ಅಕ್ರಮವಾಗಿ ಹಣ ಸಂಪಾದಿಸಿಲ್ಲ: ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಕಿಡಿ

ಭಾನುವಾರ, ಏಪ್ರಿಲ್ 21, 2019
26 °C

ಅಕ್ರಮವಾಗಿ ಹಣ ಸಂಪಾದಿಸಿಲ್ಲ: ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಕಿಡಿ

Published:
Updated:

ಪಾವಗಡ: ‘ಜೂಜಾಟ, ಅಧಿಕಾರಿಗಳ ವರ್ಗಾವಣೆ ದಂಧೆ, ಗೂಂಡಾಗಿರಿ ಮಾಡಿ ಹಣ ಸಂಪಾದನೆ ಮಾಡಿಲ್ಲ. ನ್ಯಾಯಯುತವಾಗಿ ಸಂಪಾದಿಸಿದ್ದೇನೆ’ ಎಂದು ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಕಿಡಿಕಾರಿದರು.

ಪಟ್ಟಣದ ಕಿಲಾರ್ಲಹಳ್ಳಿಯಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

‘ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ಸಂಪಾದಿಸಿದ ಹಣವನ್ನು ಚುನಾವಣೆಯಲ್ಲಿ ಖರ್ಚು ಮಾಡುತ್ತಿದ್ದಾರೆ’ ಎಂದು ಈಚೆಗೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಸಭೆಯೊಂದರಲ್ಲಿ ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ಅಕ್ರಮಗಳಿಗೆ ಅವಕಾಶ ನೀಡಿ ಹಣ ಸಂಪಾದಿಸಿಲ್ಲ. ದುಡಿದ ಹಣವನ್ನು ಕಾನೂನು ಪ್ರಕಾರ ತೆರಿಗೆ ಪಾವತಿಸಿ ಖರ್ಚು ಮಾಡುತ್ತಿದ್ದೇನೆ ಎಂದರು.

‘ತಾಲ್ಲೂಕಿನ ಹಳ್ಳಿಗಳಲ್ಲಿ ಜನ ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ. ಬಿಂದಿಗೆ ಹಿಡಿದು ನೀರಿಗಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ನದಿ ಮೂಲದಿಂದ ನೀರು ಹರಿಸುವ ಯೋಜನೆಗಳ ಬಗ್ಗೆ ಸಚಿವ ವೆಂಕಟರಮಣಪ್ಪ, ಅಭ್ಯರ್ಥಿ ಚಂದ್ರಪ್ಪ ಕೇವಲ ಜನತೆಯ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ನೀರು ಚಿತ್ರದುರ್ಗ ಜಿಲ್ಲೆಗೆ ಹರಿಸಲಾಗಿದೆ. ಚುನಾವಣೆ ನಂತರ ತಾಲ್ಲೂಕಿಗೆ ಹರಿಸುತ್ತೇವೆ ಎಂಬಿತ್ಯಾದಿ ಸುಳ್ಳು ಹೇಳಿ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ’ ಎಂದು ಆರೋಪಿಸಿದರು.

‘ಜಾತಿ ರಾಜಕಾರಣ ಮಾಡುವುದಿಲ್ಲ, ಎಲ್ಲ ಜನಾಂಗದವರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಕೇಂದ್ರ ಸರ್ಕಾರದ ಸಹಕಾರದಿಂದ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !