ವಿಜೃಂಭಣೆಯ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ

ಶುಕ್ರವಾರ, ಏಪ್ರಿಲ್ 26, 2019
35 °C

ವಿಜೃಂಭಣೆಯ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ

Published:
Updated:
Prajavani

ಕುಣಿಗಲ್: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಎಡೆಯೂರಿನ ಸಿದ್ದಲಿಂಗೇಶ್ವರ ಸ್ವಾಮಿಯ ಮಹಾ ರಥೋತ್ಸವ ನಾಡಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಶಿವಯೋಗಿ ಸಿದ್ದಲಿಂಗೇಶ್ವರ ಸ್ವಾಮಿ 548 ವರ್ಷಗಳ ಹಿಂದೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಿರ್ವಿಕಲ್ಪ ಸಮಾದಿಯಾದ ಸಮಯಕ್ಕೆ ಸರಿಯಾಗಿ ಶುಭ ಶುಕ್ರವಾರದ ಅಭಿಜಿನ್ ಲಗ್ನದಲ್ಲಿ ವಿಶೇಷವಾಗಿ ಅಲಂಕಾರಗೊಂಡಿದ್ದ ರಥದಲ್ಲಿ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಎಡೆಯೂರು ಬಾಳೆಹೊನ್ನೂರು ಶಾಖ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕುಪ್ಪೂರಿನ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಗಂಗೆಯ ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಗ್ಗೆರೆ ಸಿದ್ದಲಿಂಗ ಸ್ವಾಮೀಜಿ, ಬಿದನಗೆರೆ ಸತ್ಯ ಶನೇಶ್ಚರ ದೇವಾಲಯದ ಧನಂಜಯ್ಯ ಸ್ವಾಮೀಜಿ, ವಿಆರ್‌ಎಲ್ ಸಮೂಹದ ವಿಜಯಶಂಕೇಶ್ವರ್ ಅವರ ಸಮ್ಮುಖದಲ್ಲಿ ನಂದಿಧ್ವಜ ಪೂಜೆ ನೆರವೇರಿಸಲಾಯಿತು. ಬಳಿಕ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಭಕ್ತರು ರಥವನ್ನು ಎಳೆದು ದವನ ಬಾಳೆಹಣ್ಣು ಮತ್ತು ಕಾಳುಮೆಣಸನ್ನು ರಥದತ್ತ ತೂರಿ ಸಂಭ್ರಮಿಸಿದರು.

ಷಟ್‌ಸ್ಥಲ ಧ್ವಜವನ್ನು ಬೆಳಗಾವಿಯ ಚಂದ್ರಶೇಖರ ಶಾಸ್ತ್ರಿ ₹ 2,46,000ಕ್ಕೆ ಹರಾಜಿನಲ್ಲಿ ಪಡೆದು ಪ್ರಥಮ ಪೂಜೆಗೆ ಅವಕಾಶ ಪಡೆದರು.

ತುಮಕೂರಿನ ಉಪವಿಭಾಗಾಧಿಕಾರಿ ಶಿವಕುಮಾರ್, ಮುಜರಾಯಿ ತಹಶೀಲ್ದಾರ್ ಸಿದ್ದಗಂಗಮ್ಮ, ಕಾರ್ಯನಿರ್ವಾಹಕಾಧಿಕಾರಿ ಧನಲಕ್ಷ್ಮಿ, ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು ಇದ್ದರು.

ಭಕ್ತರ ದಾಹ ತಣಿಸಲು ನೂರಾರು ಕಡೆ ನೀರು ಮಜ್ಜಿಗೆ, ಪಾನಕ, ಹೆಸರುಬೇಳೆ, ಕೋಸಂಬರಿ ವಿತರಣೆ ಮಾಡಲಾಯಿತು. ದಾಸೋಹಕ್ಕಾಗಿ ದಾಸೋಹದ ಮಹಾ ಮನೆ, ಬಾಳೆಹೊನ್ನೂರು ಶಾಖ ಮಠ ಮತ್ತು ಇತರ ಸಂಘ ಸಂಸ್ಥೆಗಳು ವ್ಯವಸ್ಥೆ ಮಾಡಿ ಭಕ್ತರ ಮೆಚ್ಚುಗೆಗೆ ಪಾತ್ರರಾದವು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !