ಮೋದಿ ಗುಜರಾತ್‌ಗೆ ವಾಪಸ್‌ ಹೋಗುವುದು ಸತ್ಯ: ಚಂದ್ರಬಾಬು ನಾಯ್ಡು

ಮಂಗಳವಾರ, ಏಪ್ರಿಲ್ 23, 2019
27 °C
ನಿಖಿಲ್‌ ಪರ ಪ್ರಚಾರ

ಮೋದಿ ಗುಜರಾತ್‌ಗೆ ವಾಪಸ್‌ ಹೋಗುವುದು ಸತ್ಯ: ಚಂದ್ರಬಾಬು ನಾಯ್ಡು

Published:
Updated:
Prajavani

ಮಂಡ್ಯ: ‘ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರುವುದು ಎಷ್ಟು ಸತ್ಯವೋ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ವಾಪಸ್‌ ತೆರಳುವುದೂ ಅಷ್ಟೇ ಸತ್ಯ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಟಿ.ಎನ್‌.ಚಂದ್ರಬಾಬುನಾಯ್ಡು ಹೇಳಿದರು.

ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಸೋಮವಾರ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಪರ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಪ್ರಧಾನಮಂತ್ರಿಗಳು ಪ್ರಜಾಪ್ರಭುತ್ವ ತತ್ವದಡಿ ಚುನಾವಣೆ ನಡೆಸುತ್ತಿಲ್ಲ. ಸಿಬಿಐ, ಇಡಿ, ಐಟಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ವಿರೋಧಿಗಳನ್ನು ಹೆದರಿಸುವ ತಂತ್ರ ರೂಪಿಸುತ್ತಿದೆ. ವಿದ್ಯುನ್ಮಾನ ಮತ ಯಂತ್ರಗಳ ಮೇಲೆ ಈಗಲೂ ನಮಗೆ ವಿಶ್ವಾಸವಿಲ್ಲ. ಮತದಾರರು ಮತ ಚಲಾವಣೆ ಮಾಡಿದ ನಂತರ ಕಡ್ಡಾಯವಾಗಿ ವಿವಿ ಪ್ಯಾಟ್‌ ಪರಿಶೀಲನೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಪ್ರಧಾನಮಂತ್ರಿ ಈವರೆಗೂ ಒಂದೂ ಪತ್ರಿಕಾಗೋಷ್ಠಿ ಮಾಡಿಲ್ಲ. ಅಭಿವೃದ್ಧಿಯ ಬಗ್ಗೆ ಹೇಳಲು ಏನೂ ಇಲ್ಲ. ಪಾಕಿಸ್ತಾನ ಪ್ರಧಾನ ಮಂತ್ರಿ ಕೂಡ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹೇಳಿಕೆ ನೀಡಿದ್ದಾರೆ. ಪಾಕ್‌ ಪಿ.ಎಂ, ಭಾರತ ಪಿ.ಎಂ ಇಬ್ಬರೂ ಡರ್ಟಿ ಪಾಲಿಟಿಕ್ಸ್‌ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದರೆ ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಾರೆ. ಎಲ್ಲರೂ ಬಿಜೆಪಿ ವಿರುದ್ಧ ಮತ ಚಲಾವಣೆ ಮಾಡಿ ಕೋಮುವಾದಿ ಸರ್ಕಾರವನ್ನು ಕಿತ್ತೊಗೆಯಬೇಕು. 2019ರ ಚುನಾವಣೆ ದೇಶದಲ್ಲಿ ಅತೀ ಮುಖ್ಯ ಚುನಾವಣೆಯಾಗಿದ್ದು ದೇಶದಲ್ಲಿ ಬದಲಾವಣೆ ತರಬೇಕು’ ಎಂದರು.

‘ಕಳೆದೊಂದು ತಿಂಗಳಿಂದ ನಾನು ಬಹಳ ಕಷ್ಟ ಅನುಭವಿಸಿದ್ದೇನೆ. ಇಲ್ಲಿಗೆ ಬಂದಾಗ ನನ್ನ ನೋವು ಮಾಯವಾಗಿದೆ’ ಎಂದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು ತೆಲುಗು ಜನರ ಅಚ್ಚುಮೆಚ್ಚಿನ ಕೃಷ್ಣ ದೇವರಾಯನನ್ನು ಸ್ಮರಿಸಿದರು. ದೇವೇಗೌಡರ ಮೊಮ್ಮಗ, ಜಾಗ್ವಾರ್‌ ಚಿತ್ರದ ನಾಯಕ ನಿಖಿಲ್‌ ಪರ ಮತಯಾಚನೆ ಮಾಡಲು ಬಂದಿದ್ದೇನೆ ಎಂದರು. ‘ನಮ್ಮ ನಾಯಕ ಎನ್‌ಟಿಆರ್‌ಗೆ ವರನಟ ಡಾ.ರಾಜ್‌ಕುಮಾರ್‌ ಎಂದರೆ ಬಹಳ ಇಷ್ಟ. ಮೈಸೂರು–ಬೆಂಗಳೂರು ನಗರಗಳೆಂದರೆ ತೆಲುಗು ಜನರಿಗೆ ಇಷ್ಟ. ಸರ್‌.ಎಂ.ವಿಶ್ವೇಶ್ವರಯ್ಯ ಕಟ್ಟಿಸಿದ ಕೆಆರ್‌ಎಸ್‌ ಜಲಾಶಯ ಕನ್ನಡಿಗರಿಗೆ ವರದಾನವಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವದಲ್ಲೇ ಮನ್ನಣೆ ಪಡೆದಿದೆ’ ಎಂದರು.

ನಂತರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಂಧ್ರ ಮುಖ್ಯಮಂತ್ರಿಗೆ ಧನ್ಯವಾದ ಹೇಳಿದರು. ಕಾರ್ಯಕ್ರಮಕ್ಕೂ ಮೊದಲು  ಪೈಲಟ್‌ ಸರ್ಕಲ್‌ನಿಂದ ಪಾಂಡವ ಕ್ರೀಡಾಂಗಣದವರೆಗೆ ಬೃಹತ್‌ ರ‍್ಯಾಲಿ ನಡೆಯಿತು. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !