ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು: ಎಬಿವಿಪಿ ಜಾಥಾ

ಮಂಗಳವಾರ, ಏಪ್ರಿಲ್ 23, 2019
31 °C

ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು: ಎಬಿವಿಪಿ ಜಾಥಾ

Published:
Updated:
Prajavani

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು, ‘ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಎಂಬ ದ್ಯೇಯವಾಕ್ಯದೊಂದಿಗೆ ಶುಕ್ರವಾರ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು.

ನಗರದ ಪಂಚಗಿರಿ ಬೋಧನಾ ಪ್ರೌಢಶಾಲೆಯಿಂದ ಆರಂಭವಾದ ಜಾಥಾ ಗಂಗಮ್ಮನ ಗುಡಿ ರಸ್ತೆ, ಬಜಾರ್ ರಸ್ತೆ, ಬಿ.ಬಿ.ರಸ್ತೆ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಖಾಸಗಿ ಬಸ್ ನಿಲ್ದಾಣದ ಬಳಿ ಸಮಾಪ್ತಿಯಾಯಿತು. ಜಾಥಾದಲ್ಲಿ ‘ಸುಭದ್ರ ದೇಶದ ನಿರ್ಮಾಣಕ್ಕಾಗಿ ಮೋದಿ ಸರಕಾರಕ್ಕೆ ಮತಯಾಚಿಸುತ್ತೇವೆ’ ಎಂದು ಪ್ರಮಾಣ ವಚನ ಬೋಧಿಸಲಾಯಿತು.

ಈ ವೇಳೆ ಮಾತನಾಡಿದ ಎಬಿವಿಪಿ ವಿಭಾಗದ ಸಂಚಾಲಕ ಮಂಜುನಾಥ್ ರೆಡ್ಡಿ, ‘ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಪಾರದರ್ಶಕತೆ ಆಡಳಿತ ನೀಡಿದ್ದಾರೆ. ಇವತ್ತು ನಮ್ಮ ದೇಶ ಬಲಿಷ್ಠವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಅವರೇ ಕಾರಣ. ಹೀಗಾಗಿ ಮತ್ತೊಮ್ಮೆ ಮೋದಿ ಅವರು ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮೆಲ್ಲರ ಬಯಕೆ’ ಎಂದು ಹೇಳಿದರು.

‘ಮೋದಿ ಅವರು ಪ್ರಧಾನಿ ಆದ ಬಳಿಕ ದೇಶದಲ್ಲಿ ನಡೆಯುತ್ತಿದ್ದ ಕೋಮು ಗಲಭೆಗಳು ಕಡಿಮೆಯಾಗಿವೆ. ಶತ್ರು ದೇಶವನ್ನು ಹಿಮ್ಮೆಟ್ಟಿಸುವ ಸೇನೆಯ ಸಾಮರ್ಥ್ಯ ಬಲಗೊಂಡಿದೆ. ಬಡವರು, ದಲಿತರು, ಹಿಂದುಳಿದವರು, ರೈತರು, ಕಾರ್ಮಿಕರು, ಮಹಿಳೆಯರು, ವೃದ್ಧರಿಗಾಗಿ ಅನೇಕ ಜನಪರ ಯೋಜನೆಗಳು ಜಾರಿಗೆ ತರಲಾಗಿದೆ’ ಎಂದು ತಿಳಿಸಿದರು.

ಎಬಿವಿಪಿ ಕಾರ್ಯಕರ್ತ ಬಾಬುರೆಡ್ಡಿ ಮಾತನಾಡಿ, ‘ದೇಶದ ಭವಿಷ್ಯ ಗಟ್ಟಿಯಾಗಬೇಕಾದರೆ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಅವರಿಂದ ಮಾತ್ರ ಸುಭದ್ರ ದೇಶವನ್ನು ಕಟ್ಟಲು ಸಾಧ್ಯ. ದೇಶದ ಹಿತಕ್ಕಾಗಿ ರಜೆ ಪಡೆಯದೆ ದುಡಿಯುತ್ತಿರುವ ಮೋದಿ ಅವರು ಎಲ್ಲರಿಗೂ ಮಾದರಿ’ ಎಂದರು.

ಎಬಿವಿಪಿ ಕಾರ್ಯಕರ್ತರಾದ ಹರೀಶ್, ಮಧು, ವಿಜಯ್, ಕಿರಣ್, ವಿಜಯ್, ಮಲ್ಲಿಕಾರ್ಜನ್, ಅಮಿತ್, ಅಖಿಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಲಕ್ಷ್ಮೀ ನಾರಾಯಣಗುಪ್ತಾ, ಕನ್ನಡ ಸೇನೆ ರಾಜ್ಯ ಘಟಕದ ಅಧ್ಯಕ್ಷ ಪ್ರಸನ್ನಗೌಡ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !