ಸೈನಿಕರಿಗೆ ಅಪಮಾನ ಮಾಡಿಲ್ಲ, ಅಸತ್ಯ ಹೇಳಿಲ್ಲ: ಎಚ್‌.ಡಿ.ಕುಮಾರಸ್ವಾಮಿ ಸಮರ್ಥನೆ

ಶುಕ್ರವಾರ, ಏಪ್ರಿಲ್ 19, 2019
22 °C

ಸೈನಿಕರಿಗೆ ಅಪಮಾನ ಮಾಡಿಲ್ಲ, ಅಸತ್ಯ ಹೇಳಿಲ್ಲ: ಎಚ್‌.ಡಿ.ಕುಮಾರಸ್ವಾಮಿ ಸಮರ್ಥನೆ

Published:
Updated:
Prajavani

ಮಂಡ್ಯ: ‘ನಾನು ಸೈನಿಕರಿಗೆ ಅಪಮಾನ ಮಾಡಿಲ್ಲ, ಅಸತ್ಯವನ್ನೂ ಹೇಳಿಲ್ಲ. ಗುಡಿಗೆರೆ ಗ್ರಾಮದ ಹುತಾತ್ಮ ಯೋಧ ಎಚ್‌.ಗುರು ಕುಟುಂಬದ ಸ್ಥಿತಿ ನೋಡಿಯೇ ಹೇಳಿಕೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶನಿವಾರ ಹೇಳಿದರು.

ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ ಕೆ.ನಿಖಿಲ್‌ ಪರ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಬಡವರ ಮಕ್ಕಳ ಜೊತೆ ಚೆಲ್ಲಾಟ ಆಡಬೇಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ, ಶ್ರೀಮಂತರ ಮಕ್ಕಳು ಸೈನ್ಯಕ್ಕೆ ಸೇರುತ್ತಾರಾ. ಎಚ್‌.ಗುರು ಪತ್ನಿಗೆ ಉದ್ಯೋಗ ಕೊಟ್ಟಿದ್ದು ನಾನು, ಮೋದಿಯಲ್ಲ. ನಾನು ಇರುವುದೇ ಬಡವರ ಜೊತೆ. ಚಿನ್ನದ ಚಮಚ ಹಿಡಿದವರ ಜೊತೆ ನಾನು ಇಲ್ಲ’ ಎಂದು ಹೇಳಿದರು.

ಮತ್ತೆ ಯಶಸ್ವಿನಿ ಯೋಜನೆ ಜಾರಿ:
‘ನೀತಿ ಸಂಹಿತೆ ಇರುವ ಕಾರಣ ಸಾಲ ಮನ್ನಾ ಹಣ ಬಿಡುಗಡೆ ಆಗಿಲ್ಲ. ಮಹಿಳೆಯರ ಒಡವೆ ಹರಾಜಾಗದಂತೆ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಯಶಸ್ವಿನಿ ಯೋಜನೆಯನ್ನು ನಾನು ನಿಲ್ಲಿಸಿಲ್ಲ, ಹಿಂದಿನ ಸರ್ಕಾರ ನಿಲ್ಲಿಸಿದೆ. ಮುಂದೆ ಅದನ್ನು ಮತ್ತೆ ಜಾರಿಗೆ ತರುತ್ತೇನೆ. ಹೇಮಾವತಿ, ಯಗಚಿ ಜಲಾಶಯ ನಿರ್ಮಾಣಕ್ಕೆ ದೇವೇಗೌಡರು ಕಾರಣ. ಕಾವೇರಿ ನೀರಿಗಾಗಿ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಅದರ ಫಲವಾಗಿ ಎರಡು ಬೆಳೆ ಭತ್ತ ಬೆಳೆಯಲು ಸಾಧ್ಯವಾಗಿದೆ’ ಎಂದರು.

ಮತ್ತೆ ತಮ್ಮ ಆರೋಗ್ಯ ಸಮಸ್ಯೆ ಎತ್ತಿ ಮತಯಾಚನೆ ಮಾಡಿದ ಅವರು ‘ನನ್ನ ಆರೋಗ್ಯದಲ್ಲಿ ಸಮಸ್ಯೆ ಇರುವ ಕಾರಣ ನಿಖಿಲ್‌ ಸ್ಪರ್ಧೆ ಮಾಡಿದ್ದಾನೆ. ನನ್ನ ಕೆಲಸ ಕಡಿಮೆ ಮಾಡಲು ಇಲ್ಲಿಯ ಶಾಸಕರೆಲ್ಲರೂ ತೀರ್ಮಾನಿಸಿದ್ದಾರೆ. ನಿಖಿಲ್‌ ನನ್ನ ಮಗ ಅಲ್ಲ, ಇನ್ನು ಮುಂದೆ ನಿಮ್ಮ ಮಗ. ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ಪಕ್ಷೇತರ ಅಭ್ಯರ್ಥಿ ಇವತ್ತು ಬಂದು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ, ಸ್ವಾಭಿಮಾನ ಎನ್ನುತ್ತಾರೆ. ನಾವೇನೂ ಮಂಡ್ಯ ಸ್ವಾಭಿಮಾನ ಎತ್ತಿ ಹಿಡಿಯುವ ಕೆಲಸ ಮಾಡಿಲ್ಲವೇ’ ಎಂದು ಪ್ರಶ್ನಿಸಿದರು.

ಹೆಸರು ಹೇಳಲ್ಲ: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿ ‘ನಾನು ಪಕ್ಷೇತರ ಅಭ್ಯರ್ಥಿಯ ಹೆಸರು ಹೇಳುವುದಿಲ್ಲ. ಅವರು ಅಂಬರೀಷ್‌ ಅರ್ಧಕ್ಕೆ ನಿಲ್ಲಿಸಿದ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಅವರು ಮಾಡುವುದು ಏನನ್ನು, ಅವರಿಗೆ ಏನು ಗೊತ್ತಿದೆ, ಕಾವೇರಿ ಬಗ್ಗೆ ಅವರಿಗೆ ಏನು ಗೊತ್ತಿದೆ, ನೀರಾವರಿ ಯೋಜನೆಗಳ ಬಗ್ಗೆ ಏನು ಮಾಹಿತಿ ಇದೆ’ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅಭಿಮಾನಿಗಳು ಚುನಾವಣಾ ಖರ್ಚಿಗಾಗಿ ₹ 3 ಲಕ್ಷ ದೇಣಿಗೆ ನೀಡಿದರು. ನಿಖಿಲ್‌ ಪರ ತಾತಾ, ತಂದೆ ಸೇರಿ ಅನಿತಾ ಕುಮಾರಸ್ವಾಮಿಯೂ ಪ್ರಚಾರ ನಡೆಸಿದರು. ಅನಿತಾ ಶ್ರೀರಂಗಪಟ್ಟಣದಲ್ಲಿ ಪ್ರಚಾರ ನಡೆಸಿದರೆ, ನಿಖಿಲ್‌ ನಾಗಮಂಗಲದಲ್ಲಿ ರೋಡ್‌ ಷೋ ನಡೆಸಿದರು.

‘ಅಮೆರಿಕ ಕಮಾಂಡೋ ಭದ್ರತೆ ಪಡೆಯಲಿ’
ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ತಮ್ಮ ಭದ್ರತೆ ಕುರಿತು ಆತಂಕ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಎಚ್‌.ಡಿ.ಕುಮಾರಸ್ವಾಮಿ, ‘ಭದ್ರತೆಗೆ ಸಿಆರ್‌ಪಿಎಫ್‌ ಯೋಧರು ಬೇಡ ಎಂದರೆ, ಅಮೆರಿಕ ಅಧ್ಯಕ್ಷ ಟ್ರಂಪ್‌ ಜೊತೆ ಮಾತನಾಡಿ ಅಲ್ಲಿನ ಕಮಾಂಡೋಗಳಿಂದ ಭದ್ರತೆ ಪಡೆಯಲಿ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಲಿ’ ಎಂದು ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 18

  Angry

Comments:

0 comments

Write the first review for this !