆ ಶಾಶ್ವತ ವೈರಿಗಳಿಲ್ಲ

Published:
Updated:
Prajavani

ಮೈಸೂರು: ‘ರಾಜಕೀಯ ಘರ್ಷಣೆಗಳಿಂದಾಗಿ ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಅಗತ್ಯ ಬಿದ್ದರೆ ಹಿಂಪಡೆಯಲಾಗುವುದು. ಇದು ಮೈತ್ರಿ ಧರ್ಮ ಪಾಲನೆಯ ಒಂದು ಭಾಗ’ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು.

‘ನಮ್ಮ ಪಕ್ಷದ ಸಿದ್ಧಾಂತವೆಂದರೆ ಯಾರ ವಿರುದ್ಧವೂ ಶಾಶ್ವತವಾಗಿ ವೈರತ್ವ ಬೆಳೆಸಿಕೊಳ್ಳುವುದಿಲ್ಲ. ನಮಗೆ ಬೇಕಾಗಿರುವುದು ರಾಜ್ಯ, ರಾಷ್ಟ್ರದ ಅಭಿವೃದ್ಧಿ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕೋಮುವಾದಿ ಶಕ್ತಿಗಳನ್ನು ದೂರ ಇಡುವ ಏಕೈಕ ಉದ್ದೇಶದಿಂದ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದೇವೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕೊಡುಗೆ ಏನು‘ ಎಂದು ಪ್ರಶ್ನಿಸಿದರು.

‘ಕೆಲವರು ದೇವೇಗೌಡರ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಯಡಿಯೂರಪ್ಪ ಏಕೆ ಅವರ ಪುತ್ರನನ್ನು ಕಣಕ್ಕಿಳಿಸಿದರು. ಬೇರೆಯವರು ಅವರಿಗೆ ಕಾಣಿಸಲಿಲ್ಲವೇ’ ಎಂದು ಕೇಳಿದರು.

‘ಕೃಷಿ ಸಮ್ಮಾನ್‌ ನಿಧಿ ಯೋಜನೆಯಡಿ ಫಲಾನುಭವಿಗಳ ಪಟ್ಟಿಯನ್ನು ನಾವು ಮೋದಿ ಅವರಿಗೆ ಕಳಿಸಿಕೊಡಬೇಕೇ ಅಥವಾ ಯಡಿಯೂರಪ್ಪ ಅವರಿಗೆ ಕಳಿಸಿಕೊಡಬೇಕೇ? ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು 15 ಲಕ್ಷ ರೈತರ ಪಟ್ಟಿಯನ್ನು ಸಂಬಂಧಪಟ್ಟವರಿಗೆ ಕಳಿಸಿಕೊಟ್ಟಿದ್ದಾರೆ. ಪಟ್ಟಿ ನೀಡಿಲ್ಲವೆಂಬುದು ಸಾಬೀತಾದರೆ ರಾಜಕೀಯ ತೊರೆಯುತ್ತೇನೆ’ ಎಂದು ಸವಾಲು ಹಾಕಿದರು.

‘ಕುಮಾರಸ್ವಾಮಿ ಮಂಡಿಸಿದ ಎರಡು ಬಜೆಟ್‌ ಇಡೀ ದೇಶದಲ್ಲಿಯೇ ಅತ್ಯುನ್ನತ ಬಜೆಟ್‌ ಎನಿಸಿಕೊಂಡಿವೆ. ನಾವು ರೈತರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಸಾಲಮನ್ನಾ ಮಾಡಿದ್ದೇವೆ. ಆದರೆ, 50 ಲಕ್ಷ ತೆಂಗಿನ ಗಿಡಗಳು ನಾಶವಾದರೂ ಮೋದಿ ಸರ್ಕಾರ ಸ್ಪಂದಿಸಿಲ್ಲ. ಕೊಡಗು ಪ್ರವಾಹಕ್ಕೆ ಯಾವುದೇ ಕೊಡುಗೆ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆ ಹಣ ಚುನಾವಣೆಗೆ ಬಳಕೆಯಾಗುತ್ತಿದೆ ಎಂಬ ಅರುಣ್‌ ಜೇಟ್ಲಿ ಆರೋಪಕ್ಕೆ, ‘ನನ್ನ ಇಲಾಖೆಯ ಪ್ರತಿ ಕಾಮಗಾರಿಯಲ್ಲಿ ಶೇ 5ರಷ್ಟು ಹಣವನ್ನು ಸರ್ಕಾರಕ್ಕೆ ಉಳಿಸಿದ್ದೇನೆ. ‘ಏಕೆ ಉಳಿಸುತ್ತೀರಿ, ನೀವೇ ಇಟ್ಟುಕೊಳ್ಳಿ’ ಎಂದು ಕೆಲವರು ಸಲಹೆ ನೀಡಿದರು. ಆದರೆ, ನಾನು ಅಂಥ ಪಾಪದ ಕೆಲಸ ಮಾಡಲ್ಲ’ ಎಂದು ನುಡಿದರು.

ನಿಖಿಲ್‌, ಪ್ರಜ್ವಲ್‌ ಗೆಲುವು ಸಾಧಿಸಿ ಕೇಂದ್ರದಲ್ಲಿ ಯುಪಿಎ ಸರ್ಕಾರ ರಚಿಸಿದರೆ ಯಾರು ಸಚಿವರಾಗುತ್ತಾರೆ ಎಂಬುದಕ್ಕೆ, ‘ನಮಗೆ ಸಚಿವ ಸ್ಥಾನ ಮುಖ್ಯ ಅಲ್ಲ; ರಾಜ್ಯದ ಬಡವರ ಹಿತ ಮುಖ್ಯ. ಜೆಡಿಎಸ್‌ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಅವರಲ್ಲಿ ಒಬ್ಬರು ಸಚಿವರಾಗುತ್ತಾರೆ. ಮಧು ಬಂಗಾರಪ್ಪ ಕೂಡ ಆಗಬಹುದು’ ಎಂದರು.

2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈಶ್ವರಪ್ಪ ನಮ್ಮ ಪಕ್ಷ ಸೇರಲು ಮುಂದಾಗಿದ್ದರು. ಆದರೆ, ನಾವು ಅವರನ್ನು ಸೇರಿಸಿಕೊಳ್ಳಲಿಲ್ಲ ಎಂದು ಹೇಳಿದರು.

ಮಾಧ್ಯಮವರ ಮೇಲೆ ಹಲ್ಲೆ ನಡೆದರೆ ತಾವು ಜವಾಬ್ದಾರರಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆಗೆ, ‘ಮಾಧ್ಯಮದವರ ಮೇಲೆ ಬಿಜೆಪಿಯವರ ಹಲ್ಲೆ ನಡೆಸಬಹುದು. ಅವರು ಹಲ್ಲೆ ಮಾಡಿದರೆ ನೀವು ಜೆಡಿಎಸ್‌ನವರು ಎಂದುಕೊಳ್ಳುತ್ತೀರಿ. ಹೀಗಾಗಿ, ಎಚ್ಚರಿಕೆಯಿಂದ ಇರಬೇಕೆಂಬುದು ಮುಖ್ಯಮಂತ್ರಿ ಕಾಳಜಿ’ ಎಂದರು.

ಮೈಸೂರು–ಕೊಡಗು, ಮಂಡ್ಯ, ಚಾಮರಾಜನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮೈತ್ರಿ ಅಭ್ಯರ್ಥಿಗಳನ್ನು ಮತದಾರರು ಕೈಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ನರಸಿಂಹಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಕಾಂಗ್ರೆಸ್‌ ಮುಖಂಡ ವಾಸು, ಜೆಡಿಎಸ್‌ ಮುಖಂಡ ಪ್ರೊ.ಕೆ.ಎಸ್‌.ರಂಗಪ್ಪ ಇದ್ದರು.

ಶುಕ್ರವಾರ ಮಂಡ್ಯ, ಮೈಸೂರಲ್ಲಿ ಪ್ರಚಾರ
ಎಚ್‌.ಡಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರು ಮೈಸೂರು–ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಪರ ಏ. 12ರಂದು ಸಂಜೆ 5 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜಂಟಿ ಪ್ರಚಾರ ಸಭೆ ನಡೆಸಲಿದ್ದಾರೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

ಇದಕ್ಕೂ ಮೊದಲು ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ಮತಯಾಚಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 11

  Angry

Comments:

0 comments

Write the first review for this !