ನಟರು ಟಾಟಾ ಮಾಡಿ ಹೋದರೆ ಹೊಟ್ಟೆ ತುಂಬಲ್ಲ: ರವೀಂದ್ರ ಶ್ರೀಕಂಠಯ್ಯ

ಗುರುವಾರ , ಏಪ್ರಿಲ್ 25, 2019
21 °C
‘ದಲಿತರ ಚಿತ್ತ ಅಭಿವೃದ್ಧಿಯತ್ತ’ ಕಾರ್ಯಕ್ರಮದಲ್ಲಿ

ನಟರು ಟಾಟಾ ಮಾಡಿ ಹೋದರೆ ಹೊಟ್ಟೆ ತುಂಬಲ್ಲ: ರವೀಂದ್ರ ಶ್ರೀಕಂಠಯ್ಯ

Published:
Updated:
Prajavani

ಶ್ರೀರಂಗಪಟ್ಟಣ: ‘ಸಿನಿಮಾ ನಟರು ಟಾಟಾ ಮಾಡಿ, ಡೈಲಾಗ್ ಹೇಳಿ ಹೋದರೆ ಬಡವರ ಹೊಟ್ಟೆ ತುಂಬುವುದಿಲ್ಲ. ಅವರ ಬಣ್ಣದ ಮಾತಿಗೆ ಮರುಳಾಗಿ ವೋಟು ಹಾಕಿದರೆ ಭವಿಷ್ಯದಲ್ಲಿ ಪಶ್ಚಾತ್ತಾಪಡಬೇಕಾಗುತ್ತದೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನಜಾಗೃತಿ ವೇದಿಕೆ ಏರ್ಪಡಿಸಿದ್ದ ‘ದಲಿತರ ಚಿತ್ತ ಅಭಿವೃದ್ಧಿಯತ್ತ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಿನಿಮಾ ನಟ ಎಲ್ಲೋ ಒಂದು ಕಡೆ ಹಾಲು ಕರೆದರೆ ಅದು ದೊಡ್ಡ ಸುದ್ದಿಯಾಗುತ್ತದೆ. ಎಲ್ಲರ ಮನೆಗೂ ಬಂದು ಅವರು ಹಾಲು ಕರೆಯುವುದಿಲ್ಲ. ನಮ್ಮ ಮನೆಯ ರಾಸುಗಳ ಹಾಲನ್ನು ನಾವೇ ಕರೆಯಬೇಕು. ಮನರಂಜನೆಗೆ ಜನ ಕಾಸು ಕೊಟ್ಟು ಸಿನಿಮಾ ನೋಡುತ್ತಾರೆಯೇ ಹೊರತು ಅವರಿಂದ ಜೀವನ ನಡೆಯುವುದಿಲ್ಲ. ನಮ್ಮ ಜೀವನ ಮಟ್ಟ ಸುಧಾರಿಸಬೇಕಾದರೆ ಸರ್ಕಾರದಿಂದ ಮಾತ್ರ ಸಾಧ್ಯ’ ಎಂದರು.

‘ಸುಮಲತಾ ಅವರು ಇಷ್ಟು ವರ್ಷ ಗಳಲ್ಲಿ ಮಂಡ್ಯ ಜಿಲ್ಲೆಯ ಒಬ್ಬ ಮಹಿಳೆಗೆ ಅನ್ನ ಹಾಕಿದ ಉದಾಹರಣೆ ಇಲ್ಲ. ಅವರ ಮನೆಗೆ ಹೋದವರ ಕಷ್ಟ ಕೇಳಿಲ್ಲ. ಯಾರಿಗಾದರೂ ಅವರು ಒಂದು ಲೋಟ ನೀರು ಕೊಟ್ಟಿರುವುದು ಸಾಬೀತಾದರೆ ಆ ಅದೃಷ್ಟದ ಮಹಿಳೆಯನ್ನು ಕರೆದು ಸನ್ಮಾನ ಮಾಡುತ್ತೇನೆ’ ಎಂದು ವ್ಯಂಗ್ಯವಾಡಿದರು.

'ಚುನಾವಣೆಗೆ ಸ್ಪರ್ಧಿಸಿದ ನಂತರ ಸುಮಲತಾ ಅವರಿಗೆ ಮಂಡ್ಯ ಜಿಲ್ಲೆಯ ಬಗ್ಗೆ ಎಲ್ಲಿಲ್ಲದ ಪ್ರೀತಿ ಬಂದಿದೆ. ಹೋದಲ್ಲೆಲ್ಲ ತಾವು ಮಹಾನ್ ಸ್ವಾಭಿಮಾನಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರ ಮೋಡಿಯ ಮಾತುಗಳನ್ನು ನಂಬುವಷ್ಟು ಜನರು ದಡ್ಡರಲ್ಲ. ಮಂಡ್ಯಕ್ಕೆ ಏನೂ ಕೊಡುಗೆ ನೀಡದ ಸುಮಲತಾ ಸಿನಿಮಾ ನಟರ ಮುಖ ತೋರಿಸಿ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದು, ಅದು ಹುಸಿಯಾಗಲಿದೆ. ಜಿಲ್ಲೆಗೆ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಸಾಕಷ್ಟು ಕೊಡುಗೆ ನೀಡಿದ್ದು, ಮತ್ತಷ್ಟು ಅಭಿವೃದ್ಧಿ ಆಗಬೇಕಾದರೆ ಜನರು ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸಬೇಕು' ಎಂದು ಕೋರಿದರು.

ಜೆಡಿಎಸ್ ಎಸ್‌ಸಿ ಘಟಕದ ರಾಜ್ಯ ಉಪಾಧ್ಯಕ್ಷ ಎಂ.ಬಿ. ಶ್ರೀನಿವಾಸ್, ‘ಕುಮಾರಸ್ವಾಮಿ ಅವರಿಗೆ ದಲಿತರು, ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಕಾಳಜಿ ಇದೆ. ಸುಮಲತಾ ಅವರು ಸಂವಿಧಾನವನ್ನೇ ಬದಲಿಸುವುದಾಗಿ ಹೇಳುವ ಪಕ್ಷದ ಬೆಂಬಲ ಪಡೆದಿರುವುದರಿಂದ ಕ್ಷೇತ್ರದಲ್ಲಿರುವ 3.68 ಲಕ್ಷ ಅಂಬೇಡ್ಕರ್ ವಾದಿಗಳು ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಲಿದ್ದಾರೆ’ ಎಂದರು.

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನ ಜಾಗೃತಿ ವೇದಿಕೆಯ ಸಂಚಾಲಕ ಮಹದೇವಪುರ ಮಹದೇವಸ್ವಾಮಿ, ‘ಬಿಜೆಪಿ ಅಧಿಕಾರಕ್ಕೆ ಬಂದರೆ ಅಂಬೇಡ್ಕರ್ ಪ್ರತಿಮೆಗಳನ್ನು ತೆರವುಗೊಳಿಸುತ್ತೇವೆ ಎಂದು ಬೆಂಗಳೂರಿನ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದ್ದಾರೆ. ಅಂತಹ ಪಕ್ಷದ ಬೆಂಬಲ ಪಡೆದಿರುವ ಸುಮಲತಾ ಅವರಿಗೆ ಮತ ಹಾಕಬೇಕಾ’ ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಕಾವ್ಯಾ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಸಂತೋಷ್, ಕ್ಷೇತ್ರ ಘಟಕದ ಅಧ್ಯಕ್ಷ ಮುಕುಂದ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಮಕೃಷ್ಣ, ಭಾರತಿ ನಾಗರಾಜು, ಶಿವಬೋರಯ್ಯ, ಮಾಜಿ ಅಧ್ಯಕ್ಷ ಬಿ.ಎಚ್. ಮಹದೇವಸ್ವಾಮಿ, ಪುಟ್ಟಸ್ವಾಮಿ, ರಾಜೇಶ್ವರಿ ನಂದೀಶ್‌ ಕುಮಾರ್, ಜೆಡಿಎಸ್ ಎಸ್‌ಸಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಜಯರಾಂ, ಯತಿರಾಜ್, ಎಪಿಎಂಸಿ ನಿರ್ದೇಶಕ ನಾಗರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !