ತತ್ವ ಪಾಲನೆಯೇ ನಿಜವಾದ ಗೌರವ: ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್

ಗುರುವಾರ , ಏಪ್ರಿಲ್ 25, 2019
21 °C
ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

ತತ್ವ ಪಾಲನೆಯೇ ನಿಜವಾದ ಗೌರವ: ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್

Published:
Updated:
Prajavani

ಚಿಕ್ಕಬಳ್ಳಾಪುರ: ‘ದೇಶಕ್ಕೆ ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಕೊಡುಗೆಯನ್ನು ಇಡೀ ಜಗತ್ತೇ ಇಂದು ಸ್ಮರಿಸುತ್ತಿದೆ. ಅಂತಹ ಮಹಾಪುರುಷರ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ಅವರಿಗೆ ನಿಜವಾಗಿ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹೇಳಿದರು.

ನಗರದ ಮೆಟ್ರಿಕ್‌ ನಂತರದ ಪದವಿ ಬಾಲಕರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜ್ಞಾನದ ಹರಿಕಾರರಾದ ಅಂಬೇಡ್ಕರ್‌ ಅವರು ವಿಶ್ವದ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಕುರಿತು ಆಳವಾಗಿ ಅಧ್ಯಯನ ನಡೆಸಿ, ಸಂವಿಧಾನ ರಚನೆ ಮಾಡುವ ಮೂಲಕ ಇಡೀ ವಿಶ್ವಕ್ಕೆ ಜ್ಞಾನವನ್ನು ಸಾರಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕುರಿತು ಆಲೋಚಿಸುವ ಆದರ್ಶ ಗುಣ ಅವರದಾಗಿತ್ತು. ಇವತ್ತು ನಮ್ಮ ಸಂವಿಧಾನವನ್ನು ಪ್ರಪಂಚದ ವಿವಿಧ ರಾಷ್ಟ್ರಗಳು ಅಳವಡಿಸಿಕೊಳ್ಳಲು ಮುಂದಾಗಿವೆ’ ಎಂದು ತಿಳಿಸಿದರು.

‘ಇತರ ದೇಶಗಳಿಗೆ ಹೋಲಿಸಿದಾಗ ನಮ್ಮ ದೇಶದ ಚುನಾವಣೆ ವ್ಯವಸ್ಥೆ ಮತ್ತು ಪ್ರಕ್ರಿಯೆ ಶಾಂತಿ ಮತ್ತು ಶಿಸ್ತಿನಿಂದ ಕೂಡಿರುತ್ತದೆ. ಸಂವಿಧಾನದ ಅನುಚ್ಛೇದ 324 ರಲ್ಲಿ ಅಂಬೇಡ್ಕರ್ ಅವರು ಚುನಾವಣೆ ಆಯೋಗದ ಸ್ಥಾಪನೆ ಕುರಿತು ಬರೆದಿದ್ದಾರೆ. ಅದರ ಅಡಿ ಚುನಾವಣಾ ಆಯೋಗಕ್ಕೆ ದೊರಕಿರುವ ವಿಶೇಷ ಅಧಿಕಾರದಿಂದ ಶಾಂತಿ ಮತ್ತು ಶಿಸ್ತು ಹಾಗೂ ಪಕ್ಷಪಾತವಿಲ್ಲದೇ ಚುನಾವಣೆ ವ್ಯವಸ್ಥೆಯನ್ನು ನಡೆಸಲಾಗುತ್ತಿದೆ’ ಎಂದರು.

‘ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ತಾತ್ವಿಕ ವಿಚಾರಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅಂಬೇಡ್ಕರ್ ಅವರು ಭಾರತೀಯ ಸಮಾಜವನ್ನು ಸಮಾನತೆಯ ತತ್ವದಲ್ಲಿ ಕಟ್ಟಲು ಪಣ ತೊಟ್ಟಿದ್ದರು. ಇದನ್ನು ವಿಶ್ವದ ಅನೇಕ ಉನ್ನತ ವಿದ್ಯಾಸಂಸ್ಥೆಗಳು ಗುರುತಿಸಿ ಇಂದಿಗೂ ಅವರನ್ನು ಗೌರವಿಸುತ್ತಿವೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಅವರು ಮತದಾನ ಜಾಗೃತಿ ಕುರಿತು ಚುನಾವಣಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ, ಡಿವೈಎಸ್ಪಿ ಪ್ರಭುಶಂಕರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತೇಜ್ ಆನಂದ್ ರೆಡ್ಡಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹನುಮಂತರಾಯಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಷಾದ್ರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ, ನಿಲಯ ಪಾಲಕರಾದ ಶ್ರೀನಿವಾಸ್, ಚನ್ನಪ್ಪ, ದಲಿತ ಮುಖಂಡರಾದ ಬಿ.ಎನ್ ಗಂಗಾಧರಪ್ಪ, ಸು.ಧಾ ವೆಂಕಟೇಶ್, ಕೇಶವ, ನರಸಿಂಹಪ್ಪ, ಶ್ರೀನಿವಾಸ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !