ಅಕ್ರಮ ಗಣಿಗಾರಿಕೆಗೆ ಜಿಲ್ಲಾಧಿಕಾರಿ ನಿರ್ಬಂಧ

ಶುಕ್ರವಾರ, ಏಪ್ರಿಲ್ 26, 2019
36 °C
ಬಾಗೇಪಲ್ಲಿ ತಾಲ್ಲೂಕಿನ ಪಿಚ್ಚಲವಾರಪಲ್ಲಿಯ ಸರ್ವೇ ನಂಬರ್ 30ರಲ್ಲಿ ಕಾನೂನುಬಾಹಿರ ಕೆಲಸ, ನಿರಾಕ್ಷೇಪಣಾ ಪತ್ರ ಹಿಂಪಡೆದ ಜಿಲ್ಲಾಧಿಕಾರಿ

ಅಕ್ರಮ ಗಣಿಗಾರಿಕೆಗೆ ಜಿಲ್ಲಾಧಿಕಾರಿ ನಿರ್ಬಂಧ

Published:
Updated:
Prajavani

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಹೋಬಳಿಯ ಪಿಚ್ಚಲವಾರಪಲ್ಲಿಯ ಸರ್ವೇ ನಂಬರ್ 30ರಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಗಣಿಗಾರಿಕೆ ಪತ್ತೆ ಮಾಡಿದ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್ ಅವರು ಗಣಿಗಾರಿಕೆಗೆ ನಿರ್ಬಂಧ ವಿಧಿಸಿ, ಗಣಿಗಾರಿಕೆಗೆ ನೀಡಿದ್ದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಹಿಂಪಡೆದಿದ್ದಾರೆ.

ಪಿಚ್ಚಲವಾರಪಲ್ಲಿಯಲ್ಲಿ ಅಕ್ರಮವಾಗಿ ಗಣಿಕೆಗಾರಿಕೆ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ಬಂದಿತ್ತು. ಆ ದೂರು ಆಧರಿಸಿ ಜಿಲ್ಲಾಧಿಕಾರಿ ಅವರು ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ವ್ಯಾಪಕವಾಗಿ ಅಕ್ರಮ ಗಣಿಕೆಗಾರಿಕೆ ನಡೆಸಿದ್ದು, ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡದ್ದು ಕಂಡುಬಂದಿತ್ತು ಎನ್ನಲಾಗಿದೆ.

ಅದರ ಬೆನ್ನಲ್ಲೇ ಜಿಲ್ಲಾಧಿಕಾರಿ ಅವರು ಕಂದಾಯ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ಜಂಟಿಯಾಗಿ ಡ್ರೋಣ್‌ ಬಳಸಿ ಗಣಿಗಾರಿಕೆ ಸಮೀಕ್ಷೆ ನಡೆಸಿ, ವರದಿ ನೀಡುವಂತೆ ಸೂಚನೆ ನೀಡಿದ್ದರು. ಕಂದಾಯ ಮತ್ತು ಗಣಿ ಇಲಾಖೆ ಅಧಿಕಾರಿಗಳು ಶುಕ್ರವಾರ ಸರ್ವೇ ನಂಬರ್ 30ರಲ್ಲಿ ಶುಕ್ರವಾರ ಜಂಟಿ ಸಮೀಕ್ಷೆ ನಡೆಸಿದ್ದು, ವರದಿ ಸಿದ್ಧಪಡಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಅವರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.

‘ಸರ್ವೇ ನಂಬರ್ 30 ರಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಕೊಂಡಮವಾರಿಪಲ್ಲಿಯ ಬಿ.ವಿ.ಮಂಜುನಾಥ್‌ ಎಂಬುವರು 2015ರ ಜೂನ್ 18 ರಂದು ಮತ್ತು ವೆಂಕಟೇಶಪ್ಪ ಎಂಬುವರು 2015ರ ಜುಲೈ 31 ರಂದು ತಲಾ ಮೂರು ಎಕರೆ ಗಣಿಗಾರಿಕೆ ಗುತ್ತಿಗೆ ಪಡೆದಿದ್ದರು. ಆದರೆ ಇವರು ಕೆಎಂಎಂಸಿ ಕಾಯ್ದೆ ಉಲ್ಲಂಘನೆ ಮಾಡಿ ಗಣಿಗಾರಿಕೆ ನಡೆಸಿರುವ ಬಗ್ಗೆ 2016ರ ಆಗಸ್ಟ್‌ನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವರದಿ ನೀಡಿದ್ದರು’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‘ಪರವಾನಗಿ ಷರತ್ತು ಉಲ್ಲಂಘಿಸಿ ಗಡಿ ಭಾಗದ ಕಲ್ಲು ನಾಶ ಮಾಡಲಾಗಿದೆ. ಸರ್ಕಾರಿ ಗೋಮಾಳಕ್ಕೆ ಸೇರಿದ ಸುಮಾರು 2 ಎಕರೆ 23 ಗುಂಟೆ ಪ್ರದೇಶದಲ್ಲಿ ಗಣಿಗಾರಿಕೆಯ ತ್ಯಾಜ್ಯ ವಸ್ತುಗಳನ್ನು ಸುರಿದು ಪರಿಸರಕ್ಕೆ ಧಕ್ಕೆ ಮಾಡಲಾಗಿದೆ. ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಂಡರೂ ಅವರ ವಿರುದ್ಧ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಭಾರಿ ಮಳೆ ಮತ್ತು ಭೂಕಂಪನಕ್ಕೆ ಬೆಟ್ಟವೇ ಕುಸಿಯುವ ಸ್ಥಿತಿಗೆ ತಲುಪಿದೆ’ ಎಂದು ಉಲ್ಲೇಖಿಸಿದ್ದಾರೆ.

2012ರ ಭೂ ಕಬಳಿಕೆ ನಿಷೇಧ ವಿಧೇಯಕ ಭೂ ಕಂದಾಯ 192 (ಎ) ಸೆಕ್ಷನ್‌ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಜಿಲ್ಲಾಧಿಕಾರಿ ಅವರು ಸರ್ವೇ ನಂಬರ್ 30ರಲ್ಲಿ 144 ಸೆಕ್ಷನ್‌ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !