ಬಿಜೆಪಿ ತಿರಸ್ಕರಿಸಿ, ಸಿಪಿಎಂ ಬೆಂಬಲಿಸಿ: ಗೋಪಾಲಕೃಷ್ಣ ಹರಳಹಳ್ಳಿ ಮನವಿ

ಸೋಮವಾರ, ಏಪ್ರಿಲ್ 22, 2019
31 °C

ಬಿಜೆಪಿ ತಿರಸ್ಕರಿಸಿ, ಸಿಪಿಎಂ ಬೆಂಬಲಿಸಿ: ಗೋಪಾಲಕೃಷ್ಣ ಹರಳಹಳ್ಳಿ ಮನವಿ

Published:
Updated:

ಚಿಕ್ಕಬಳ್ಳಾಪುರ: ‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರು ಈ ಚುನಾವಣೆಯಲ್ಲಿ ದಲಿತ ವಿರೋಧಿ ಮನುವಾದಿ ಬಿಜೆಪಿಯನ್ನು ಸೋಲಿಸಿ, ಜನಪರವಾದ ಸಿಪಿಎಂ ಅಭ್ಯರ್ಥಿ ಎಸ್.ವರಲಕ್ಷ್ಮಿ ಅವರನ್ನು ಬೆಂಬಲಿಸಬೇಕು’ ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಘಟಕದ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತರು, ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರ ಮೇಲೆ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಬಿಜೆಪಿ ಸರ್ಕಾರ ಸಂವಿಧಾನ ಬದ್ಧವಾದ ಜನರ ಹಕ್ಕುಗಳನ್ನು ದಮನ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.

‘ಮನುವಾದಿ ಸಂಸ್ಕೃತಿ ಪಾಲಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳು ತೀವ್ರವಾಗಿವೆ. ಆದ್ದರಿಂದ ರಾಜ್ಯದ ದಲಿತರು ಎಚ್ಚೆತ್ತುಕೊಂಡು ದಲಿತ ವಿರೋಧಿ ಬಿಜೆಪಿ ಪಕ್ಷವನ್ನು ತಿರಸ್ಕಾರ ಮಾಡಬೇಕು’ ಎಂದು ತಿಳಿಸಿದರು.

‘ದೇಶದಲ್ಲಿ ದಲಿತರ ಅಭಿವೃದ್ಧಿ ಸಂಪೂರ್ಣ ಕಡೆಗಣಿಸಲಾಗಿದೆ. ಬಡ್ತಿ ಮೀಸಲಾತಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದೆ ದಲಿತರನ್ನು ವಂಚಿಸಲಾಗಿದೆ. ಆದ್ದರಿಂದ ಸಂವಿಧಾನ ಬದಲಾವಣೆ ಮಾಡುತ್ತೇವೆ ಮತ್ತು ಮೀಸಲಾತಿ ತೆಗೆಯುತ್ತೇವೆ ಎಂದು ಮಾತನಾಡುವವರ ಬಗ್ಗೆ ದಲಿತರು ಎಚ್ಚೆತ್ತುಕೊಳ್ಳದಿದ್ದರೆ ಮತ್ತೇ ಶೋಷಣೆಗೆ ಒಳಗಾಗುವುದು ತಪ್ಪುವುದಿಲ್ಲ. ಆದ್ದರಿಂದ, ಶೋಷಿತ ಸಮುದಾಯಗಳು ಒಂದಾಗಿ ಸಂವಿಧಾನ ಉಳಿಸಬೇಕು’ ಎಂದರು.

‘ದಲಿತರು ಮೀಸೆ ಬಿಟ್ಟ ಕಾರಣಕ್ಕೆ ಹಲ್ಲೆ, ರೋಹಿತ್ ವೇಮುಲಾ ಹತ್ಯೆ, ಕೊರೆಂಗಾವ್ ವಿಜಯೋತ್ಸವ ಸಂದರ್ಭದಲ್ಲಿ ದಲಿತರ ಮೇಲೆ ದಾಳಿಗಳನ್ನು ನೋಡಿದ ಮೇಲೆ ದಲಿತ ವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದು ಹೇಳಿದರು. ರಾಜ್ಯ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ನರಸಿಂಹಪ್ಪ, ಗುಡಿಬಂಡೆ ತಾಲ್ಲೂಕು ಸಂಚಾಲಕ ರಮಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !