ಇಮ್ರಾನ್ –ರೈನಾ ಆಟ ’ಸೂಪರ್’: ಸಿಎಸ್‌ಕೆಗೆ ಜಯ

ಶುಕ್ರವಾರ, ಏಪ್ರಿಲ್ 19, 2019
22 °C
ಕೋಲ್ಕತ್ತ ನೈಟ್ ರೈಡರ್ಸ್‌ಗೆ ಮತ್ತೊಂದು ಆಘಾತ; ರವೀಂದ್ರ ಜಡೇಜ ಮಿಂಚು

ಇಮ್ರಾನ್ –ರೈನಾ ಆಟ ’ಸೂಪರ್’: ಸಿಎಸ್‌ಕೆಗೆ ಜಯ

Published:
Updated:
Prajavani

ಕೋಲ್ಕತ್ತ: ಇಮ್ರಾನ್‌ ತಾಹೀರ್ ಸ್ಪಿನ್ ಮೋಡಿಗೆ ಬಸವಳಿದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವು ಪುಟಿದೇಳದಂತೆ ಸುರೇಶ್ ರೈನಾ ಮತ್ತು ರವೀಂದ್ರ ಜಡೇಜ ನೋಡಿಕೊಂಡರು.

ಈಡನ್ ಗಾರ್ಡನ್‌ನಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಐದು ವಿಕೆಟ್‌ಗಳಿಂದ ಆತಿಥೇಯ ಕೆಕೆಆರ್ ವಿರುದ್ಧ ಗೆದ್ದಿತು.

ಟಾಸ್ ಗೆದ್ದ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಲೆಗ್‌ಸ್ಪಿನ್ನರ್ ಇಮ್ರಾನ್ ತಾಹೀರ್ (27ಕ್ಕೆ4) ಅವರ ಪರಿಣಾಮಕಾರಿ ದಾಳಿಯಿಂದ ಕೋಲ್ಕತ್ತ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 161 ರನ್ ಗಳಿಸಿತು. ಚೆನ್ನೈ ತಂಡವು 19.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 161 ರನ್ ಗಳಿಸಿತು.

ಆರಂಭಿಕ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ (82; 51ಎಸೆತ, 7ಬೌಂಡರಿ, 6 ಸಿಕ್ಸರ್), ನಿತೀಶ್ ರಾಣಾ, ರಾಬಿನ್ ಉತ್ತಪ್ಪ ಮತ್ತು ಸ್ಪೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್ (10;4ಎಸೆತ, 1ಬೌಂಡರಿ, 1ಸಿಕ್ಸರ್)  ಅವರ ವಿಕೆಟ್‌ಗಳನ್ನು ತಾಹೀರ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಎಲ್ಲ ತಂಡಗಳ ಎದುರು ಅಬ್ಬರಿಸಿರುವ ರಸೆಲ್ ಅವರನ್ನು ಕಟ್ಟಿಹಾಕಿದ್ದು ಚೆನ್ನೈ ತಂಡಕ್ಕೆ ಅನುಕೂಲವಾಯಿತು.

ರೈನಾ ಮಿಂಚು: ಐಪಿಎಲ್‌ನಲ್ಲಿ ಐದು ಸಾವಿರಕ್ಕೂ ಹೆಚ್ಚು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸುರೇಶ್ ರೈನಾ ಈ ಟೂರ್ನಿಯಲ್ಲಿ ಮೊದಲ ಅರ್ಧಶತಕ ಗಳಿಸಿದರು.

ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿಯೇ ಆರಂಭಿಕ ಬ್ಯಾಟ್ಸ್‌ಮನ್ ಶೇನ್ ವಾಟ್ಸನ್ (6) ಔಟಾದರು. ಆಗ ಕ್ರೀಸ್‌ಗೆ ಬಂದ ರೈನಾ ಎಚ್ಚರಿಕೆಯಿಂದ ಆಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.  ಹತ್ತು ಓವರ್‌ ಮುಗಿಯುವ ಮುನ್ನವೇ ಫಾಫ್ ಡುಪ್ಲೆಸಿ ಮತ್ತು ಅಂಬಟಿ ರಾಯುಡು ಡಗ್‌ಔಟ್ ಸೇರಿದರು.  ಕೇದಾರ್ ಜಾಧವ್ ಹನ್ನೆರಡು ಎಸೆತಗಳನ್ನು ಆಡುವಲ್ಲಿ ಸಫಲರಾದರು. ಹೋದ ಪಂದ್ಯದಲ್ಲಿ ಮಿಂಚಿದ್ದ ಮಹೇಂದ್ರಸಿಂಗ್ ಧೋನಿ (16 ರನ್) ಸುನಿಲ್ ನಾರಾಯಣ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆದರು.

ಈ ಸಂದರ್ಭದಲ್ಲಿ ರೈನಾ(58 ರನ್‌; 42 ಎಸೆತ) ಜೊತೆಗೂಡಿದ ರವೀಂದ್ರ ಜಡೇಜ (ಔಟಾಗದೆ 31; 17ಎಸೆತ, 5ಬೌಂಡರಿ) ಬಂಡೆಗಲ್ಲಿನಂತೆ ನಿಂತರು. ಕೊನೆಯ ಎರಡು ಓವರ್‌ಗಳಲ್ಲಿ ತಂಡಕ್ಕೆ ಗೆಲ್ಲಲು 23 ರನ್‌ಗಳ ಅಗತ್ಯವಿತ್ತು. ಆಗ 19ನೇ ಓವರ್‌ನಲ್ಲಿಯೇ ಜಡೇಜ ಮೂರು ಬೌಂಡರಿ ಬಾರಿಸಿ ಜಯವನ್ನು ಸುಲಭಗೊಳಿಸಿದರು.

ಇದರೊಂದಿಗೆ ಚೆನ್ನೈ ತಂಡವು ಎಂಟು ಪಂದ್ಯಗಳನ್ನು ಆಡಿ ಏಳರಲ್ಲಿ ಜಯಸಾಧಿಸಿದೆ. ಒಂದು ಸೋತಿದೆ. ಒಟ್ಟು 14 ಪಾಯಿಂಟ್ಸ್‌ಗಳಿಂದ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ. ಇನ್ನೂ ಆರು ಪಂದ್ಯಗಳಲ್ಲಿ ಆಡಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !