ಅಡಿಯ ಮುಂದಿಡಲು ‘ಮಾರ್ಗ’ ಎಲ್ಲಿದೆ?

ಶುಕ್ರವಾರ, ಏಪ್ರಿಲ್ 26, 2019
21 °C

ಅಡಿಯ ಮುಂದಿಡಲು ‘ಮಾರ್ಗ’ ಎಲ್ಲಿದೆ?

Published:
Updated:

ಮಂಗಳೂರು: ಅಡಿಯ ಮುಂದಿಟ್ಟರೆ ಕೊರಕಲು ಗುಂಡಿ, ಮುರಿದು ಬಿದ್ದ ಚರಂಡಿಯ ಸ್ಲ್ಯಾಬ್‌, ರಾಶಿಗಟ್ಟಲೆ ತ್ಯಾಜ್ಯ ಇಲ್ಲವೇ ವಾಣಿಜ್ಯ ಮಳಿಗೆಯವರು ಆಕ್ರಮಣ ಮಾಡಿ ಇರಿಸಿರುವ ಸಾಮಾನು ಸರಂಜಾಮು. ಇಷ್ಟೆಲ್ಲ ಅಡತಡೆಗಳ ನಡುವೆ ಮುಂದಕ್ಕೆ ಹೆಜ್ಜೆ ಇರಿಸಲಾಗದೇ ತುಸು ಕೆಳಕ್ಕೆ ಇಳಿಯುವ ಪ್ರಯತ್ನ ಮಾಡಿದರೆ ವೇಗದ ವಾಹನಗಳ ನಡುವೆ ಪ್ರಾಣಕ್ಕೆ ಖಾತರಿಯೇ ಇಲ್ಲ!

ಇದು ದೇಶದ 100 ಸ್ಮಾರ್ಟ್‌ ಸಿಟಿಗಳಲ್ಲಿ ಒಂದಾಗಲಿರುವ ಮಂಗಳೂರು ಮಹಾನಗರದ ಪಾದಚಾರಿಗಳ ಸ್ಥಿತಿ. ವರ್ಷವೂ ರಸ್ತೆಗಳ ನಿರ್ಮಾಣ, ಅಭಿವೃದ್ಧಿ ಮತ್ತು ವಿಸ್ತರಣೆಗೆ ನೂರಾರು ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ರಸ್ತೆಗೆ ಡಾಂಬರು ಹಾಕುವುದು, ಕಾಂಕ್ರೀಟ್‌ ರಸ್ತೆಗಳ ನಿರ್ಮಾಣದ ಭರದಿಂದಲೇ ನಡೆಯುತ್ತಿದೆ. ಇವೆಲ್ಲವೂ ವಾಹನ ಸವಾರರ ಅಗತ್ಯಗಳನ್ನು ಪೂರೈಸುತ್ತಿವೆ. ಮಾಲಿನ್ಯರಹಿತ ಸಂಚಾರದತ್ತ ಮುಖ ಮಾಡಿದ ನಾಗರಿಕರು ನೆಮ್ಮದಿಯಿಂದ ತುಸು ದೂರ ಸಾಗಲು ಉತ್ತಮವಾದ ಪಾದಚಾರಿ ಮಾರ್ಗಗಳನ್ನು ನಗರದೊಳಗೆ ದುರ್ಬೀನು ಹಾಕಿ ಹುಡುಕಬೇಕಾದ ಸ್ಥಿತಿ ಇದೆ.

132.45 ಚದರ ಕಿಲೋಮೀಟರ್‌ ವಿಸ್ತಾರ ಹೊಂದಿರುವ ಮಂಗಳೂರು ಮಹಾನಗರ ಪಾಲಿಕೆ ವ್ತಾಪ್ತಿಯಲ್ಲಿ 1,198 ಕಿಲೋಮೀಟರ್‌ ಉದ್ದದ ರಸ್ತೆಗಳಿವೆ. ಇವುಗಳಲ್ಲಿ 973 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆಗಳಿವೆ. 193 ಕಿ.ಮೀ. ಉದ್ದದ ಡಾಂಬರು ರಸ್ತೆಗಳಿವೆ. 32 ಕಿ.ಮೀ. ಕಚ್ಚಾ ಮಣ್ಣಿನ ರಸ್ತೆಗಳಿವೆ. ವಾಹನಗಳ ಓಡಾಟದ ಅನುಕೂಲಕ್ಕಾಗಿ ನಗರದ ಹಲವು ಕಡೆಗಳಲ್ಲಿ ವಿಸ್ತಾರವಾದ ಮತ್ತು ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ, ಈ ಪೈಕಿ ಮುಕ್ಕಾಲು ಪಾಲಿಗೂ ಹೆಚ್ಚು ಉದ್ದದಲ್ಲಿ ಪಾದಚಾರಿಗಳು ತ್ರಾಸವಿಲ್ಲದೇ ಹೆಜ್ಜೆಹಾಕಲು ಸಾಧ್ಯವಾಗುವಂತಹ ಪಾದಚಾರಿ ಮಾರ್ಗಗಳಿಲ್ಲ.

ಹೆಚ್ಚು ವಾಣಿಜ್ಯ ಚಟುವಟಿಕೆಗಳು ನಡೆಯುವ ಹಳೆ ಬಂದರು ಪ್ರದೇಶ, ಪಾಂಡೇಶ್ವರ, ಕೆ.ಎಸ್‌.ರಾವ್‌ ರಸ್ತೆ, ಕೊಡಿಯಾಲ್‌ಬೈಲ್‌, ಬಳ್ಳಾಲ್‌ ಭಾಗ್‌, ಪಾಲಿಕೆಯ ಕೇಂದ್ರ ಕಚೇರಿ ಇರುವ ಲಾಲ್‌ಭಾಗ್‌, ಲೇಡಿಹಿಲ್‌, ಕೊಟ್ಟಾರ, ಉರ್ವ, ಕಂಕನಾಡಿ ಸೇರಿದಂತೆ ನಗರದ ಯಾವ ಭಾಗದಲ್ಲೂ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿರುವ ಪಾದಚಾರಿ ಮಾರ್ಗಗಳು ಕಾಣಿಸುವುದಿಲ್ಲ. ಸುರತ್ಕಲ್‌, ಬೈಕಂಪಾಡಿ, ಕುಲಶೇಖರ, ಕಣ್ಣೂರು, ಅಡ್ಯಾರ್‌ ಸೇರಿದಂತೆ ನಗರದ ಹೊರವಲಯದ ಪ್ರದೇಶಗಳಲ್ಲಿ ಪಾದಚಾರಿಗಳಿಗೆ ಸುಸಜ್ಜಿತವಾದ ಪ್ರತ್ಯೇಕ ಮಾರ್ಗವೊಂದನ್ನು ನಿರೀಕ್ಷಿಸುವುದು ಕನಸಿನ ಮಾತಾದೀತು ಎಂಬ ಸ್ಥಿತಿ ಇದೆ.

ಮಹಾನಗರ ಪಾಲಿಕೆಯ ಅಧಿಕಾರಿಗಳೇ ಖಚಿತಪಡಿಸುವ ಪ್ರಕಾರ, ನಗರದ ವ್ಯಾಪ್ತಿಯಲ್ಲಿರುವ ರಸ್ತೆಗಳ ಒಟ್ಟು ಉದ್ದದ ಶೇಕಡ 80ರಷ್ಟು ಪಾದಚಾರಿ ಮಾರ್ಗಗಳೇ ಇಲ್ಲ. ಶೇಕಡ 20ರಷ್ಟು ಪಾದಚಾರಿ ಮಾರ್ಗಗಳಿದ್ದರೂ, ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗ ಸುಸ್ಥಿತಿಯಲ್ಲಿ ಇಲ್ಲ. ಇಂಡಿಯನ್‌ ರೋಡ್‌ ಕಾಂಗ್ರೆಸ್‌ ಅಥವಾ ನಗರ ಯೋಜನಾ ಸಂಸ್ಥೆಗಳ ಮಾನದಂಡದ ಪ್ರಕಾರ ರೂಪಿಸಿದ ಸುಸಜ್ಜಿತವಾದ ಪಾದಚಾರಿ ಮಾರ್ಗಗಳನ್ನು ಗುರುತಿಸಿ, ಹೇಳುವುದೂ ಕಷ್ಟವಂತೆ.

‘ನಿತ್ಯ ಬೆಳಗ್ಗಿನ ಜಾವ ಕಾಲ್ನಡಿಗೆಯಲ್ಲೇ ಬಂದರು ದಕ್ಕೆಗೆ ಹೋಗುತ್ತೇನೆ. ಅಲ್ಲಿ ಮೀನು ಖರೀದಿಸಿ, ಬುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡೇ ನಗರ ತಿರುಗುತ್ತೇನೆ. ಬಂದರಿನಿಂದ ಲೋಯರ್‌ ಬೆಂದೂರು ತಲುಪುವುದೇ ಸಾಹಸದ ಕೆಲಸವಾಗುತ್ತದೆ. ಈ ಮಾರ್ಗದ ಬಹುತೇಕ ಕಡೆಗಳಲ್ಲಿ ಕಾಲ್ನಡಿಗೆಯಲ್ಲಿ ಬರುವವರಿಗೆ ಸರಿಯಾದ ಮಾರ್ಗವೇ ಇಲ್ಲ. ತಲೆಯ ಮೇಲಿನ ಬುಟ್ಟಿಯನ್ನು ಬ್ಯಾಲೆನ್ಸ್‌ ಮಾಡಿಕೊಳ್ಳುತ್ತಾ ತಗ್ಗು, ದಿಣ್ಣೆಗಳನ್ನು ದಾಟಿಕೊಂಡೇ ಬರಬೇಕು. ಕೆಲವೆಡೆ ರಸ್ತೆ ಇಳಿದು ಮತ್ತೆ ಮೇಲಕ್ಕೆ ಹತ್ತಿ ಬರಬೇಕು. ಈ ವೇಳೆ ತುಸು ವ್ಯತ್ಯಾಸವಾದರೂ ಅಪಘಾತಕ್ಕೀಡಾಗುವ ಸಾಧ್ಯತೆ ಇರುತ್ತದೆ’ ಎನ್ನುತ್ತಾರೆ ಕಾಲ್ನನಡಿಗೆಯ ಮೂಲಕವೇ ಮೀನು ಮಾರಿ ಜೀವನ ಸಾಗಿಸುವ ಹಸನಬ್ಬ.

‘ಇಡೀ ನಗರದಲ್ಲಿ ವಾಹನಗಳ ಸಂಚಾರಕ್ಕೆ ಸೀಮಿತವಾಗಿ ರಸ್ತೆಗಳನ್ನು ನಿರ್ಮಿಸಲಾಗಿದೆ. ನನ್ನಂತೆ ನಡೆದುಹೋಗುವ ಸಾವಿರಾರು ಮಂದಿಯನ್ನು ಈ ವ್ಯವಸ್ಥೆ ಲೆಕ್ಕಕ್ಕೆ ಇರಿಸಿಕೊಂಡಿಲ್ಲ. ಇರುವ ಪಾದಚಾರಿ ಮಾರ್ಗಗಳಲ್ಲಿ ಹತ್ತು ಅಡಿಗಳಷ್ಟು ದೂರವನ್ನೂ ನಿರಾಯಾಸವಾಗಿ ಕ್ರಮಿಸುವ ಸ್ಥಿತಿ ಇಲ್ಲ. ರಸ್ತೆಗೆ ಇಳಿದರೆ ವಾಹನಗಳಿಗೆ ಸಿಲುಕುತ್ತೇವೆ. ಯಾರ ಬಳಿ ನಮ್ಮ ಗೋಳು ಹೇಳಿಕೊಳ್ಳಬೇಕು’ ಎಂದು ಅವರು ಪ್ರಶ್ನಿಸುತ್ತಾರೆ.

ಕೈ ಹಿಡಿದು ಬರಬೇಕಿದೆ: ಮಂಗಳೂರು ನಗರ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಸರಾದ ನೆಲ. ಹತ್ತಾರು ಸಾವಿರ ವಿದ್ಯಾರ್ಥಿಗಳು ನಿತ್ಯವೂ ಶಾಲೆ, ಕಾಲೇಜುಗಳಿಗೆ ಹೋಗಿ ಬರುತ್ತಾರೆ. ಎಳೆಯ ಮಕ್ಕಳನ್ನು ಶಾಲೆಗೆ ಕಳುಹಿಸುವವರು ನಗರದಲ್ಲಿನ ಪಾದಚಾರಿ ಮಾರ್ಗಗಳ ದುಸ್ಥಿತಿಯ ಕಾರಣಕ್ಕಾಗಿಯೇ ಜೀವ ಕೈಯಲ್ಲಿ ಹಿಡಿದು ಕಾಯಬೇಕಾದಂತಹ ಪರಿಸ್ಥಿತಿ ಇದೆ.

‘ನನ್ನ ಇಬ್ಬರು ಮಕ್ಕಳು ಶಾಲೆಗೆ ಹೋಗಿ ಬರುತ್ತಾರೆ. ವಾಹನಗಳಲ್ಲಿ ಕಳಿಸುವ ಶಕ್ತಿ ನಮಗೆ ಇಲ್ಲ. ನಡೆದುಕೊಂಡೇ ಹೋಗಿ ಬರುತ್ತಾರೆ. ರಸ್ತೆಯ ಬದಿಯಲ್ಲಿ ನಡೆದು ಹೋಗುವುದಕ್ಕೂ ಜಾಗವಿಲ್ಲ. ತುಸು ಎಚ್ಚರ ತಪ್ಪಿದರೆ ಅಪಾಯ ಖಚಿತ. ಹೀಗಾಗಿ ಮಕ್ಕಳನ್ನು ಶಾಲೆಗೆ ಕರೆದೊಯ್ದು, ವಾಪಸು ಕರೆತರಬೇಕು. ಇದಕ್ಕಾಗಿ ನಾನು ಕೆಲಸದ ನಡುವೆಯೇ ಸಮಯ ಹೊಂದಿಸಿಕೊಳ್ಳಬೇಕಿದೆ. ಪಾದಚಾರಿ ಮಾರ್ಗದಲ್ಲಿ ಹೊಂಡ, ಕೊರಕಲುಗಳನ್ನು ಕಂಡರೆ ಭಯವಾಗುತ್ತದೆ’ ಎನ್ನುತ್ತಾರೆ ಗದಗ ಜಿಲ್ಲೆಯಿಂದ ಕೆಲಸ ಅರಸಿಕೊಂಡು ಬಂದು ನಗರದಲ್ಲಿ ನೆಲೆಸಿರುವ ಮಾಲತಿ.

ನಿಯಮಗಳಿಗೆ ಬೆಲೆ ಇಲ್ಲ: ಸ್ವೀಡನ್‌, ಸಿಂಗಾಪುರ, ಸ್ವಿಟ್ಜರ್ಲೆಂಡ್‌, ಜಪಾನ್‌, ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ರಾಷ್ಟ್ರಗಳು ವಾಹನಗಳ ಸುಗಮ ಸಂಚಾರಕ್ಕೆ ನೀಡುವುದಕ್ಕಿಂತಲೂ ಹೆಚ್ಚಿನ ಆದ್ಯತೆಯನ್ನು ಪಾದಚಾರಿಗಳಿಗೆ ನೀಡುತ್ತಿವೆ. ಪಾದಚಾರಿಗಳ ಹಕ್ಕುಗಳ ರಕ್ಷಣೆಗಾಗಿಯೇ ಇಲ್ಲಿ ಪ್ರತ್ಯೇಕ ಕಾನೂನುಗಳಿವೆ. ಅಲ್ಲಿ ಅತ್ಯಂತ ಸುಸಜ್ಜಿತ ಮತ್ತು ಪಾದಚಾರಿ ಸ್ನೇಹಿ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಪಾದಚಾರಿಗಳಿಗೆ ಕೊಂಚ ತೊಂದರೆ ಆದರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಭಾರತದಲ್ಲೂ ಇಂತಹ ನಿಯಮಗಳಿವೆ. ಪಾದಚಾರಿ ಮಾರ್ಗಗಳು ಹೇಗೆ ಇರಬೇಕು ಎಂಬುದನ್ನು ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ಮಾರ್ಗಸೂಚಿಗಳು ಸ್ಪಷ್ಟವಾಗಿ ಹೇಳುತ್ತವೆ. ಕರ್ನಾಟಕ ನಗರ ಸಾರಿಗೆ ಪ್ರಾಧಿಕಾರ ಕೂಡ ಇಂತಹ ನೀತಿಯೊಂದನ್ನು ಜಾರಿಗೊಳಿಸಿದೆ. ಆದರೆ, ಎಲ್ಲವೂ ಕಾಗದದ ಮೇಲೆಯೇ ಉಳಿದಿವೆ. ಬೆಂಗಳೂರು, ಪುಣೆ, ಮುಂಬೈ ಸೇರಿದಂತೆ ಭಾರತದ ಕೆಲವು ಮಹಾನಗರಗಳಲ್ಲಿ ಇತ್ತೀಚೆಗೆ ಪಾದಚಾರಿಗಳಿಗೆ ಆದ್ಯತೆ ನೀಡುವ ಮಾದರಿಯ ರಸ್ತೆಗಳ ನಿರ್ಮಾಣ ಆರಂಭವಾಗಿದೆ. ಆದರೆ, ಮಂಗಳೂರಿನಲ್ಲಿ ಅದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಮಂಗಳೂರು ನಗರ ಈಗ ಸ್ಮಾರ್ಟ್‌ ಸಿಟಿ ಯೋಜನೆಯ ವ್ಯಾಪ್ತಿಯಲ್ಲಿದೆ. ಅಮೃತ್‌ ಯೋಜನೆಯ ಅನುದಾನವೂ ಬರುತ್ತಿದೆ. ಮುಖ್ಯಮಂತ್ರಿಗಳ ನಗರೋತ್ಥಾನ, ರಾಜ್ಯ ಹಣಕಾಸು ಆಯೋಗದ ಅನುದಾನ, ಪಾಲಿಕೆಯ ಸ್ವಂತ ನಿಧಿ ಸೇರಿದಂತೆ ವರ್ಷಕ್ಕೆ ನೂರಾರು ಕೋಟಿ ರೂಪಾಯಿಗಳನ್ನು ರಸ್ತೆಗಳ ನಿರ್ಮಾಣಕ್ಕಾಗಿಯೇ ವೆಚ್ಚ ಮಾಡಲಾಗುತ್ತಿದೆ. ಅಲ್ಲಿ ಪಾದಚಾರಿಗಳು ನಿರಾಳವಾಗಿ ಹೆಜ್ಜೆ ಹಾಕಲು ಅನುವು ಮಾಡಿಕೊಡುವ ಪ್ರಸ್ತಾವಗಳೇ ಕಾಣಿಸುವುದಿಲ್ಲ. ರಸ್ತೆಗಳಿಗೆ ಡಾಂಬರು ಹಾಕುವುದು ಮತ್ತು ಕಾಂಕ್ರೀಟ್‌ ರಸ್ತೆಗಳ ನಿರ್ಮಾಣದ ಭರಾಟೆಯಲ್ಲಿ ಪಾದಚಾರಿಗಳ ಸಮಸ್ಯೆಗೆ ಪರಿಹಾರ ಕೊಡಿ ಎನ್ನುವ ಅಳಲನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲೇ ಮಹಾನಗರ ಪಾಲಿಕೆ ಆಡಳಿತ ವ್ಯವಸ್ಥೆ ಉಳಿದಿಲ್ಲ.

ತಲೆಕೆಳಗಾದ ಆದ್ಯತೆ: ಇಂಡಿಯನ್‌ ರೋಡ್‌ ಕಾಂಗ್ರೆಸ್‌ನ ಮಾನದಂಡಗಳು, ರಾಜ್ಯದ ನಗರ ಭೂ ಸಾರಿಗೆ ಪ್ರಾಧಿಕಾರದ ಮಾರ್ಗಸೂಚಿ ಸೇರಿದಂತೆ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳಲ್ಲೂ ಪಾದಚಾರಿಗಳ ಹಕ್ಕಿನ ರಕ್ಷಣೆ ಮತ್ತು ಅವರಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡುತ್ತವೆ.

ಆಯಾ ಸ್ಥಳದ ಸ್ವರೂಪಕ್ಕೆ ಅನುಗುಣವಾಗಿ 1.8 ಮೀಟರ್‌ನಿಂದ 4 ಮೀಟರ್‌ವರೆಗಿನ ವಿಸ್ತೀರ್ಣದ ಪಾದಚಾರಿ ಮಾರ್ಗ ನಿರ್ಮಿಸುವುದನ್ನು ನಿಯಮಗಳು ಕಡ್ಡಾಯಗೊಳಿಸಿವೆ. ಅಲ್ಲಿಯೂ ಪಾದಚಾರಿಗಳ ಓಡಾಟಕ್ಕೆ ಅಡೆತಡೆ ಉಂಟಾಗದಿರುವುದು, ಅಂಗವಿಕಲ ವ್ಯಕ್ತಿಗಳು ಸುಲಭವಾಗಿ ಮುಂದಕ್ಕೆ ಹೋಗಲು ಅನುಕೂಲವಾಗುವಂತೆ ಅಗತ್ಯ ಬದಲಾವಣೆಗಳನ್ನು ಮಾಡುವುದು, ಗಾಲಿ ಕುರ್ಚಿಯಲ್ಲೂ ಸರಾಗವಾಗಿ ತೆರಳಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂಬ ಅಂಶಗಳು ಮಾರ್ಗಸೂಚಿಯಲ್ಲಿವೆ.

ಆದರೆ, ಮಂಗಳೂರಿನ ಯಾವ ರಸ್ತೆಯಲ್ಲಿ ಹುಡುಕಿದರೂ ಐಆರ್‌ಸಿ ಮಾನದಂಡ ಅಥವಾ ನಗರ ಭೂ ಸಾರಿಗೆ ಪ್ರಾಧಿಕಾರದ ಮಾರ್ಗಸೂಚಿಗೆ ಸರಿಹೊಂದುವ ಒಂದೇ ಒಂದು ಪಾದಚಾರಿ ಮಾರ್ಗವೂ ಸಿಗುವುದಿಲ್ಲ. ನಿಯಮಗಳಿಗೆ ವಿರುದ್ಧವಾಗಿ ಪಾದಚಾರಿಗಳನ್ನು ಕೊನೆಯ ಆದ್ಯತೆಯಲ್ಲಿ ಪರಿಗಣಿಸುವುದನ್ನು ಎಲ್ಲೆಡೆ ಕಾಣಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !