ತ್ಯಾಜ್ಯ ನೀರು ಪೂರ್ಣ ಶುದ್ಧೀಕರಣ ಆಗುವವರೆಗೆ ಹೋರಾಟ ನಿಲ್ಲದು: ಆರ್.ಆಂಜನೇಯರೆಡ್ಡಿ

ಬುಧವಾರ, ಏಪ್ರಿಲ್ 24, 2019
24 °C
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ

ತ್ಯಾಜ್ಯ ನೀರು ಪೂರ್ಣ ಶುದ್ಧೀಕರಣ ಆಗುವವರೆಗೆ ಹೋರಾಟ ನಿಲ್ಲದು: ಆರ್.ಆಂಜನೇಯರೆಡ್ಡಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಬೆಂಗಳೂರಿನ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸಿ ಹರಿಸುವ ವರೆಗೂ ನಮ್ಮ ಕಾನೂನು ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯುಪಿಎ ಸರ್ಕಾರದಲ್ಲಿ ಸಂಸದರಾದ ಕೆ.ಎಚ್.ಮುನಿಯಪ್ಪ ಮತ್ತು ಎಂ.ವೀರಪ್ಪ ಮೊಯಿಲಿ ಅವರು ಸಚಿವರಾಗಿದ್ದ ವೇಳೆ ಬೆಂಗಳೂರಿನ ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಿಸಿ ಬಯಲು ಸೀಮೆ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಯೋಜನೆಯ ಪ್ರಸ್ತಾವಕ್ಕೆ ಅನುಮೋದನೆ ದೊರೆತಿತ್ತು. ಆದರೆ ಯೋಜನೆ ಅನುಷ್ಠಾನಗೊಳಿಸುವಾಗ ಕೇಂದ್ರದ ಮಾರ್ಗಸೂಚಿ ಗಾಳಿಗೆ ತೂರಿ ಮೊಂಡುತನದಿಂದ ಕಲುಷಿತ ನೀರು ಹರಿಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಮೂರನೇ ಹಂತದ ಶುದ್ದೀಕರಣ ಮಾಡುವ ತಂತ್ರಜ್ಞಾನ ನಮ್ಮ ದೇಶದಲ್ಲಿ ಇದ್ದರೂ ನಮ್ಮ ಜಿಲ್ಲೆಗಳಿಗೆ ಎರಡು ಹಂತದಲ್ಲಷ್ಟೇ ಶುದ್ಧೀಕರಣ ಮಾಡಬೇಕು ಎಂಬ ಹಠ ಯಾಕೆ? ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಉತ್ತರ ಕೊಡಬೇಕಾಗಿದೆ. ಈ ಯೋಜನೆ ಯಾವುದೋ ಟ್ರಸ್ಟ್ ಹಣದಿಂದ ಮಾಡುತ್ತಿಲ್ಲ. ರಾಜ್ಯದ ಜನರ ತೆರಿಗೆ ಹಣದಿಂದ ಅನುಷ್ಠಾನಗೊಳ್ಳುತ್ತಿದೆ. ಹೀಗಾಗಿ ನಮಗೆ ನೀರು ಕೊಡುವುದು ಎಷ್ಟು ಮುಖ್ಯವೋ ಒಂದೊಂದು ಹನಿಯೂ ಪರಿಶುದ್ಧವಾಗಿರುವುದು ಮುಖ್ಯ’ ಎಂದು ತಿಳಿಸಿದರು.

‘ಇತ್ತೀಚೆಗೆ ಕೋಲಾರದಲ್ಲಿ ಸಿದ್ದರಾಮಯ್ಯ ಅವರು ನಾವು ಶುದ್ಧೀಕರಣ ಮಾಡಿ ನೀರು ತರುತ್ತಿದ್ದೇವೆ. ಯಾರೋ ಕಿಡಿಗೇಡಿಗಳು ಕೆ.ಸಿ ಮತ್ತು ಎಚ್ಎನ್ ವ್ಯಾಲಿಗೆ ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿದ್ದಾರೆ. ಅದೇ ವೇದಿಕೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ ಮೇಲೆ ಮೂರನೇ ಹಂತದ ಶುದ್ಧೀಕರಣದ ಅವಶ್ಯಕತೆ ಇದೆ ಎನ್ನುತ್ತಾರೆ. ಇಂತಹ ವೈರುಧ್ಯದ ಹೇಳಿಕೆಗಳೇ ಇವತ್ತು ಜನರಿಗೆ ಗೊಂದಲ ಸೃಷ್ಟಿಸುತ್ತಿವೆ’ ಎಂದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 191 ಕೆರೆಗಳಿಗೆ ಕೆ.ಸಿ ಮತ್ತು ಎಚ್.ಎನ್ ವ್ಯಾಲಿಗಳಿಂದ ನೀರು ತರಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಆ ನೀರು ಯಾವ ಗುಣಮಟ್ಟದಿಂದ ಕೂಡಿದೆ ಎಂಬುದರ ಬಗ್ಗೆ ಯಾರೊಬ್ಬರೂ ಮುಕ್ತವಾಗಿ, ವೈಜ್ಞಾನಿಕವಾಗಿ ಚರ್ಚೆ ಮಾಡುತ್ತಿಲ್ಲ. ನಮ್ಮ ನೀರಿನ ವಿಚಾರವನ್ನು ಎಲ್ಲಿ ಚರ್ಚೆ ಮಾಡಬೇಕಾಗಿತ್ತೋ ಅಲ್ಲಿ ಚರ್ಚಿಸುವ ಸೌಜನ್ಯವನ್ನು ನಮ್ಮ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ತೋರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಭಾಗಕ್ಕೆ 20 ಟಿಎಂಸಿ ನೀರಿನ ಅವಶ್ಯಕತೆ ಇದೆ. ಅಷ್ಟು ನೀರನ್ನು ಎಲ್ಲಿಂದ ತರಬೇಕು? ಎಂದು ಸಮಗ್ರ ಚಿಂತನೆ ಮಾಡುವಲ್ಲಿ ನಮ್ಮ ಜನಪ್ರತಿನಿಧಿಗಳು ವಿಫಲರಾಗುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಪ್ರಣಾಳಿಕೆಯನ್ನು ನೋಡಿದಾಗ ಈ ಭಾಗದಲ್ಲಿ ಶಾಶ್ವತ ನೀರಾವರಿ ಜಾರಿ ವಿಷಯ ಮರೀಚಿಕೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜಲತಜ್ಞ ಪರಮಶಿವಯ್ಯ ಅವರ ವರದಿ ಶಿಫಾರಸುಗಳು ಜಾರಿಯಾದರೆ ಮಾತ್ರ ಈ ಭಾಗದ ಎಲ್ಲಾ ಕೆರೆಗಳಿಗೆ, ಹೊಲಗಳಿಗೆ, ಜೀವರಾಶಿಗೂ ಶುದ್ಧ ನೀರು ಸಿಗುತ್ತದೆ. ಹೀಗಾಗಿ ಶಾಶ್ವತ ನೀರಾವರಿ ಯೋಜನೆ ನಮ್ಮ ಬೇಡಿಕೆಯಾಗಿತ್ತು. ಆದರೆ ಇವತ್ತು ಪರಮಶಿವಯ್ಯ ಅವರ ವರದಿಯನ್ನು ರಾಜ್ಯ ಸರ್ಕಾರ ಸಮಾಧಿ ಮಾಡುವ ಕೆಲಸ ಮಾಡಿದೆ’ ಎಂದು ಆಕ್ರೋಶ ಹೊರಹಾಕಿದರು. ಶಾಶ್ವತ ಹೋರಾಟ ಸಮಿತಿ ಮುಖಂಡರಾದ ಲಕ್ಷ್ಮಯ್ಯ, ಮಳ್ಳೂರು ಹರೀಶ್, ನಾರಾಯಣಸ್ವಾಮಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !