ದಲಿತರ ಅಭಿವೃದ್ಧಿಗೆ ಶ್ರಮಿಸಿದ ಮೋದಿ: ಕೇಂದ್ರ ಸಚಿವ ರಾಮದಾಸ್‌ ಅಠಾವಳೆ

ಮಂಗಳವಾರ, ಏಪ್ರಿಲ್ 23, 2019
27 °C
ಬಿಜೆಪಿ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡರ ಪರ ಮತ ಯಾಚನೆ

ದಲಿತರ ಅಭಿವೃದ್ಧಿಗೆ ಶ್ರಮಿಸಿದ ಮೋದಿ: ಕೇಂದ್ರ ಸಚಿವ ರಾಮದಾಸ್‌ ಅಠಾವಳೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯ ಪಾಲನೆ ಮೂಲಕ ದಲಿತರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹೀಗಾಗಿ ದಲಿತರು ಈ ಬಾರಿಗೆ ಬಿಜೆಪಿಗೆ ಮತ ನೀಡುವ ಮೂಲಕ ಮತ್ತೊಮ್ಮೆ ಮೋದಿ ಅವರ ಕೈಬಲಪಡಿಸಬೇಕು’ ಎಂದು ಭಾರತೀಯ ರಿಪಬ್ಲಿಕನ್‌ ಪಕ್ಷ (ಆರ್‌ಪಿಐ) ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವ ರಾಮದಾಸ್‌ ಅಠಾವಳೆ ಹೇಳಿದರು.

ನಗರದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡರ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಆರ್‌ಪಿಐ ಅಂಬೇಡ್ಕರ್‌ ಅವರು ಕಟ್ಟಿದ ಪಕ್ಷ. ಅವರು ನೆಹರೂ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು. ಅಂಬೇಡ್ಕರ್ ಅವರ ಬಳಿಕ ಆರ್‌ಪಿಐನಿಂದ ಯಾರೂ ಸಚಿವರಾಗಿರಲಿಲ್ಲ. ಆದರೆ ಮೋದಿ ಅವರೇ ಮುಂದಾಗಿ ನಮ್ಮ ಪಕ್ಷವನ್ನು ಆಹ್ವಾನಿಸಿ, ಸಚಿವ ಸಂಪುಟದಲ್ಲಿ ನನ್ನನ್ನು ಸಚಿವನನ್ನಾಗಿ ನೇಮಿಸಿಕೊಂಡರು’ ಎಂದು ತಿಳಿಸಿದರು.

‘ಮೋದಿ ಅವರು ದಲಿತರ ಹಕ್ಕುಗಳನ್ನು ಕಾಪಾಡಿದ್ದಾರೆ. ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿಹಾರ ಕಾಯ್ದೆ ಕೇಂದ್ರದಲ್ಲಿ ಅವಗಣನೆಗೆ ಒಳಗಾಗಿತ್ತು. ಮೋದಿ ಅವರು ಬಂದ ಬಳಿಕ ಆ ಕಾಯ್ದೆಗೆ ಬಲ ತುಂಬಿದ್ದಾರೆ. ಪರಿಶಿಷ್ಟರ ಜಮೀನು ಪರಾಭಾರೆ ನಿಷೇಧ ಕಾಯ್ದೆಯಲ್ಲಿ (ಪಿಟಿಸಿಎಲ್) ಸುಧಾರಣೆ ತಂದಿದ್ದಾರೆ. ಆದರೆ ಕಾಂಗ್ರೆಸ್‌ ದಲಿತ ವರ್ಗದ ಶೋಷಣೆ ಮಾಡಿದೆ ವಿನಾ ಉದ್ಧಾರ ಮಾಡಿಲ್ಲ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಬಿ.ಎನ್.ಬಚ್ಚೇಗೌಡರು ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ವೀರಪ್ಪ ಮೊಯಿಲಿ ಅವರು ಬರೀ ಸುಳ್ಳು ಹೇಳುವ ಮೂಲಕ ದಿನ ಕಳೆದಿದ್ದಾರೆ. ಈ ಬಾರಿ ಮೊಯಿಲಿ ಸೋಲುತ್ತಾರೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅದರಲ್ಲಿ ಬಚ್ಚೇಗೌಡರು ಸಚಿವರಾಗುತ್ತಾರೆ’ ಎಂದು ಆಶಯ ವ್ಯಕ್ತಪಡಿಸಿದರು.

‘ಮೋದಿ ಅವರು ದಲಿತ ವಿರೋಧಿ ಎನ್ನುವುದು ಸತ್ಯಕ್ಕೆ ದೂರವಾದ ಆರೋಪ. ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂಬುದು ಬರೀ ಸುಳ್ಳು. ಸಂವಿಧಾನ ಬದಲಾವಣೆ ಮಾಡುವ ಹಕ್ಕು ಯಾರಿಗೂ ಇಲ್ಲ. ಸಂವಿಧಾನದಿಂದಲೇ ಮೋದಿ ಸೇರಿ ಎಲ್ಲರೂ ಪ್ರಧಾನಿ, ಮಂತ್ರಿ ಮತ್ತೊಂದು ಎಲ್ಲಾ ಆಗಿದ್ದಾರೆ ಎನ್ನುವ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ.

ಆರ್‌ಪಿಐ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ‘ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನವರು ಅಭಿವೃದ್ಧಿಗಿಂತ ಲೂಟಿ ಹೊಡೆದದ್ದೇ ಹೆಚ್ಚು. ಕಳೆದ 70 ವರ್ಷಗಳಿಂದ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಯಾವುದೇ ಕೊಡುಗೆ ನೀಡಿಲ್ಲ. ಆದ್ದರಿಂದ ಪ್ರಸ್ತುತ ಚುನಾವಣೆಯಲ್ಲಿ ನಾವು ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಈ ಬಾರಿ ಆರ್‌ಪಿಐ 5 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. 22 ಕ್ಷೇತ್ರಗಳಲ್ಲಿ ಬಿಜೆಪಿಗೆ, ಮಂಡ್ಯದಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡುತ್ತಿದೆ. ಈ ಚುನಾವಣೆ ಮಹಾಘಟಬಂಧನ್ ಮತ್ತು ಕಾಂಗ್ರೆಸ್‌ಗೆ ತೀವ್ರ ಭ್ರಮನಿರಸನ ಉಂಟು ಮಾಡಲಿದೆ’ ಎಂದರು.

ಆರ್‌ಪಿಐ ಪಕ್ಷದ ಜಿಲ್ಲಾ ಅಧ್ಯಕ್ಷ ವೆಂಕಟರಮಣಪ್ಪ, ಗೌರವ ಅಧ್ಯಕ್ಷ ಬಿ.ಎಚ್. ನರಸಿಂಹಪ್ಪ, ಬಿಜೆಪಿ ಮುಖಂಡ ಈಶ್ವರಪ್ಪ, ಪ್ರಕಾಶ್, ಪಿಳ್ಳಾಂಚನಪ್ಪ, ಅಶ್ವತ್ಥಪ್ಪ, ಗುಪ್ತಾ, ರಾಮಣ್ಣ ಉಪಸ್ಥಿತರಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !