ಮೈತ್ರಿ ಒಳಜಗಳ ಬಿಜೆಪಿ ಗೆಲುವಿಗೆ ಸಹಕಾರಿ

ಶನಿವಾರ, ಏಪ್ರಿಲ್ 20, 2019
31 °C
ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಪರ ಬಿ.ಶ್ರೀರಾಮುಲು, ಶ್ರುತಿ ರೋಡ್ ಶೋ

ಮೈತ್ರಿ ಒಳಜಗಳ ಬಿಜೆಪಿ ಗೆಲುವಿಗೆ ಸಹಕಾರಿ

Published:
Updated:
Prajavani

ಬಾಗೇಪಲ್ಲಿ: ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್– ಜೆಡಿಎಸ್ ನಾಯಕರ ಒಳಜಗಳದಿಂದ ರಾಜ್ಯದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ಶ್ರೀರಾಮುಲು ಭವಿಷ್ಯ ನುಡಿದರು.

ಪಟ್ಟಣದ ಮುಖ್ಯರಸ್ತೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಪರ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿ, ರೋಡ್ ಶೋ ಮೂಲಕ ಮತ ಯಾಚಿಸಿ ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡಿ ದೇಶಕ್ಕೆ ಭದ್ರತೆ ಒದಗಿಸಿದೆ. ದೇಶದಲ್ಲಿ 300ಕ್ಕೂ ಅಧಿಕ ಸ್ಥಾನ ಗಳಿಸಿ ಬಿಜೆಪಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಬರಲಿದೆ. ಮೋದಿ ಅವರು ಪ್ರಧಾನಿಯಾಗಿ ದೇಶ ಕಾಯುವ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಸಾಲ ಮನ್ನಾ ಮಾಡುವುದಾಗಿ ಹೇಳಿ, ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕರು ಭಿನ್ನಾಭಿಪ್ರಾಯದಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತದೆ. ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಅವರ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದರು.

ಬಯಲುಸೀಮೆ ಪ್ರದೇಶಗಳಿಗೆ ಶಾಶ್ವತವಾಗಿ ನೀರು ತರುವುದಾಗಿ 10 ವರ್ಷದಿಂದ ಸಂಸದ ವೀರಪ್ಪ ಮೊಯಿಲಿ ಸುಳ್ಳು ಹೇಳುತ್ತಿದ್ದಾರೆ. ನೀರು ಇಲ್ಲದೇ ಇಲ್ಲಿನ ಜನರು ಪರದಾಡುತ್ತಿದ್ದಾರೆ. ಆದರೂ ಮತ್ತೊಮ್ಮೆ ಸುಳ್ಳು ಭರವಸೆ ನೀಡುತ್ತಲೇ ಮೊಯಿಲಿ ಸ್ಪರ್ಧೆಯಲ್ಲಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆ ಜಾರಿಗೆ ಬದ್ಧ. ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಅದಕ್ಕಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಿ, ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಮಾತನಾಡಿ, ‘ನನ್ನದು ಬಯಲುಸೀಮೆ ಪ್ರದೇಶದ ಹೊಸಕೋಟೆ. ನಾನು ಎಲ್ಲಿಯೂ ಹೋಗಿಲ್ಲ. ನಿಮ್ಮ ಮನೆಯ ಮಗನಾಗಿದ್ದೇನೆ. ಕ್ಷೇತ್ರದ ಸಂಸದನಾಗಿ ಕೆಲಸ ಮಾಡಲು, ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು, ನೀರಾವರಿ ಯೋಜನೆಗಳ ಸಮಗ್ರ ಅನುಷ್ಠಾನಕ್ಕೆ, ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡುತ್ತೇನೆ. ನನಗೆ ಸುಳ್ಳು ಹೇಳಲು ಬರುವುದಿಲ್ಲ. ಸುಳ್ಳು ಹೇಳಿ ಜನರನ್ನು ವಂಚಿಸುವ ಪ್ರವೃತ್ತಿ ನನ್ನದಲ್ಲ’ ಎಂದು ಹೇಳಿದರು.

ಬೈಕ್ ರ್‍ಯಾಲಿ, ರೋಡ್ ಶೋನಲ್ಲಿ ಸಿನಿಮಾ ನಟಿ ಶ್ರುತಿ, ಉಸ್ತುವಾರಿ ಸಚ್ಚಿದಾನಂದ ಮೂರ್ತಿ, ಮುಖಂಡರಾದ ಛಲವಾದಿ ನಾರಾಯಣಸ್ವಾಮಿ, ಡಾ.ಮಂಜುನಾಥ್, ಕೆ.ಆರ್.ಆಂಜಿನಪ್ಪ, ಮಲ್ಲಿಕಾರ್ಜುನರೆಡ್ಡಿ, ಎಚ್.ಎ.ರಾಮಲಿಂಗಪ್ಪ, ಎಸ್.ಟಿ.ಚಂದ್ರಮೋಹನ್, ನಂಜೇಶ್‌ರೆಡ್ಡಿ, ಮಂಜುನಾಥ್, ವೆಂಕಟೇಶ್, ಗೂಳೂರು ಲಕ್ಷ್ಮೀನಾರಾಯಣ, ಲೋಕೇಶ್‌ಕುಮಾರ್‌, ಆಂಜಿನೇಯಲು, ಸಿ.ಎನ್.ಧೀರಜ್, ನಿರ್ಮಲಾ, ಮಂಜುಳಾ, ಆದಿಲಕ್ಷ್ಮಮ್ಮ, ಮಂಜುಳಾಬಾಯಿ, ಲಕ್ಷ್ಮಿ, ವನಜಾ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !