ಹಾರ, ತುರಾಯಿ ಭರಾಟೆ: ಗಗನಕ್ಕೇರಿದ ಹೂವಿನ ಬೆಲೆ

ಶುಕ್ರವಾರ, ಏಪ್ರಿಲ್ 26, 2019
33 °C
ಲೋಕಸಭಾ ಚುನಾವಣೆ: ಸ್ಪರ್ಧೆಗೆ ಬಿದ್ದವರಂತೆ ಹೂವಿನ ಮಳೆ ಸುರಿಸುತ್ತಿರುವ ಕಾರ್ಯಕರ್ತರು

ಹಾರ, ತುರಾಯಿ ಭರಾಟೆ: ಗಗನಕ್ಕೇರಿದ ಹೂವಿನ ಬೆಲೆ

Published:
Updated:
Prajavani

ಮಂಡ್ಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹಾರ, ತುರಾಯಿಗಳ ಆರ್ಭಟ ಜೋರಾಗಿದೆ. ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷದ ಮುಖಂಡರಿಗೆ ಪೈಪೋಟಿ ಮೇಲೆ ಕ್ರೇನ್‌ ಮೂಲಕ ಹಾರ ಹಾಕುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಕ್ಷೇತ್ರದಾದ್ಯಂತ ಲಕ್ಷಾಂತರ ರೂಪಾಯಿ ಮೌಲ್ಯದ ಹಾರ ಹಾಕುವ ಸಂಪ್ರದಾಯ ಆರಂಭವಾಯಿತು. ಕೆಪಿಸಿಸಿ ಸದಸ್ಯರಾಗಿದ್ದ ಸಚ್ಚಿದಾನಂದ ತಮ್ಮ ನಾಯಕ ಡಿ.ಕೆ.ಶಿವಕುಮಾರ್‌ ಅವರಿಗೆ 250 ಕೆ.ಜಿ ಸೇಬು, 100 ಕೆ.ಜಿ ಗುಲಾಬಿ ಹೂವಿನಿಂದ ತಯಾರಿಸಿದ ಹಾರ ಹಾಕಿದ್ದರು.

ನಂತರದ ದಿನಗಳಲ್ಲಿ ಬೃಹತ್‌ ಹಾರ ಹಾಕುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಈಗ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕ್ರೇನ್‌ ಮೂಲಕ ಹಾರ ಹಾಕುವುದು, ನಾಯಕರ ತಲೆಯ ಮೇಲೆ ಹೂವಿನ ಮಳೆ ಸುರಿಸುವುದು ಫ್ಯಾಷನ್‌ ರೂಪ ಪಡೆದುಕೊಂಡಿದೆ. ಸೇವಂತಿಗೆ, ಗುಲಾಬಿ, ಮಲ್ಲಿಗೆ, ಸುಗಂಧರಾಜ ಹೂವಿಗೆ ಬೇಡಿಕೆ ಸೃಷ್ಟಿಯಾಗಿದೆ.

ಕೆ.ಜಿ ₹ 60ಕ್ಕೆ ಮಾರಾಟವಾಗುತ್ತಿದ್ದ ಸುಗಂಧರಾಜ ಹೂವಿನ ಬೆಲೆ ತಿಂಗಳಿಂದೀಚೆಗೆ ₹ 250ಕ್ಕೆ ಹೆಚ್ಚಾಗಿದೆ. ₹ 200ಕ್ಕೆ ಸಿಗುತ್ತಿದ್ದ ಬಿಡಿ ಮಲ್ಲಿಗೆ ಹೂವಿನ ಬೆಲೆ ₹ 500ಕ್ಕೇರಿದೆ. ಗುಲಾಬಿ ₹ 200ರಿಂದ 400ಕ್ಕೆ, ಸೇವಂತಿಗೆ ₹ 450ಕ್ಕೆ ಹೆಚ್ಚಳವಾಗಿದೆ. ಸೇವಂತಿಗೆ ಹೂವಿನ ದಳಗಳನ್ನು ಬಿಡಿಸಿ ನಾಯಕರ ಮೇಲೆ ಚೆಲ್ಲಲು ಬಳಸಲಾಗುತ್ತಿದೆ. ಕೆಆರ್‌ಎಸ್‌ ನೀರು ಹರಿಯುವ ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ ತಾಲ್ಲೂಕಿನ ರೈತರು ಹೇರಳವಾಗಿ ಹೂವು ಬೆಳೆಯುತ್ತಾರೆ. ಈ ಭಾಗದ ಹೂವು ಸಾಕಾಗದೆ ರಾಮನಗರ, ಹಾಸನ ಭಾಗದಿಂದಲೂ ತರಿಸಿಕೊಳ್ಳಲಾಗುತ್ತಿದೆ.

₹ 3 ಲಕ್ಷ ಮೌಲ್ಯದ ಹಾರ:

ಜೆಡಿಎಸ್‌ ಮುಖಂಡರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ₹ 3 ಲಕ್ಷ ಮೌಲ್ಯದ ಹಾರ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಏ. 10ರಂದು ಕೆಆರ್‌ಎಸ್‌ನಲ್ಲಿ ಪುತ್ರ ಕೆ.ನಿಖಿಲ್‌ ಪರ ಮತಬೇಟೆ ಆರಂಭಿಸಿದ ಸಮಯದಲ್ಲಿ ₹ 220 ಕೆ.ಜಿ ಒಣದ್ರಾಕ್ಷಿ, 200 ಕೆ.ಜಿ ಹೂವಿನಿಂದ ರೂಪಿಸಿದ ಹಾರ ಹಾಕಲಾಗಿತ್ತು. ಜೊತೆಗೆ ಸುತ್ತಲೂ ನಾಲ್ಕು ಜೆಸಿಬಿಗಳ ಮೂಲಕ ವಿವಿಧ ಬಗೆಯ ಹೂವಿನ ಮಳೆ ಸುರಿಸಿದ್ದರು. ಮುಖ್ಯಮಂತ್ರಿಗೆ ಮಾತ್ರವಲ್ಲದೇ ಕ್ಷೇತ್ರಕ್ಕೆ ಬಂದ ಸಿದ್ದರಾಮಯ್ಯ, ಎಚ್‌.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್‌ ಮುಂತಾದ ನಾಯಕರಿಗೂ ದುಬಾರಿ ಮೌಲ್ಯದ ಹಾರ ಹಾಕಿದ್ದಾರೆ.

ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಹೋದಲ್ಲೆಲ್ಲಾ ವಿವಿಧ ಫಲಪುಷ್ಪಗಳಿಂದ ತಯಾರಿಸಿದ ಹಾರ ಹಾಕುವುದು ಸಾಮಾನ್ಯವಾಗಿದೆ. ಹಳ್ಳಿಗಳಲ್ಲೂ ಜನರು ಹೂವಿನ ಮಳೆ ಸುರಿಸುತ್ತಿದ್ದಾರೆ. ಜೋಡೆತ್ತು ಎಂದೇ ಪ್ರಸಿದ್ಧಿ ಪಡೆದಿರುವ ನಟರಾದ ಯಶ್‌– ದರ್ಶನ್‌ಗೂ ಜೆಸಿಬಿ ಮೂಲಕ ಹಾರ ಹಾಕುತ್ತಿದ್ದಾರೆ.

‘ಈ ಬಾರಿ ಕೆಆರ್‌ಎಸ್‌ನಲ್ಲಿ ನೀರು ತುಂಬಿರುವ ಕಾರಣ ಉತ್ತಮ ಗುಣಮಟ್ಟದ ಹೂವಿನ ಫಸಲು ಬಂದಿದೆ. ಬೆಳೆ ಹೆಚ್ಚಾಗಿ, ಬೆಲೆ ಕುಸಿದಾಗ ಮಾರಾಟವಾಗದ ಹೂವನ್ನು ರಸ್ತೆಗೆ ಸುರಿಯುತ್ತಿದ್ದೆವು. ಆದರೆ ಈ ಬಾರಿ ಎಲೆಕ್ಷನ್‌ ಇರುವುದರಿಂದ ಮನೆ ಬಾಗಿಲಿಗೇ ಬಂದು ಹೂವು ಕೊಳ್ಳುತ್ತಿದ್ದಾರೆ’ ಎಂದು ಹೂವು ಬೆಳೆಯುವವರ ಊರು ಎಂದೇ ಪ್ರಸಿದ್ಧಿ ಪಡೆದಿರುವ, ಪಾಂಡವಪುರ ತಾಲ್ಲೂಕಿನ ಮೇನಾಗರ ಗ್ರಾಮದ ಹೂ ಬೆಳೆಗಾರ ಕಾಳೇಗೌಡ ಹೇಳಿದರು.

15 ದಿನ ಕೆಲಸ: ‘ಮುಖ್ಯಮಂತ್ರಿಗೆ ಹಾಕಿದ ಒಣದ್ರಾಕ್ಷಿ ಹಾರ ತಯಾರಿಸಲು 15 ದಿನ ಹಿಡಿಯಿತು. ₹ 1 ಲಕ್ಷ ಮೌಲ್ಯದ ಒಣದ್ರಾಕ್ಷಿ ಬಳಸಲಾಯಿತು. ಕೆಲಸ ಮಾಡಿದ ಹುಡುಗರ ಕೂಲಿಗೆ ₹ 75 ಸಾವಿರ ಖರ್ಚಾಯಿತು. ಹೂವು ಎಲ್ಲಾ ಸೇರಿ ₹ 3 ಲಕ್ಷ ಹಣ ಖರ್ಚಾಯಿತು’ ಎಂದು ಮೈಸೂರಿನ ಫ್ಲವರ್‌ ಡೆಕೊರೇಟರ್‌ ಬಿ.ಧನರಾಜ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !