ಕಬ್ಬು ಬಾಕಿ ಹಣ ಪಾವತಿಗೆ ರೈತರ ಆಗ್ರಹ

ಶನಿವಾರ, ಏಪ್ರಿಲ್ 20, 2019
29 °C

ಕಬ್ಬು ಬಾಕಿ ಹಣ ಪಾವತಿಗೆ ರೈತರ ಆಗ್ರಹ

Published:
Updated:
Prajavani

ಮದ್ದೂರು: ತಾಲ್ಲೂಕಿನ ಕೊಪ್ಪದ ಎನ್.ಎಸ್.ಎಲ್. ಷುಗರ್ಸ್ ಹಾಗೂ ಕೆ.ಎಂ.ದೊಡ್ಡಿಯ ಚಾಮ್ ಷುಗರ್ಸ್ ಕಾರ್ಖಾನೆಗಳು ಕಬ್ಬಿನ ಬಾಕಿ ಹಣವನ್ನು ಪಾವತಿಸದೆ ಸತಾಯಿಸುತ್ತಿವೆ. ಕೂಡಲೇ ಬಾಕಿ ಹಣ ಪಾವತಿಸಬೇಕು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್‌ ಅಧ್ಯಕ್ಷ ದೇಶಹಳ್ಳಿ ಆರ್.ಮೋಹನ್ ಕುಮಾರ್ ಆಗ್ರಹಿಸಿದರು.

ಇಲ್ಲಿನ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಕಬ್ಬು ಬೆಳೆಗಾರರ ಹಿತ ಕಾಯುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ತಾಲ್ಲೂಕು ಆಡಳಿತ ಅಸಮರ್ಥವಾಗಿದೆ. ಕೂಡಲೇ ಕಬ್ಬಿನ ಬಾಕಿ ಹಣಕ್ಕೆ ಶೇ 18ರಷ್ಟು ಬಡ್ಡಿ ನೀಡಬೇಕು, ಮುಖ್ಯಮಂತ್ರಿಗಳು ಚುನಾವಣೆಗೆ ತೋರುವ ಆಸಕ್ತಿಯನ್ನು ಕಬ್ಬಿನ ಬಾಕಿ ಹಣ ಕೊಡಿಸುವುದಕ್ಕೂ ತೋರಿಬೇಕು ಎಂದು ಒತ್ತಾಯಿಸಿದರು.

ಕಬ್ಬು ಸರಬರಾಜು ಮಾಡಿದ 14 ದಿನಗಳಲ್ಲಿ ಬಟವಾಡೆ ಮಾಡಬೇಕು ಎಂದು ಕರಾರಿನಲ್ಲಿದೆ. ಆದರೂ ಕಾರ್ಖಾನೆಗಳು ಇದರತ್ತ ವಿಳಂಬ ಧೋರಣೆಯನ್ನು ಮುಂದುವರಿಸುತ್ತಿವೆ. ಆದ್ದರಿಂದ ಕೂಡಲೇ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಲ್ಲೂಕಿನ ಅಜ್ಜಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕಾರ್ಯದ ವೇಳೆ ಗ್ರಾಮದ ರೈತರೊಬ್ಬರು ಕಬ್ಬಿನ ಬಾಕಿ ಕೊಡಿಸಲು ಮನವಿ ಮಾಡಿದಾಗ ಆದೇ ಗ್ರಾಮದ ಕೆಲವರು ಹಲ್ಲೆ ಮಾಡಿರುವುದು ಖಂಡನೀಯ ಎಂದು ತಿಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್‌ನ ಉಪಾಧ್ಯಕ್ಷ ಕೊಟ್ಟಿಗೆ ಪುಟ್ಟಸ್ವಾಮಿ, ತಾಲ್ಲೂಕು ಉಪಾಧ್ಯಕ್ಷ ಕುಬೇರ, ದೇಶಹಳ್ಳಿ ಬೋರಣ್ಣ, ಬ್ಲಾಕ್ ಅಧ್ಯಕ್ಷ ಲಿಂಗಯ್ಯ, ನಾಗೇಶ್, ಅರವಿಂದ್, ಕುದರಗುಂಡಿ ರಮೇಶ್, ತೊರೆಶೆಟ್ಚಿಹಳ್ಳಿ ನಾಗೇಗೌಡ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !